ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

15 ಅಂಶ; ಕಾಮಗಾರಿಗಳಿಗೆ ಅಂಕುಶ

Vishwanath S
Updated On : 18 Jan 2014, 2:02 am

ಕೋಲಾರ: ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತಂದ 15 ಜನಪರ ಕಾಮಗಾರಿಗಳು ನಿರೀಕ್ಷಿತ ಪ್ರಮಾಣದಲ್ಲಿ ಗುರಿ ಮುಟ್ಟುವಲ್ಲಿ ವಿಫಲವಾಗಿವೆ.
2013-14ನೇ ಸಾಲಿನ ಆಯವ್ಯಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗ್ರಾಮೀಣಾಭಿವೃದ್ಧಿಗೆ 15 ಯೋಜನೆಗಳನ್ನು ಪ್ರಕಟಿಸಿ ಕಳೆದ ಅಕ್ಟೋಬರ್ 28ರಂದು ಕಾಮಗಾರಿಗಳಿಗೆ ಚಾಲನೆ ನೀಡಿದ್ದರು.
ನಿರ್ಲಕ್ಷ್ಯ: ರೈತರ ಕಣ, ನಮ್ಮ ಹಳ್ಳಿ ನಮ್ಮ ನೀರು, ನಮ್ಮ ಹೊಲ ನಮ್ಮ ದಾರಿ,ನಮ್ಮೂರ ಕೆರೆ, ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ಮನೆಗೊಂದು ಶೌಚಾಲಯ, ಸ್ಮಶಾನ ಅಭಿವೃದ್ಧಿ, ಆಟದ ಮೈದಾನ,ಅರಣ್ಯೀಕರಣ ಸೇರಿದಂತೆ 15 ಕಾರ್ಯಕ್ರಮಗಳನ್ನು ಗ್ರಾಮೀಣಾಭಿವೃದ್ಧಿಗಾಗಿ ಜಾರಿಗೆ ತರಲಾಗಿತ್ತು. ಬರಪೀಡಿತ ಕೋಲಾರ ಜಿಲ್ಲೆಗೆ ಈ ಎಲ್ಲ ಯೋಜನೆಗಳು ವರದಾನವಾಗಿದ್ದರೂ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳಲ್ಲಿನ ಇಚ್ಛಾಶಕ್ತಿಯ ಕೊರತೆಯಿಂದಾಗಿ ಗುರಿ ಸಾಧನೆಯಲ್ಲಿ ಮುಂಚೂಣಿಯಲ್ಲಿರುವುದಕ್ಕೆ ಸಾಧ್ಯವಾಗಿಲ್ಲ.
ಜ.7ರಂದು ಜಿಲ್ಲೆಗೆ ಭೇಟಿ ನೀಡಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ್ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ ಕಳಪೆ ಸಾಧನೆಗೆ ಅತೃಪ್ತಿ ವ್ಯಕ್ತವಡಿಸಿದ್ದರೂ ಕಾಮಗಾರಿಗಳ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ನಡೆದಿಲ್ಲ.
ಕೆರೆ, ಸ್ಮಶಾನದ ಅಭಿವೃದ್ಧಿಗೆ ಒತ್ತುವರಿ ಅಡ್ಡಿ, ಆಟದ ಮೈದಾನಕ್ಕೆ ಮಾಲೂರು ಹೊರತುಪಡಿಸಿ ಉಳಿದ ತಾಲೂಕುಗಳಲ್ಲಿ ಭೂಮಿ ಗುರುತಿಸಲು ನಿರ್ಲಕ್ಷ್ಯ, ಶೌಚಾಲಯಗಳ ನಿರ್ಮಾಣಕ್ಕೆ ಪಿಡಿಒ, ತಾಪಂ ಅಧಿಕಾರಿಗಳು ಸಮರೋಪಾದಿಯಲ್ಲಿ ಕಾರ್ಯಕ್ರಮ ಹಾಕಿಕೊಳ್ಳದಿರುವುದನ್ನು ಗಮನಿಸಿದ ಸಚಿವ ಎಚ್.ಕೆ. ಪಾಟೀಲ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.
ಕಾಮಗಾರಿ ಏನೇನು ನಡೆದಿಲ್ಲ: ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರಿಗೆ ಅಧಿಕಾರಿಗಳು ನೀಡಿದ ಮಾಹಿತಿಯಲ್ಲಿ ಜಿಲ್ಲೆಯ 855 ಕೆರೆಗಳು, ಗೋಕಟ್ಟೆಗಳ ಅಭಿವೃದ್ಧಿಯಲ್ಲಿ ಕೇವಲ 256 ಕೆರೆಗಳ ಅಭಿವೃದ್ಧಿ ತೋರಿಸಲಾಗಿದೆ. ವೈಯುಕ್ತಿಕ ಶೌಚಾಲಯಗಳು 60,913 ನಿರ್ಮಿಸಲು ನಿಗದಿಪಡಿಸಿದ್ದ ಗುರಿಯಲ್ಲಿ 9888 ಮಾತ್ರ ನಿರ್ಮಿಸಿರುವುದಾಗಿ ತಿಳಿಸಿದ್ದಾರೆ. ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ 1144 ಕಾಮಗಾರಿಗಳ ಪೈಕಿ ಕೇವಲ 226 ಸಾಧನೆ ಮಾಡಲಾಗಿದೆ.
ಸ್ಮಶಾನದ ಅಭಿವೃದ್ಧಿಗಾಗಿ ಜಿಲ್ಲೆಗೆ 263 ಕಾಮಗಾರಿಗಳು ಗುರಿ ನೀಡಿದ್ದು, 55 ಮಾತ್ರ ಮುಕ್ತಾಯಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಆಟದ ಮೈದಾನ ಕಲ್ಪಿಸಲು ಪ್ರತಿ ಗ್ರಾಪಂಗೆ ಕನಿಷ್ಠ 2 ರಂತೆ ಜಿಲ್ಲೆಯಲ್ಲಿ 928 ಆಟದ ಮೈದಾನಗಳನ್ನು ಮಾಡಿಕೊಡಲು ಗುರಿ ನೀಡಿದ್ದರೂ ಕೇವಲ 49 ಆಟದ ಮೈದಾನಗಳು ಪೂರ್ಣಗೊಂಡಿರುವುದಾಗಿ ತಿಳಿಸಲಾಗಿದೆ.
ಶುದ್ಧ ಕುಡಿಯುವ ನೀರು ಒದಗಿಸಲು 349 ಘಟಕಗಳನ್ನು ಸ್ಥಾಪಿಸಿಲು ನೀಡಿದ್ದ ಗುರಿಯಲ್ಲಿ 36 ಮುಗಿಸಿದ್ದು, ಕೆನರಾ ಬ್ಯಾಂಕಿನಿಂದ 208 ಘಟಕಗಳ ನಿರ್ಮಾಣಕ್ಕೆ ಭರವಸೆ ಸಿಕ್ಕಿತ್ತಾದರೂ ಗುರಿ ಸಾಧನೆಯಲ್ಲಿ ಪ್ರಗತಿ ಕಂಡುಬಂದಿಲ್ಲ.
ಅರಿವು ಮೂಡಿಸಲಿಲ್ಲ: ರಾಗಿ, ಬತ್ತ, ಜೋಳವನ್ನು ಒಕ್ಕಣೆ ಮಾಡಲು 272 ಕಣಗಳ ನಿರ್ಮಾಣಕ್ಕೆ ಉದ್ದೇಶಿಸಲಾಗಿದ್ದು, ಕೇವಲ 37 ಸಾಧನೆ ಮಾಡಲಾಗಿದೆ. ರೈತರು ರಸ್ತೆಗಳಲ್ಲಿ ಒಕ್ಕಣೆ ಮಾಡುತ್ತಿರುವುದರಿಂದ ಆಹಾರ ಕಲಬೆರಕೆ ಆಗಲು ಕಾರಣವಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ರಸ್ತೆಯಲ್ಲಿ ಕಣ ಮಾಡುವವರಿಗೆ ಅರಿವು ಮೂಡಿಸುವ ಮೂಲಕ ರೈತರ ಹೊಲದಲ್ಲೇ ಕಣ ನಿರ್ಮಾಣಕ್ಕೆ ಪ್ರೋತ್ಸಾಹ ಮತ್ತು ಉತ್ತೇಜನ ನೀಡಬೇಕು ಎಂದು ಸೂಚಿಸಲಾಗಿತ್ತು.
ಸಚಿವ ಎಚ್.ಕೆ. ಪಾಟೀಲ್ ಅವರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಫೆಬ್ರವರಿ 15 ರೊಳಗೆ ಗುರಿ ಸಾಧಿಸುವಂತೆ ಹೇಳಿ ಹೋಗಿದ್ದಾರೆ. ಸೂಚನೆಯಂತೆ ಬಾಕಿ ಕಾಮಗಾರಿಗಳು ಮುಗಿಯಲು ಇನ್ನು ಒಂದು ತಿಂಗಳು ಮಾತ್ರ ಬಾಕಿ ಉಳಿದಿದ್ದು ಅಧಿಕಾರಿಗಳು ಸಮರೋಪಾದಿಯಲ್ಲಿ ಕೆಲಸ ಮಾಡಿದರೂ ಗುರಿ ತಲುಪುವುದು ಸುಲಭದ ಮಾತಲ್ಲ.
ಸಚಿವರ ಭೇಟಿಯ ನಂತರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಜಿಪಂ ಸಾಮಾನ್ಯ ಸಭೆಯಲ್ಲೂ 15 ಕಾಮಗಾರಿಗಳು ಜಿಲ್ಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧನೆ ಆಗದಿರುವ ಬಗ್ಗೆ ಚರ್ಚಿಸಲಾಗಿದೆ.
ಫೆಬ್ರವರಿ ಅಂತ್ಯಕ್ಕೆ ಗುರಿ ಸಾಧಿಸಲೇಬೇಕೆಂದು ತಾಕೀತು ಮಾಡಿದ್ದಾರೆ. ಆದರೆ, ಜಿಪಂ ಸಿಇಒ ಜುಲ್ಫಿಖರ್ ಉಲ್ಲಾ ಅವರ ವರ್ಗಾವಣೆ, ಸರ್ಕಾರಿ ರಜೆ ದಿನಗಳು ಹಾಗೂ ಅಧಿಕಾರಿಗಳಲ್ಲಿ ನಿವಾರಣೆ ಆಗದಿರುವ ಗೊಂದಲಗಳಿಂದಾಗಿ ಕಾಮಗಾರಿಗಳು ಚುರುಕುಗೊಂಡಿಲ್ಲ.
ಜ.20ಕ್ಕೆ ಜಿಲ್ಲೆಗೆ ಆಗಮಿಸಲಿರುವ ಸಮಾಜ ಕಲ್ಯಾಣ ಇಲಾಖೆಯ ಸಚಿವರು ನರೇಗಾ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪ.ಪಂಗಡಕ್ಕೆ ರೂಪಿಸಿರುವ ಯೋಜನೆಗಳು ಸಕಾಲದಲ್ಲಿ ಅನುಷ್ಠಾನಕ್ಕೆ ತರಲು ಪ್ರಯತ್ನಿಸಬೇಕಾಗಿದೆ. ಜ.23ಕ್ಕೆ ಶ್ರೀನಿವಾಸಪುರಕ್ಕೆ ಭೇಟಿ ನೀಡಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಿಲ್ಲೆಯ ಅಭಿವೃದ್ಧಿ ಬಗ್ಗೆ ತಾವೇ ರೂಪಿಸಿರುವ 15 ಯೋಜನೆಗಳು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳ್ಳುವುದಕ್ಕೆ ಚಾಟಿ ಬೀಸಬೇಕಾಗಿದೆ.
ಗ್ರಾಮೀಣಾಭಿವೃದ್ಧಿ ಸಚಿವರು ಜಿಲ್ಲೆಯ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಗುರಿ ಸಾಧನೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿರುವುದರಿಂದ ಗಂಭೀರವಾಗಿ ಪರಿಗಣಿಸಿದ್ದೇನೆ. ಜಿಪಂ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿ 15 ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕೆಂದು ತಿಳಿಸಿದ್ದೇನೆ
-ತೂಪಲ್ಲಿ ನಾರಾಯಣಸ್ವಾಮಿ, ಜಿಪಂ ಅಧ್ಯಕ್ಷರು


-ಪಾ.ಶ್ರೀ. ಅನಂತರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement