ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

5ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಾಗೇಂದ್ರ ಬಾಬು ಆಯ್ಕೆ

Vishwanath S
Updated On : 18 Jan 2014, 2:02 am

ಚಿಕ್ಕಬಳ್ಳಾಪುರ: ಮುಂದಿನ ತಿಂಗಳು ಫೆಬ್ರವರಿಯಲ್ಲಿ ನಡೆಯಲಿರುವ ತಾಲೂಕು ಮಟ್ಟದ 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಹಿರಿಯ ಪತ್ರಕರ್ತ, ಸಾಹಿತಿ ಟಿ.ಎಸ್.ನಾಗೇಂದ್ರ ಬಾಬುರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ನಗರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಪಿ.ನವಮೋಹನ್ ಅಧ್ಯಕ್ಷತೆಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಪೂರ್ವ ಸಿದ್ಧತಾ ಸಭೆಯಲ್ಲಿ ಸಮ್ಮೇಳನ ಅಧ್ಯಕ್ಷರ ಆಯ್ಕೆಯ ಬಗ್ಗೆ ಚರ್ಚೆ ನಡೆಸಲಾಯಿತು. ಸಾಹಿತಿ ಇಂದುಮತಿ, ಪಂಚಗಿರಿ ಬೋಧನಾ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಅಂಬಿಕಮ್ಮ, ಕಸಾಪ ಹಿರಿಯ ಸದಸ್ಯ ಎಸ್.ಶಿವರಾಂ ಮತ್ತು ಹಿರಿಯ ಪತ್ರಕರ್ತ ಟಿ.ಎಸ್.ನಾಗೇಂದ್ರ ಬಾಬು ಅವರ ಹೆಸರುಗಳು ಅಧ್ಯಕ್ಷರಾಗಿ ಆಯ್ಕೆ ಮಾಡಲು ಪ್ರಸ್ತಾಪವಾಯಿತು. ಆದರೆ, ಸಭೆಯಲ್ಲಿದ್ದವರು ಟಿ.ಎಸ್.ನಾಗೇಂದ್ರ ಬಾಬುರವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಒಕ್ಕೂರಲ ಅಭಿಪ್ರಾಯವನ್ನು ತಿಳಿಸಿದರು.
ಇದೀಗ ತಾಲೂಕಿನಲ್ಲಿ 5ನೇ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. 4ನೇ ಸಮ್ಮೇಳನ ಸಾಹಿತಿ ಗೋಪಾಲಗೌಡ ಕಲ್ವಮಂಜಲಿ, 3ನೇ ಸಮ್ಮೇಳನ ಅಧ್ಯಕ್ಷತೆಯನ್ನು ಪ್ರೊ.ಕೋಡಿರಂಗಪ್ಪ ವಹಿಸಿದ್ದರು. 5ನೇ ಸಮ್ಮೇಳನವನ್ನು ಟಿ.ಎಸ್.ನಾಗೇಂದ್ರ ಬಾಬುರವರ ಅಧ್ಯಕ್ಷತೆಯಲ್ಲಿ ಫೆ.21ರಂದು ಇಲ್ಲವೇ ಫೆ.22ರಂದು ನಡೆಸಲು ಯೋಜನೆಯನ್ನು ರೂಪಿಸಿದ್ದು ಒಟ್ಟಾರೆ ಅದ್ಧೂರಿಯಾಗಿ ಸಮ್ಮೇಳನ ನಡೆಯಬೇಕೆಂಬ ಅಭಿಪ್ರಾಯ ಸಭೆಯಲ್ಲಿ ಕೇಳಿ ಬಂತು.  
ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳಾನಂದನಾಥ ಸ್ವಾಮೀಜಿಯವರನ್ನು ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ವಹಿಸಲು ಕೋರುವುದು. ಸಮ್ಮೇಳನದ ಭಾಗವಾಗಿ ಮೊದಲಿಗೆ ನಗರದ ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆಯಲ್ಲಿ ಸಮ್ಮೇಳನಾಧ್ಯಕ್ಷರನ್ನು ಕರೆತರುವುದು, ಕವಿಗೋಷ್ಠಿಯ ಮೂಲಕ ಯುವ ಕವಿಗಳನ್ನು ಪರಿಚಯಿಸುವುದು, ಇಂದಿನ ಶಿಕ್ಷಣ ವ್ಯವಸ್ಥೆಗಳ ಕುರಿತು ಚರ್ಚಾಕೂಟಗಳನ್ನು ಕೈಗೊಳ್ಳುವುದು, ಹಿರಿಯ ಸಾಹಿತಿಗಳು, ಕನ್ನಡ ಕಲಾವಿದರು, ಹೋರಾಟಗಾರರನ್ನು ಸಮ್ಮೇಳನದಲ್ಲಿ ಸನ್ಮಾನಿಸುವುದು ಸೇರಿದಂತೆ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ನಾಟಕ ಸಂಪ್ರದಾಯಗಳಿಗೆ ಮರುಜೀವ ತರುವ ಸಲುವಾಗಿ ನಾಟಕ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಮಾ.ಹಿರಣ್ಣಯ್ಯ ಅವರನ್ನು ಆಹ್ವಾನಿಸುವ ಕುರಿತು  ಸಭೆಯಲ್ಲಿ ಚರ್ಚೆ ನಡೆಯಿತು.
ಕಸಾಪ ಜಿಲ್ಲಾಧ್ಯಕ್ಷ ಹನುಮಂತ ರಾವ್, ಮುಖಂಡರಾದ ಪ್ರೇಮಲೀಲಾ ವೆಂಕಟೇಶ್, ನಳಿನಾಕ್ಷಿ, ಅಶ್ವತ್ಥ್, ಮಂಚನಲೆ ಶ್ರೀನಿವಾಸ್, ತಿಪ್ಪೇನಹಳ್ಳಿ ಪಿ.ನಾರಾಯಣಸ್ವಾಮಿ, ಚಲಪತಿಗೌಡ, ಬಿ.ಆರ್.ಮಂಜುಳ, ಸಿ.ಎನ್.ಪೃಥ್ವಿರಾಜ್, ಎಂ.ಕೃಷ್ಣಪ್ಪ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement