ಆರ್ಟಿಇ ಕಾರ್ಯಾಗಾರ
ಚಿಂತಾಮಣಿ: ನಗರದ ನಗರಸಭೆ ಸಭಾಂಗಣದಲ್ಲಿ ಕ್ಷೇತ್ರ ಶಿಕ್ಷಣ ಕಾಯ್ದೆ 2009 (ಆರ್.ಟಿ.ಇ) ಅಡಿಯಲ್ಲಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯ್ತಿ ಹಾಗೂ ನಗರಸಭೆ ಜನಪ್ರತಿನಿಧಿಗಳಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ವಿದ್ಯಾರ್ಥಿಗಳು ವಿಜೇತರಾದ ಪ್ರತಿಭಾವಂತ ಮಕ್ಕಳಿಗೆ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಚೆಕ್ ನೀಡಿ ಪ್ರೋತ್ಸಾಹಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಯನುಮಲಪಾಡಿ ಚಂದ್ರಾರೆಡ್ಡಿ, ಸಿಇಒ ಕೆ.ಜಿ. ರಂಗಯ್ಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಜನಾರ್ದನರೆಡ್ಡಿ ಸೇರಿದಂತೆ ನಗರಸಭಾ ಸದಸ್ಯರು, ಗ್ರಾಪಂ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.
ಸ್ಕೂಟರ್ ಕಳವು
ಕೆಜಿಎಫ್: ಚಿತ್ರ ಮಂದಿರ ಕಾಂಪೌಂಡ್ನಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿ ಸಿನಿಮಾ ನೋಡುತ್ತಿದ್ದ ವೇಳೆ ಸ್ಕೂಟರ್ ಕಳವಾಗಿರುವ ಘಟನೆ ಆಂಡ್ರಸನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗೀತಾ ರಸ್ತೆ ನಿವಾಸಿ ಸೌಂದರ್ರಾಜನ್ ಎಂಬುವರು ಲಕ್ಷ್ಮೀ ಚಿತ್ರಮಂದಿರದ ಕಾಂಪೌಂಡ್ನಲ್ಲಿ ತಮ್ಮ ಹೋಂಡಾ ಆಕ್ಟಿವಾ ನಿಲ್ಲಿಸಿ ಸಿನಿಮಾ ನೋಡುತ್ತಿದ್ದ ವೇಳೆ ಕಳವು ಪ್ರಕರಣ ನಡೆದಿದೆ. ವಾಹನ ಪತ್ತೆಯಾಗದ ಕಾರಣ ಸೌಂದರ್ರಾಜನ್ ಆಂಡ್ರಸನ್ಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಹಲ್ಲೆ
ಚಿಂತಾಮಣಿ: ಕ್ಷುಲ್ಲಕ ಕಾರಣಕ್ಕೆ ಗುಂಪೊಂದು ವಿನಾಕಾರಣ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿರುವುದಾಗಿ ವಕೀಲರೊಬ್ಬರು ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತಾಲೂಕಿನ ಚಿಲಕಲನೇರ್ಪು ಹೋಬಳಿ ತುಳವನೂರು ಗ್ರಾಮದ ವಕೀಲ ವೆಂಕಟೇಶ್ ಮೇಲೆ ಕ್ಷುಲ್ಲಕ ಕಾರಣಕ್ಕಾಗಿ ಇದೇ ಗ್ರಾಮದ ವೆಂಕಟರಾಯಪ್ಪ ಎಂಬುವರು ಗುಂಪು ಕಟ್ಟಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಲು ಮುಂದಾದಾಗ ಮಧ್ಯೆ ಪ್ರವೇಶಿಸಿದ ವಕೀಲ ತಮ್ಮ ವೆಂಕಟರಮಣ ಮೇಲೆಯೂ ಹಲ್ಲೆ ಮಾಡಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿ ಸಂಬಂಧಪಟ್ಟ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.
ಒಂಟಿ ಮಹಿಳೆ ಮೇಲೆ ಅತ್ಯಾಚಾರ ಯತ್ನ
ಚಿಂತಾಮಣಿ: ತೋಟದಲ್ಲಿ ಕೆಲಸ ಮಾಡುತ್ತಿದ್ದ ಒಂಟಿ ಮಹಿಳೆಯ ಮೇಲೆ ವ್ಯಕ್ತಿವೊಬ್ಬ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಹಳ್ಳಿ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ.ತಾಲೂಕಿನ ದೊಡ್ಡಹಳ್ಳಿ ಗ್ರಾಮದ ಮಹಿಳೆಯೊಬ್ಬರು ತೋಟದಲ್ಲಿ ಒಂಟಿಯಾಗಿ ಕೆಲಸ ಮಾಡುತ್ತಿರುವಾಗ ಇದೇ ಗ್ರಾಮದ ವೆಂಕಟರಮಣ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ತೋಟದಲ್ಲಿ ಏಕಾಏಕಿ ಅತ್ಯಾಚಾರಕ್ಕೆ ಮುಂದಾದಾಗ ಆಕೆ ಜೋರಾಗಿ ಕಿರುಚಿ, ಕೂಗಾಡಿದಾಗ ನೆರೆಹೊರೆಯವರು ಬಂದು ವೆಂಕಟರಮಣನಿಗೆ ಗೂಸ ನೀಡಿ ಪೊಲೀಸರ ವಶಕ್ಕೆ ನೀಡಿರುವುದಾಗಿ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಯನ್ನು ಮುಂದುವರೆಸಿದ್ದಾರೆ.
ಸುಬ್ರಮಣ್ಯಸ್ವಾಮಿ ರಥೋತ್ಸವ
ಕೆಜಿಎಫ್: ನಗರದ ಗಣೇಶ್ಪುರಂನಲ್ಲಿರುವ ಶ್ರೀ ಸುಬ್ರಮಣ್ಯಸ್ವಾಮಿ ದೇವಸ್ಥಾನದಲ್ಲಿ 47ನೇ ವರ್ಷದ ತೈಪೂಸಂ ಮಾಸದ ವಿಶೇಷ ಪೂಜೆ ಹಾಗೂ ಶ್ರೀ ಸುಬ್ರಮಣ್ಯಸ್ವಾಮಿ ರಥೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕ್ಯಾಸಂಬಳ್ಳ ಗ್ರಾಮದ ಸುಬ್ರಮಣಿ ಭಕ್ತರಾದ ವೆಂಕಟೇಶ್ ಅವರು ತಮ್ಮ ಬೆನ್ನಿಗೆ ಕೊಕ್ಕಿಗಳನ್ನು ಹಾಕಿಕೊಂಡು ದೇವರ ರಥವನ್ನು ಎಳೆದುಕೊಂಡು ಗಣೇಶ್ಪುರಂ ದೇವಸ್ಥಾನದಿಂದ ನಗರದ ಗೀತಾ ರಸ್ತೆ, ಸೂಜರ್ಮುಲ್ ವೃತ್ತ, ಗಾಂಧಿ ವೃತ್ತ, ಪ್ರಿಚರ್ಡ್ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ ಡೊಳ್ಳುಕುಣಿತ, ವೀರಗಾಸೆ, ವಾದ್ಯಗೋಷ್ಠಿ ಮುಂತಾದ ತಂಡಗಳು ಪಾಲ್ಗೊಂಡಿದ್ದವು.
ಮೂರು ದಿನಗಳಿಂದ ನಡೆಯುತ್ತಿರುವ ತೈಪೂಸಂ ರಥೋತ್ಸವ ಕಾರ್ಯಕ್ರಮದಲ್ಲಿ ಗಣೇಶ್ ಹೋಮ, ದೇವರಿಗೆ ವಿಶೇಷ ಪೂವಿನ ಅಲಂಕಾರ, ಅಭಿಷೇಕ, ದೀಪಾಲಂಕಾರ, ಅನ್ನದಾನ, ಪ್ರಸಾದ ವಿನಿಯೋಗ, ಪಂಬ ವಾದ್ಯ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕೆಜಿಎಫ್ ಕ್ಷೇತ್ರದ ನಗರ ಹಾಗೂ ಗ್ರಾಮೀಣ ಭಕ್ತಾದಿಗಳು ರಥೋತ್ಸವದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.
ಇನ್ನೂ ಬಿಜೆಪಿ ಅಭ್ಯರ್ಥಿ ಆಯ್ಕೆಆಗಿಲ್ಲ: ವೀರಯ್ಯ
ಕೋಲಾರ: ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಧಿಕೃತ ಅಭ್ಯರ್ಥಿಯ ಹೆಸರು ಘೋಷಣೆ ಆಗುವವರೆಗೆ ಪಕ್ಷದ ಕಾರ್ಯಕರ್ತರು ಮತ್ತು ಮತದಾರರು ಯಾವುದೇ ಗೊಂದಲಗಳಿಗೆ ಒಳಗಾಗಬಾರದೆಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯ ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಪಕ್ಷದಿಂದ ಈ ವರೆಗೆ ಕೋಲಾರ ಕ್ಷೇತ್ರಕ್ಕೆ ಯಾರನ್ನೂ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಆರು ಬಾರಿ ಗೆದ್ದಿರುವ ಪ್ರಬಲ ಅಭ್ಯರ್ಥಿಯಾಗಿದ್ದು, ಇವರ ವಿರುದ್ಧ ಸ್ಪರ್ಧಿಸಲು ಸೂಕ್ತ ಅಭ್ಯರ್ಥಿಯನ್ನು ಪಕ್ಷವು ಅಧಿಕೃತವಾಗಿ ಘೋಷಣೆ ಮಾಡುವವರೆಗೂ ಕ್ಷೇತ್ರದ ಗೊಂದಲಕ್ಕೆ ಅವಕಾಶ ಮಾಡಿಕೊಡದಂತೆ ತಿಳಿಸಿದ್ದಾರೆ.
ಯೋಗಿ ನಾರಾಯಣ ತತ್ವಪದಗಳನ್ನು ಪಸರಿಸಿ
ಮಾಲೂರು: ಉತ್ತಮ ಸಮಾಜ ನಿರ್ಮಿಸಲು ಸಹಕಾರಿಯಾಗಿರುವ ಶ್ರೀ ಸದ್ಗುರು ಕೈವಾರ ಯೋಗಿ ನಾರಾಯಣ ಅವರ ತತ್ವಪದಗಳನ್ನು ಎಲ್ಲೆಡೆ ಪಸರಿಸುವ ಕೆಲಸವಾಗಬೇಕಾಗಿದೆ ಎಂದು ಶ್ರೀ ವೆಂಕಟೇಶ್ಸ್ವಾಮೀಜಿ ಹೇಳಿದರು. ಪಟ್ಟಣದ ಮಾರಿಕಾಂಬ ಕಲ್ಯಾಣ ಮಂಟಪದಲ್ಲಿ ಶ್ರೀ ಸದ್ಗುರು ಕೈವಾರ ಯೋಗಿ ನಾರಾಯಣ ತಾತಯ್ಯನವರ ಸೇವಾ ಸಮಿತಿ ಶುಕ್ರವಾರ ಆಯೋಜಿಸಿದ್ದ ಯೋಗಿ ನಾರಾಯಣ ತಾತರ 41ನೇ ವ್ರತ ಗುರುಪೂಜ ಆರಾಧನಾ ಮಹೋತ್ಸವದಲ್ಲಿ ಮಾತನಾಡಿದರು. ಯೋಗಿ ನಾರಾಯಣರ ತತ್ವಪದಗಳು ಇಂದಿಗೂ ಪ್ರಸ್ತುತವಾಗಿದ್ದು, ಪ್ರತಿಯೊಬ್ಬರೂ ತತ್ವಪದಗಳನ್ನು ಅರಿತು ಅದನ್ನು ಜೀವನದ ಮಾರ್ಗದರ್ಶನವಾಗಿ ಮಾಡಿಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದರು. ಗಾಯನಕ್ಕೆ ರೋಗ ನಿರೋಧಕ ಶಕ್ತಿ ಇದೆ. ಆದರೆ ಯೋಗಿ ನಾರಾಯಣರ ತತ್ವಪದಗಳಲ್ಲಿ ಸಮಾಜದಲ್ಲಿನ ಅನಿಷ್ಟಗಳನ್ನು ತಡೆದು ಉತ್ತಮ ಸಮಾಜ ನಿರ್ಮಾಣಗೂಳಿಸುವ ಶಕ್ತಿ ಇದೆ ಎಂದು ತಿಳಿಸಿದರು. ದತ್ತಾತ್ರೇಯ ಆಶ್ರಮದ ಪೀಠಾಧಿಪತಿ ಶ್ರೀ ಡಾ. ಶ್ರೀನಿವಾಸ ಸ್ವಾಮೀಜಿ, ಎ. ಕೃಷ್ಣಪ್ಪ ಮಾತನಾಡಿದರು. ಸಭೆಗೂ ಮುನ್ನ ಕಳಸ ಪೂಜೆ, ಜಪಯಜ್ಞ ನಡೆಯಿತು. ಎಂ.ಪಿ. ಕೃಷ್ಣಪ್ಪ ನೇತೃತ್ವದಲ್ಲಿ ಭಜನೆ ಕಾರ್ಯಕ್ರಮ ನಡೆಯಿತು. ಶ್ರೀ ವೆಂಕಟೇಶ್ ಸ್ವಾಮಿ ಹಾಗೂ ಡಾ. ಶ್ರೀನಿವಾಸ ಸ್ವಾಮಿ ಅವರನ್ನು ಮುರುಗನ್ ದೇವಾಲಯದಿಂದ ಮಾರಿಕಾಂಬ ದೇವಾಲಯದ ವರೆಗೆ ಮೆರವಣಿಗೆಯಲ್ಲಿ ಕರೆ ತರಲಾಯಿತು. ನಂತರ ನಡೆದ ಕೈವಾರ ತಾತಯ್ಯನವರ ಅಖಂಡ ಭಜನೆ ಕಾರ್ಯಕ್ರಮದಲ್ಲಿ ವಿದ್ವಾನ್ ಲಕ್ಷ್ಮಿಪತಿ, ಎ. ವೆಂಕಟಸ್ವಾಮಿ, ಗೋಪಾಲಚಾರಿ, ತಬಲ ನಾರಾಯಣಪ್ಪ, ಸುಂದರೀಶ್, ತಿಪ್ಪಯ್ಯ, ನ್ಯಾಸಪ್ಪ, ಮುನಿಯಪ್ಪ,ತಿಮ್ಮಯ್ಯ ಭಾಗವಹಿಸಿದ್ದರು.
ಪೋಲಿಯೋ ಪೂರ್ವಭಾವಿ ಸಭೆ
ಕೆಜಿಎಫ್: ಜ.19ರಂದು ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಿಸುವ ಕುರಿತು ತಾಲೂಕು ಆರೋಗ್ಯಾಧಿಕಾರಿ ಕಮಲಾಕರ್ ಅವರ ನೇತೃತ್ವದಲ್ಲಿ ನಗರದ ಮಹಿಳಾ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯ ಕಚೇರಿಯಲ್ಲಿ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಕಮಲಾಕರ್, ದೇಶದಲ್ಲಿ ಈಗಾಗಲೇ ಪೋಲಿಯೋ ಮುಕ್ತ ವಾತಾವರಣ ಉಂಟಾಗಿದೆ. ಮುಂದಿನ ದಿನಗಳಲ್ಲಿ ಅದು ಸಂಪೂರ್ಣ ಮಾಯವಾಗುತ್ತದೆ ಎಂದರು.
ಅದೇ ರೀತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಾರ್ವಜನಿಕರ ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶಿವಕುಮಾರ್ ಮಾತನಾಡಿ, ಕೆಜಿಎಫ್ ಕ್ಷೇತ್ರದಲ್ಲಿ ಸುಮಾರು 18,798 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆಯನ್ನು ಹಾಕಲಾಗುವುದು. ನಗರಾದ್ಯಂತ 70 ಲಸಿಕೆ ನೀಡುವ ಕೇಂದ್ರಗಳನ್ನು ತೆರೆದಿದ್ದು, ಅದರಲ್ಲಿ 5 ಕೇಂದ್ರಗಳು ಅತಿಸೂಕ್ಷ್ಮ ಕೇಂದ್ರಗಳಾಗಿವೆ. ಆದ್ದರಿಂದ ಕೆಜಿಎಫ್ ಕ್ಷೇತ್ರದಲ್ಲಿ ವಾಸಿಸುವ ತಾಯಂದಿರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ತಪ್ಪದೆ ಪೋಲಿಯೋ ಲಸಿಕೆ ಹಾಕಿಸುವಂತೆ ತಿಳಿಸಿದರು.
ಸಭೆಯಲ್ಲಿ ರಾಬರ್ಟ್ಸನ್ಪೇಟೆ ಪೊಲೀಸ್ ಠಾಣಾ ವೃತ್ತ ನಿರೀಕ್ಷಕ ಲಕ್ಷ್ಮೀನಾರಾಯಣ, ರೋಟರಿ ಕ್ಲಬ್ ನಿರ್ದೇಶಕ ಎಲ್. ಗೋಪಿನಾಥ್, ಕೆಜಿಎಫ್ ನಗರಸಭೆ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಆಸ್ಪತ್ರೆಯ ಶುಶ್ರೂಕಿಯರು ಹಾಜರಿದ್ದರು.