ಪರಮಶಿವಯ್ಯ ವರದಿ ಜಾರಿಗೆ 28ರಂದು ಪ್ರತಿಭಟನೆ
ಚಿಕ್ಕಬಳ್ಳಾಪುರ: ಡಾ.ಪರಮಶಿವಯ್ಯನವರ ವರದಿಯಾಧಾರಿತ ನೀರಾವರಿ ಯೋಜನೆಯನ್ನು ಜಾರಿಗೆ ತರಬೇಕೆಂದು ಸರ್ಕಾರ ಮೇಲೆ ಒತ್ತಡ ಹೇರುವ ಸಲುವಾಗಿ ಬಯಲು ಸೀಮೆಯ ಜಿಲ್ಲೆಗಳಲ್ಲಿ ಜ.28ರಂದು ಬೃಹತ್ ರ್ಯಾಲಿಗಳನ್ನು ನಡೆಸಲಾಗುತ್ತಿದೆ ಎಂದು ಅವಿಭಜಿತ ಕೋಲಾರ ಜಿಲ್ಲೆಯ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ತಿಳಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಶ್ವತ ನೀರಾವರಿ ಯೋಜನೆಯನ್ನು ಪಡೆಯುವುದು ಈ ಭಾಗದ ಜನರ ಹಕ್ಕು. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ದೊಡ್ಡ ಜನಾಂದೋಲನ ಮೂಲಕ ಹೋರಾಟಗಳನ್ನು ನಡೆಸಿ ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿದೆ ಎಂದರು.
ಹಿಂದಿನಿಂದಲೂ ಪ್ರತಿ ಗ್ರಾಮಗಳಲ್ಲೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದ್ದು ಇದೀಗ ಬಯಲು ಸೀಮೆಯ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ, ತುಮಕೂರು, ದಾವಣೆಗೆರೆ ಜಿಲ್ಲೆಗಳಲ್ಲಿ ಬೃಹತ್ ರ್ಯಾಲಿಗಳನ್ನು ನಡೆಸಲಾಗುತ್ತಿದೆ ಎಂದರು.
ತರಾತುರಿಯಲ್ಲಿ ಯಾವುದೋ ಒಂದು ಯೋಜನೆಯನ್ನು ಜಾರಿಗೆ ತಂದರೆ ಜನರ ಸಮಸ್ಯೆ ವಾಸ್ತವವಾಗಿ ದೂರವಾಗುವುದಿಲ್ಲ. ಮೊದಲಿನಿಂದಲೂ ಸಿಪಿಐ ಅವೈಜ್ಞಾನಿಕ ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿಕೊಂಡು ಬಂದಿದೆ. ಈ ಯೋಜನೆಯಿಂದ 23 ಟಿಎಂಸಿ ನೀರನ್ನು ಪೂರೈಕೆ ಮಾಡಲು ಸಾಧ್ಯವಿಲ್ಲ. ಆದರೂ ಸಮರ್ಪಕವಾಗಿ ಯೋಜನೆಯ ಸಾಧಕ ಬಾಧಕಗಳನ್ನು ತಿಳಿದುಕೊಳ್ಳದೆ ಎತ್ತಿನಹೊಳೆ ಯೋಜನೆಯ ಮೂಲಕ ನೀರಾವರಿ ಸೌಲಭ್ಯವನ್ನು ಒದಗಿಸುವ ಸುಳ್ಳು ಭರವಸೆಗಳನ್ನು ನೀಡಲಾಗುತ್ತಿದೆ ಎಂದರು.
ಬಯಲುಸೀಮೆಯ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯವನ್ನು ಒದಗಿಸಲು ಡಾ.ಪರಮಶಿವಯ್ಯನವರ ವರದಿಯನ್ನು ಜಾರಿಗೆ ತರಲೇಬೇಕು. ನೀರಾವರಿ ಸಮಸ್ಯೆ ನಿವಾರಣೆಗೆ ಇದೊಂದೇ ಇರುವ ಮಾರ್ಗ. ಪಶ್ಚಿಮ ಘಟ್ಟಗಳಲ್ಲಿ ಹರಿದು ವ್ಯರ್ಥವಾಗಿ ಸಮುದ್ರ ಸೇರುತ್ತಿರುವ 1800 ಟಿಎಂಸಿ ನೀರಿನಲ್ಲಿ 200 ಟಿಎಂಸಿ ನೀರನ್ನು ಈ ಭಾಗಕ್ಕೆ ಹರಿಸಬಹುದು.
ಇದಕ್ಕೆ ಡಿಪಿಆರ್ ಸಹ ತಯಾರಿಸಿದ್ದು ಈ ಯೋಜನೆಯೂ ಅವೈಜ್ಞಾನಿಕ ಅಲ್ಲ ಎನ್ನುವುದು ಸಹ ದೃಢಪಟ್ಟಿದೆ. ಆದರೆ, ಈ ಯೋಜನೆಯನ್ನು ಮೂಲೆಗುಂಪು ಮಾಡುವ ಸಲುವಾಗಿ ಎತ್ತಿನಹೊಳೆ ಯೋಜನೆಯನ್ನು ಜಾರಿಗೆ ತರಲು ಮುಂದಾಗಿರುವುದು ದುರದೃಷ್ಟಕರ ಎಂದು ವಿಷಾದ ವ್ಯಕ್ತಪಡಿಸಿದರು.
ಶಾಶ್ವತ ನೀರಾವರಿ ಯೋಜನೆಯನ್ನು ಜಾರಿಗೆ ತರಲು ರಾಜಕೀಯ ಇಚ್ಛಾಶಕ್ತಿ ಬೇಕು. ಆದರೆ, ಸರ್ಕಾರ ಇಚ್ಛಾಶಕ್ತಿಯನ್ನು ಹೊಂದಿಲ್ಲ. ಇದರಿಂದ ಕೇವಲ ನೀರಾವರಿ ಚುನಾವಣಾ ರಾಜಕಾರಣ ನಡೆಯುತ್ತಿದೆ ಎಂದು ಟೀಕಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಸಂಘಟನಾ ಕಾರ್ಯದರ್ಶಿ ಎಂ.ವಿ.ಮುನಿವೆಂಕಟಪ್ಪ, ಪದಾಧಿಕಾರಿಗಳಾದ ಚಂದ್ರ ತೇಜಸ್ವಿನಿ, ಡಾ.ಅನಿಲ್, ಮಳ್ಳೂರು ಶಿವಣ್ಣ, ಚೌಡಪ್ಪ, ಚಲಪತಿ, ಬಿ.ಎನ್.ಅಶ್ವತ್ಥಪ್ಪ, ಅಶ್ವತ್ಥರೆಡ್ಡಿ, ಮುನಿಕೃಷ್ಣಪ್ಪ ಮುಂತಾದವರು ಉಪಸ್ಥಿತರಿದ್ದರು.