ಯಲುವಳ್ಳಿ ಬಳಿ ಕಾಡಾನೆಗಳ ಪ್ರತ್ಯಕ್ಷ, ಒಬ್ಬನಿಗೆ ಗಾಯ
ಬಂಗಾರಪೇಟೆ: ಕಳೆದ ಒಂದು ತಿಂಗಳಿಂದ ಕಾಡಾನೆಗಳ ಹಾವಳಿಯಿಲ್ಲದೆ ನೆಮ್ಮದಿಯಾಗಿದ್ದ ಗ್ರಾಮಸ್ಥರಿಗೆ ಮತ್ತೆ ಆತಂಕ ಶುರುವಾಗಿದೆ. ತಾಲೂಕಿನ ಯಲುವಹಳ್ಳಿ ಬಳಿ ಕಾಣಸಿಕೊಂಡಿರುವ ಎರಡು ಕಾಡಾನೆಗಳು ಒಬ್ಬನಿಗೆ ಸೊಂಡಲಿನಿಂದ ಹೊಡೆದು ಗಾಯಗೊಳಿಸಿವೆ.
ಯಲುವಳ್ಳಿ ಗ್ರಾಮಕ್ಕೆ ಆನೆಗಳು ಬಂದಾಗ ಗ್ರಾಮದ ಜಯರಾಮರೆಡ್ಡಿ ಎಂಬಾತ ತಮ್ಮ ಬೆಳೆ ನಾಶ ಮಾಡಲಿವೆ ಎಂಬ ಆತಂಕದಿಂದ ಆನೆಗಳನ್ನು ಓಡಿಸಲು ಯತ್ನಿಸಿದಾಗ ಸೊಂಡಲಿನಿಂದ ಹೊಡೆದು ಗಾಯಗೊಳಿಸಿದೆ. ತಕ್ಷಣ ಗಾಯಾಳುವನ್ನು ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಹಸೀಲ್ದಾರ್ ಉಷಾ ಆಸ್ಪತ್ರೆಗೆ ಧಾವಿಸಿ ಗಾಯಾಳುವಿನ ಯೋಗಕ್ಷೇವು ವಿಚಾರಿಸಿದರು. ಆನೆಗಳು ಕಾಡಿನಿಂದ ನಾಡಿನ ಕಡೆ ಬಂದಿರುವ ಸುದ್ದಿ ತಿಳಿದು ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಜಮಾಯಿಸಿದ್ದರಿಂದ ಆನೆಗಳು ಎತ್ತಲೂ ಹೋಗಲಾಗದೆ ಐನೋರಹೊಸಹಳ್ಳಿ ಗ್ರಾಮದ ಕೆರೆ ಕುಂಟೆಯಲ್ಲಿದ್ದ ನೀರಿನಲ್ಲಿ ಅರ್ಧಗಂಟೆಗಳ ಕಾಲ ಮಿಂದೆದ್ದವು. ಇದು ಗ್ರಾಮಸ್ಥರನ್ನು ಪುಳಿಕಿತಗೊಳಿಸಿತು.
ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಜನರು ಕಿಟಲೆ ಮಾಡದಂತೆ ತಡೆದು ಬಂದ ದಾರಿಯಲ್ಲೇ ಮತ್ತೆ ವಾಪಸ್ ಕಳುಹಿಸಲು ಹರಸಾಹಸ ಮಾಡಿದರು.
1 ಲಕ್ಷಕ್ಕೂ ಹೆಚ್ಚು ನಾಶ: ಬೂದಿಕೋಟೆ ಹೋಬಳಿಯ ಸೊಂಟಗಾನಹಳ್ಳಿ ಗ್ರಾಮದ ಶ್ರೀರಾಮಪ್ಪ, ದೊಡ್ಡ ಅಪ್ಪುರಾವ್, ಗೋವಿಂದರಾವ್, ವೆಂಕಟೇಶಪ್ಪ ಎಂಬುವರ ರಾಗಿ ಬೆಳೆಯನ್ನು ನಾಶಪಡಿಸಿದ್ದರೆ. ದಿನ್ನಕೊತ್ತೂರು ಗ್ರಾಮದ ಬಾಲರೆಡ್ಡಿ ಎಂಬುವರ ಹೂಕೋಸನ್ನು ಹಿಗ್ಗಾಮುಗ್ಗವಾಗಿ ತುಳಿದು ನಾಶ ಪಡಿಸಿವೆ. ಇದರಿಂದ ಒಟ್ಟು 1 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಕಳೆದ ವರ್ಷ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ತಮಿಳುನಾಡಿನಿಂದ ಆಹಾರ ಹುಡುಕಿಕೊಂಡು ರಾಜ್ಯದ ಗಡಿ ಭಾಗವಾದ ತಮಟಮಾಕನಹಳ್ಳಿ, ಯರಗೋಳ್ ಅರಣ್ಯ ಮೂಲಕ ಕಾಮಸಮುದ್ರ ಹೋಬಳಿಯ ವಿವಿಧ ಗ್ರಾಮಗಳಿಗೆ ಲಗ್ಗೆ ಹಾಕಿದ್ದವು. ಅಲ್ಲಿ ಲಕ್ಷಾಂತರ ರುಪಾಯಿಗಳ ವಾಣಿಜ್ಯ ಬೆಳೆಗಳನ್ನು ಹಾನಿ ಮಾಡಿದ್ದವು. ನಂತರ ಆನೆಗಳ ಹಿಂಡನ್ನು ಮತ್ತೆ ತಮಿಳುನಾಡಿನತ್ತ ಕಳುಹಿಸಲು ಅರಣ್ಯ ಇಲಾಖೆ ಸಿಬ್ಬಂದಿ ಎರಡು ತಿಂಗಳುಗಳೇ ಬೇಕಾಯಿತು. ತಿಂಗಳಿಂದ ಆನೆಗಳ ಹಾವಳಿಯಿಲ್ಲದೆ ಗ್ರಾಮಸ್ಥರು ನೆಮ್ಮದಿ ಉಸಿರಾಡುತ್ತಿದ್ದರು.
ಶುಕ್ರವಾರ ಮತ್ತೆ ಮೂತನೂರು ಕಾಡಿನಿಂದ ಮತ್ತೆ ಎರಡು ಆನೆಗಳು ಪ್ರವೇಶ ಮಾಡಿರುವುದರಿಂದ ಭಯಭೀತಗೊಂಡಿದ್ದಾರೆ.