ರಸ್ತೆ ಗುಣಮಟ್ಟ ಪರಿಶೀಲಿಸಲು ತಜ್ಞರ ತಂಡಕ್ಕೆ ಮನವಿ
ಕ.ಪ್ರ. ವಾರ್ತೆ , ಕೋಲಾರ , ಜ.17
ನಗರದಲ್ಲಿನ ರಸ್ತೆಗಳ ಗುಣಮಟ್ಟ ಪರಿಶೀಲಿಸಲು ತಜ್ಞರ ತಂಡ ಕಳುಹಿಸುವಂತೆ ಪೌರಾಡಳಿತ ನಿರ್ದೇಶನಾಲಯಕ್ಕೆ ಪತ್ರ ಬರೆದಿರುವುದಾಗಿ ಜಿಲ್ಲಾಧಿಕಾರಿ ಡಿ.ಕೆ. ರವಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತಮ್ಮನ್ನು ಭೇಟಿಯಾಗಿದ್ದ ಸುದ್ದಿಗಾರರು ನಗರದಲ್ಲಿನ ಅನೇಕ ರಸ್ತೆಗಳು ಹಾಳಾಗಿವೆ. ಕಳಪೆ ಕಾಮಗಾರಿ ಮತ್ತು ಗುಣಮಟ್ಟದ ಕಡೆ ಸಂಬಂಧಪಟ್ಟ ಅಧಿಕಾರಿಗಳು ಗಮನ ನೀಡದಿರುವುದು ಎಂದು ದೂರಿದ್ದು, ಈ ಸಂಬಂಧ ತಾವು ಈಗಾಗಲೇ ಪೌರಾಡಳಿತ ನಿರ್ದೇಶನಾಲಯದ ಅಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ತಜ್ಞರ ತಂಡ ರಸ್ತೆಗಳನ್ನು ಪರಿಶೀಲಿಸಿದಲ್ಲಿ ಸುಧಾರಣೆಗೆ ಮುಂದಿನ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದರು. ನಗರದ ಮೆಕ್ಕೆ ವೃತ್ತದ ಬಳಿಯ ರಸ್ತೆಯಲ್ಲಿ ನಗರಸಭೆಯ ರೈಸಿಂಗ್ ಮೈನ್ ಇರುವುದರಿಂದ ಹತ್ತಾರು ಬಾರಿ ರಸ್ತೆ ಹಾಳಾಗುತ್ತಿದೆ, ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂದು ತಿಳಿಸಿದಾಗ, ಲೋಕೋಪಯೋಗಿ ಇಲಾಖೆಯವರು ಈಗಾಗಲೇ ನಗರಸಭೆಯವರ ಗಮನಕ್ಕೆ ತಂದು ರೈಸಿಂಗ್ ಮೈನ್ ಬದಲಾವಣೆ ಮಾಡಿದ್ದಾರೆ. ಶೀಘ್ರವೇ ರಸ್ತೆ ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ನೀರಿನ ಸಮಸ್ಯೆಗೆ ಪರಿಹಾರ: ಮುಂಬರುವ ಬೇಸಿಗೆಯನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳುತ್ತೇನೆ. ಕ್ರಿಯಾ ಯೋಜನೆ ಸಿದ್ಧಪಡಿಸಿ ಅನುಮೋದನೆಗೆ ಕಳುಹಿಸಿಕೊಡುವಂತೆ ಎಲ್ಲಾ ತಾಲೂಕುಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಮ್ಮಲ್ಲಿ ಈಗ 2 ಕೋಟಿ ಇದ್ದು, ಕುಡಿಯುವ ನೀರಿನ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುವುದಾಗಿ ಹೇಳಿದರು.
ಭರವಸೆ: ಬರಪೀಡಿತ ತಾಲೂಕುಗಳೆಂದು ಗುರ್ತಿಸಿರುವ ಬಂಗಾರಪೇಟೆ, ಶ್ರೀನಿವಾಸಪುರ ಮತ್ತು ಮಾಲೂರು ತಾಲೂಕುಗಳಿಗೆ ವಿಶೇಷ ಯೋಜನೆಯಡಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ನೀರಿಗೆ ತೊಂದರೆ ಆಗದಂತೆ ಎಚ್ಚರವಹಿಲಾಗಿದೆ, ನಗರ ಪ್ರದೇಶದಲ್ಲಿ ನೀರು ಸರಬರಾಜು ಮಾಡುವುದು ಕೊಂಚ ಮಟ್ಟಿಗೆ ಕಷ್ಟವಾದರೂ ಜನರಿಗೆ ಯಾವುದೇ ರೀತಿಯಲ್ಲೂ ತೊಂದರೆ ಆಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.
ಪೋಡಿ ಅದಾಲತ್: ಕಂದಾಯ ಅದಾಲತ್ ತಾಲೂಕಿನಲ್ಲಿ ಯಶಸ್ವಿಯಾಗಿದ್ದು, ಬೇರೆ ತಾಲೂಕುಗಳಿಗೂ ವಿಸ್ತರಣೆ ಮಾಡಲಾಗಿದೆ. ಇದೇ ರೀತಿ ರೈತರ ಹೊಲಗಳ ಪೋಡಿ ಅಂದೋಲನಾ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ಕೆ. ರವಿ ತಿಳಿಸಿದರು. ಕಂದಾಯ ಅದಾಲತ್ ಮಾರ್ಚ್ ಅಥವಾ ಏಪ್ರಿಲ್ ಕೊನೆಯ ವಾರದಲ್ಲಿ ಮುಗಿಯಲಿದ್ದು, ನಂತರ ಪೋಡಿ ಅಂದೋಲನಾ ಆರಂಭಿಸಲಾಗುವುದೆಂದರು.
ಘನತ್ಯಾಜ್ಯ ವಿಲೇವಾರಿಗೆ ಕ್ರಮ: ಘನ ತ್ಯಾಜ್ಯ ವಿಲೇವಾರಿ ಮಾಡಲು ಸೂಕ್ತವಾದ ಭೂಮಿ ಸಿಗುತ್ತಿಲ್ಲ, ನಮ್ಮಲ್ಲಿ ಭೂಮಿ ಖರೀದಿಗೆ ಹಣದ ಕೊರತೆ ಇಲ್ಲ. ಆದರೆ ಜಾಗ ಸಿಗುತ್ತಿಲ್ಲವೆಂದರು. ಬಂಗಾರಪೇಟೆ ಮತ್ತು ಕೋಲಾರ ಮಧ್ಯಭಾಗದ ಬೀರಂಡಹಳ್ಳಿಯಲ್ಲಿ ಸ್ಥಳವನ್ನು ಹುಡುಕಲು ಅಧಿಕಾರಿಗಳಿಗೆ ತಿಳಿಸಿದ್ದೇನೆ, ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನಮೋದಿಸಲ್ಪಡುವ ದರವನ್ನು ಭೂ ಮಾಲೀಕರಿಗೆ ನೀಡಲಾಗುವುದು, ಘನತ್ಯಾಜ್ಯ ಸಂಸ್ಕರಣ ಘಟಕ ಸ್ಥಾಪನೆಗಾಗಿ ಖಾಸಗಿಯವರು ಆಸಕ್ತಿ ತೋರಿದ್ದಾರೆ. ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಕೈಗೆತ್ತಿಕೊಳ್ಳಲು ಚಿಂತನೆ ನಡೆದಿದೆ ಎಂದರು.
ಗ್ಯಾಸ್ ಬಂಕ್ಗೆ ನೋಟಿಸ್ ಜಾರಿಗೆ ಸೂಚನೆ
ಕೋಲಾರ: ನಗರದ ಬಾಲಕರ ಸರ್ಕಾರಿ ಕಾಲೇಜು ಸಮೀಪ ನಿರ್ಮಿಸಿರುವ ಟೋಟಲ್ ಆಟೋ ಗ್ಯಾಸ್ ಬಂಕ್ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪಣೆಗಳು ಹಾಗೂ ದೂರು ಕೇಳಿ ಬಂದಿರುವುದರಿಂದ ಸಂಬಂಧಪಟ್ಟವರಿಗೆ ಷೋಕಾಸ್ ನೋಟಿಸ್ ಜಾರಿ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಿ.ಕೆ. ರವಿ ಸೂಚನೆ ನೀಡಿದ್ದಾರೆ.
ಟೋಟಲ್ ಆಟೋ ಗ್ಯಾಸ್ ಬಂಕ್ ಸುತ್ತಮುತ್ತ ಸಾಕಷ್ಟು ಮನೆಗಳು, ಆಸ್ಪತ್ರೆ, ವಿದ್ಯಾಸಂಸ್ಥೆಗಳಿದ್ದರೂ ಗ್ಯಾಸ್ ಬಂಕ್ ಸ್ಥಾಪನೆಗೆ ಅನುಮತಿ ನೀಡಿರುವುದು ಸೂಕ್ತವಲ್ಲ. ಸಾರ್ವಜನಿಕ ಸ್ಥಳದಲ್ಲಿ ಗ್ಯಾಸ್ ಬಂಕ್ ಸ್ಥಾಪನೆಗೆ ಅವಕಾಶ ನೀಡಬಾರದಿತ್ತು ಎಂದು ಕನ್ನಡಪರ ಸಂಘಟನೆಗಳ ಒಕ್ಕೂಟದ ಮುಖಂಡ ಕಲಾವಿದ ವಿಷ್ಣು ಸೇರಿದಂತೆ ಹಲವರು ದೂರಿದ ಹಿನ್ನೆಲೆಯಲ್ಲಿ ನೋಟಿಸ್ ನೀಡಲು ತಿಳಿಸಿದ್ದಾರೆ.
ಬೆಂಗಳೂರಿನ ಆಗ್ನಿಶಾಮಕ ದಳದ ಅಧಿಕಾರಿಗಳು, ಪೊಲೀಸ್, ಲೋಕೋಪಯೋಗಿ, ನಗರಸಭೆ ಹಾಗೂ ಇಂಡಿಯನ್ ಆಯಿಲ್ ಸಂಸ್ಥೆಯ ಅಧಿಕಾರಿಗಳು ಗ್ಯಾಸ್ ಬಂಕ್ ನಿರ್ಮಾಣಕ್ಕೆ ಅನುಮತಿ ನೀಡಬಹುದೆಂದು ವರದಿ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಿಂದ ಎನ್.ಒ.ಸಿ ನೀಡಲಾಗಿದೆ. ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ಗ್ಯಾಸ್ ಬಂಕ್ ನಿರ್ಮಿಸಿದ್ದಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಕೋಲಾರ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿ ಸಂದರ್ಭದಲ್ಲಿ 6 ಮಂದಿ ಕಾರ್ಯಕರ್ತೆಯರು ಸುಳ್ಳು ವಿಳಾಸ ನೀಡಿ ಆಯ್ಕೆಯಾಗಿರುವುದು ಅಪರಾಧವಾಗಿರುವುದರಿಂದ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದರು.