ಇಂದು ಮೊದಲ ಸುತ್ತಿನ ಪಲ್ಸ್ ಪೋಲಿಯೊ
ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಂತ ಜ.19 ರಂದು ಮೊದಲನೇ ಸುತ್ತಿನ ಪಲ್ಸ್ ಪೋಲಿಯೊ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಂಗಸ್ವಾಮಿ ತಿಳಿಸಿದರು. ಜಿಲ್ಲೆಯಲ್ಲಿ 5 ವರ್ಷದೊಳಗಿನ 14,70,930 ಮಕ್ಕಳಿಗೆ ಲಸಿಕೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಒಟ್ಟು 631 ಲಸಿಕಾ ಕೇಂದ್ರಗಳು, 2602 ವ್ಯಾಕ್ಸಿನೇಟರ್ ಗಳು, 131 ಮೇಲ್ವಿಚಾರಕರನ್ನು ಈ ಕಾರ್ಯಕ್ರಮಕ್ಕೆ ಬಳಸಿಕೊಳ್ಳಲಾಗುತ್ತಿದೆ.ಒಟ್ಟು 2,65,447 ಮನೆಗಳಿಗೆ ತೆರಳಿ ಈ ಲಸಿಕೆಯನ್ನು ಹಾಕಲಾಗುತ್ತಿದೆ ಎಂದವರು ತಿಳಿಸಿದರು. ಜ.19 ರಿಂದ ಜ.21 ವರೆಗೆ ಮೂರು ದಿವಸಗಳ ಕಾಲ ಮತ್ತು ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ, ಜ.19 ರಿಂದ ಜ.22 ರವರೆಗೆ ನಾಲ್ಕು ದಿವಸಗಳ ಕಾಲ ನಡೆಯಲಿದೆ ಎಂದರು. ಭಾರತವನ್ನು ಪೋಲಿಯೋ ಮುಕ್ತ ದೇಶವನ್ನಾಗಿಸಲು ಸರ್ಕಾರ ಪಣತೊಟ್ಟಿದೆ. ಈ ಹಿನ್ನೆಲೆಯಲ್ಲಿ ಈ ಲಸಿಕೆ ಹಾಕುವ ಕಾರ್ಯಕ್ರಮವನ್ನು ದೊಡ್ಡ ಅಭಿಯಾನದ ಮಾದರಿಯಲ್ಲಿ ನಡೆಸಲಾಗುತ್ತಿದೆ. ಪೋಷಕರು ಕಡ್ಡಾಯವಾಗಿ ತಮ್ಮ 5 ವರ್ಷದೊಳಗಿನ ಮಕ್ಕಳಿಗೆ ಲಸಿಕೆಯನ್ನು ಹಾಕಿಸಿ,ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ.
ಪಲ್ಸ್ ಪೋಲಿಯೊ ಕಾರ್ಯಕ್ರಮ
ಚಿಕ್ಕಬಳ್ಳಾಪುರ: ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಜ.19 ರಂದು ಬೆಳಗ್ಗೆ 8ಗಂಟೆಗೆ ಪಲ್ಸ್ ಪೋಲಿಯೊ ಹನಿ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಶಾಸಕ ಡಾ.ಕೆ. ಸುಧಾಕರ್ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷ ಎಸ್.ಎನ್. ಚಿನ್ನಪ್ಪ, ಜಿಲ್ಲಾಧಿಕಾರಿ ಡಾ.ಆರ್. ವಿಶಾಲ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಂಗಸ್ವಾಮಿ, ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ. ಮಂಜುಳ ಭಾಗವಹಿಸಲಿದ್ದಾರೆ.
ನಗರಸಭಾ ಸದಸ್ಯ ನಿಧನ: ಶ್ರದ್ಧಾಂಜಲಿ
ಕೋಲಾರ: ಹೃದಯಾಘಾತದಿಂದ ನಗರಸಭೆಯ ವಾರ್ಡ್ ನಂ.18ರ ಸದಸ್ಯ ಎಸ್. ನಸೀರ್ ನಿಧನರಾಗಿದ್ದಾರೆ.ಜಾಲಪ್ಪ ಆಸ್ಪತ್ರೆಯ ನಾರಾಯಣ ಹೃದಯಾಲಯಕ್ಕೆ ನಸೀರ್ ಅವರನ್ನು ದಾಖಲು ಮಾಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿ ಆಗದೆ ಮೃತರಾಗಿದ್ದು ನಗರಸಭೆ ಸಭಾಂಗಣದಲ್ಲಿ ಶನಿವಾರ ಸದಸ್ಯರು, ಸಿಬ್ಬಂದಿ ಶ್ರದ್ಧಾಂಜಲಿ ಅರ್ಪಿಸಿದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಸಲ್ಲಾವುದ್ದೀನ್ ಬಾಬು, ಎಸ್.ಆರ್. ಮುರಳಿಗೌಡ, ಪ್ರಸಾದ್ ಬಾಬು, ರವೀಂದ್ರ, ಚಾಂದ್ ಪಾಷಾ, ರೌತ್ ಶಂಕರಪ್ಪ, ಮುಕ್ತಿಯಾರ್, ಅಸ್ಲಾಂ, ಸುಕುಮಾರ್, ನಗರಸಭೆ ಆಯುಕ್ತ ಜಗದೀಶ್, ವ್ಯವಸ್ಥಾಪಕ ಶಿವಪ್ರಕಾಶ್, ಆರೋಗ್ಯ ನಿರೀಕ್ಷಕ ರಮೇಶ್ ಇದ್ದರು.
ಆರೋಗ್ಯ ಶಿಬಿರ
ಕೋಲಾರ: ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷಾಚರಣೆ ಮತ್ತು ವಿವೇಕ ಕಂಕಣ ಕಾರ್ಯಕ್ರಮ ಅಂಗವಾಗಿ ರಾಷ್ಟ್ರೀಯ ಸ್ವಯಂಸೇವಾ ಸಂಘದ ಸೇವಾ ವಿಭಾಗ, ಶಂಕರ್ ಕಣ್ಣಿನ ಆಸ್ಪತ್ರೆ, ಕೋಲಾರ, ಜಿಲ್ಲಾ ಸಾಂಸ್ಕೃತಿಕ ಪ್ರಕೋಷ್ಠ, ಆಶ್ರಯದಲ್ಲಿ ಜ.19ರ ಭಾನುವಾರ ಬೆಳಿಗ್ಗೆ 9 ರಿಂದ 1ರವರೆಗೆ ಬಂಗಾರಪೇಟೆ ತಾಲೂಕಿನ ಲಕ್ಷ್ಮೀಪುರದ ಶ್ರೀ ಸ್ವಾಮಿ ವಿವೇಕಾನಂದ ನರ್ಸರಿ ಮತ್ತು ಫ್ರೈಮರಿ ಶಾಲೆ ಆವರಣದಲ್ಲಿ ಆರೋಗ್ಯ ಉಚಿತ ತಪಾಸಣಾ ಶಿಬಿರ ಮತ್ತು ಕಣ್ಣಿನ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿದೆ. ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಅರ್ಹರಾದವರನ್ನು ಶಂಕರ ಕಣ್ಣಿನ ಆಸ್ಪತ್ರೆ, ಕೋಲಾರ ಇಲ್ಲಿಗೆ ಕರೆತಂದು ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಿ ಲೆನ್ಸ್ ಅಳವಡಿಸಲಾಗುವುದು ಎಂದು ಆರ್ಎಸ್ಎಸ್ನ ಡಾ. ಶಿವಣ್ಣ ತಿಳಿಸಿದ್ದಾರೆ. ಇದೇ ರೀತಿ ಶ್ರೀನಿವಾಸಪುರದ ವಿಶ್ವ ಹಿಂದೂ ಪರಿಷತ್ ವತಿಯಿಂದ ಶ್ರೀ ಶಾರದ ವಿದ್ಯಾ ನಿಕೇತನದಲ್ಲಿ ಬೆಳಿಗ್ಗೆ 10 ಗಂಟೆಗೆ ಉಚಿತ ವೈದ್ಯಕೀಯ ಸೇವೆ ಮತ್ತು ಉಚಿತ ವಾಚನಾಲಯ ಪ್ರಾರಂಭೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ.
22 ರಿಂದ ವಿಧಾನಸೌಧ ಚಲೋ
ಬಾಗೇಪಲ್ಲಿ: ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿ ಕಾರ್ಪೋರೇಟ್ ಕಂಪನಿಗಳ ಕೈಗೊಂಬೆಗಳಂತೆ ವರ್ತಿಸುತ್ತಿವೆ ಎಂದು ಎಂದು ಸಿಐಟಿಯು ತಾಲೂಕು ಉಪಾಧ್ಯಕ್ಷ ಬಿ. ಅಂಜನೇಯರೆಡ್ಡಿ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಅಸಂಘಟಿತ ಕಾರ್ಮಿಕರ ಮೇಲೆ ಎಸ್ಮಾ ಜಾರಿಗೊಳಿಸಿರುವುದನ್ನು ವಿರೋಧಿಸಿ, ಕನಿಷ್ಠ ವೇತನ 10 ಸಾವಿರ ರು.ಗಳ ನಿಗದಿ ಮತ್ತು ಸಾಮಾಜಿಕ ಭದ್ರತೆ ಒದಗಿಸುವಂತೆ ಒತ್ತಾಯಿಸಿ ಜ.22, 23ಮತ್ತು 24 ರಂದು ವಿಧಾನಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ನ್ಯಾಯ ಕಲ್ಪಿಸುವಲ್ಲಿ ಮೀನಮೇಷ ಎಣಿಸುತ್ತಿದೆ, ಅಂಗನವಾಡಿ, ಆಶಾ, ಅಕ್ಷರದಾಸೋಹ, ಗ್ರಾಪಂ ನೌಕರರಿಗೆ ಕನಿಷ್ಠ ವೇತನ 10 ಸಾವಿರ ನೀಡಬೇಕು ಹಾಗೂ ಎಪಿಎಲ್, ಬಿಪಿಎಲ್ ಎಂಬ ತಾರತಮ್ಯವಿಲ್ಲದೆ ಪ್ರತಿ ಕುಟುಂಬಕ್ಕೆ ಆಹಾರ ಧಾನ್ಯ ನೀಡಬೇಕು, ಅಂಗನವಾಡಿ ಕೇಂದ್ರಗಳನ್ನು ಖಾಸಗೀಕರಣಗೊಳಿಸದೆ ಸರ್ಕಾರದ ನಿಯಂತ್ರಣದಲ್ಲಿಯೇ ಇಟ್ಟುಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಸಂಘಟನೆ ಕಾರ್ಯದರ್ಶಿ ಮುಸ್ತಾಫ್, ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ವಿಜಯಭಾರತಿ, ಕಾರ್ಯದರ್ಶಿ ರತ್ನಮ್ಮ, ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ಮುನಿಗೋವಿಂದಮ್ಮ, ಆಟೋ ಘಟಕದ ಅಧ್ಯಕ್ಷ ಬಿ.ಟಿ. ಭಾಸ್ಕರ್ರೆಡ್ಡಿ, ಹಮಾಲಿ ಸಂಘದ ಅಧ್ಯಕ್ಷ ಮಂಜುನಾಥ್ ಇದ್ದರು.
ಆರ್ಟಿಇ ಸಂಪೂರ್ಣ ವಿಫಲ: ಆರೋಪ
ಶಿಡ್ಲಘಟ್ಟ: ಖಾಸಗಿ ಶಾಲೆಗಳಲ್ಲಿ ಆರ್ಟಿಇ ಯೋಜನೆಯಡಿ ಬಡಮಕ್ಕಳಿಗೆ ಸೀಟುಗಳು ಸಿಗದಿರುವುದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಎಸ್ಎಫ್ಐ ರಾಜ್ಯ ಉಪಾಧ್ಯಕ್ಷ ಗುರುರಾಜ್ ದೇಸಾಯಿ ಆರೋಪಿಸಿದ್ದಾರೆ. ಪಟ್ಟಣದ ಸಾರ್ವಜನಿಕ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಎಸ್ಎಫ್ಐನಿಂದ ಶೈಕ್ಷಣಿಕ ಸಮಸ್ಯೆಗಳ ಪರಿಹಾರ ಹಾಗೂ ಶಾಶ್ವತ ನೀರಾವರಿಗಾಗಿ ಒತ್ತಾಯಿಸಿ ಏರ್ಪಡಿಸಿದ್ದ ತಾಲೂಕು ಮಟ್ಟದ ಸಮಾವೇಶದಲ್ಲಿ ಮಾತನಾಡಿ, ರಾಜ್ಯದಲ್ಲಿ ಖಾಸಗಿ ಶಾಲೆಗಳಲ್ಲಿ ಬಡಮಕ್ಕಳಿಗೆ ಸಿಗಬೇಕಾದಂತಹ ಸೀಟುಗಳ ಹಂಚಿಕೆಯಲ್ಲಿ ಆಗುತ್ತಿರುವ ಲೋಪದೋಷಗಳಿಗೆ ಶಿಕ್ಷಣ ಸಚಿವರೆ ಕಾರಣ, ಕೇವಲ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಾದ ವರದಿಗಳಿಗೆ ಮಾತ್ರ ಸೀಮಿತವಾಗಿರುವ ಆರ್ಟಿಇ ಯೋಜನೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು. ಎಸ್ಎಫ್ಐ ಜಿಲ್ಲಾ ಸಂಚಾಲಕ ಕುಂದಲಗುರ್ಕಿ ಮುನೀಂದ್ರ, ರಾಜ್ಯ ಪ್ರಾಂತ ರೈತ ಸಂಘದ ತಾಲೂಕು ಸಂಚಾಲಕ ಮಳ್ಳೂರು ಶಿವಣ್ಣ ಇದ್ದರು.
ತಮ್ಮನಿಂದಲೇ ಕೊಲೆ ಯತ್ನ
ಶ್ರೀನಿವಾಸಪುರ: ತಾಲೂಕಿನ ಯಲವಹಳ್ಳಿಯ ಅರ್ಚಕರನ್ನು ಆತನ ಸಹೋದರನೇ ಅಸ್ತಿಯ ವಿವಾದದಿಂದ ಮಚ್ಚಿನಿಂದ ಕೊಲೆ ಮಾಡಲು ಯತ್ನಿಸಿರುವ ಘಟನೆ ನಡೆದಿದೆ. ಗ್ರಾಮದ ವೇಣುಗೋಪಾಲಸ್ವಾಮಿ ದೇವಾಲಯದ ಅರ್ಚಕಪಾಳ್ಯ ರಾಜಣ್ಣ ಸಹೋದರ ಶ್ರೀನಿವಾಸ ಎಂಬಾತನು ಮಚ್ಚಿನಿಂದ ದಾಳಿ ನಡೆಸಿದ್ದು, ಅರ್ಚಕರ ಎರಡು ಕಾಲು ತುಂಡಾಗಿವೆ.