ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜಿಲ್ಲಾ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಚಂದ್ರಶೇಖರ್ ನಂಗಲಿ

Vishwanath S
Updated On : 19 Jan 2014, 1:20 am

ಕೋಲಾರ: ಸಾಹಿತಿ, ವಿಮರ್ಷಕ ಡಾ. ಚಂದ್ರಶೇಖರ್ ನಂಗಲಿ ಅವರನ್ನು 13ನೇ ಕೋಲಾರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಕೋಲಾರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಫೆಬ್ರವರಿ 12 ಹಾಗೂ 13ರಂದು ಜಿಲ್ಲಾ ಸಮ್ಮೇಳನ ನಡೆಸಲು ಶನಿವಾರ ನಡೆದ ಕಸಾಪ ಸಭೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಶನಿವಾರ ನಡೆದ ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನಿಸಿ ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಜೆ.ಜಿ. ನಾಗರಾಜ್ ತಿಳಿಸಿದ್ದಾರೆ. ಸಮ್ಮೇಳನಕ್ಕೆ ಹಾಜರಾಗುವ ಪ್ರತಿನಿಧಿಗಳು ಫೆಬ್ರವರಿ 6ರೊಳಗೆ ಪ್ರತಿನಿಧಿ ಶುಲ್ಕ 100 ರು. ನೀಡಿ ನೋಂದಾಯಿಸಬಹುದು. ಜಿಲ್ಲೆಯ ಸಾಹಿತಿಗಳು ತಮ್ಮ ಒಂದು ಲೇಖನ ಅಥವಾ ಕವಿತೆಯನ್ನು ಆಯಾ ತಾಲೂಕು ಅಧ್ಯಕ್ಷರಿಗೆ ಫೆ.5ರೊಳಗೆ ನೀಡಬೇಕು.

ಆರ್‌ಟಿಇ ದಾಖಲಾತಿಗೆ ಅರ್ಜಿ ಸಲ್ಲಿಸಲು ಫೆ.8 ಕೊನೆ ದಿನ
ಕೋಲಾರ: ಶಿಕ್ಷಣ ಹಕ್ಕು ಅಧಿನಿಯಮದಡಿ ಶಾಲಾ ಪ್ರವಾಸಕ್ಕೆ ಶೇ.25 ರಷ್ಟು ಸೀಟುಗಳಿಗೆ ಉಚಿತ ದಾಖಲಾತಿ ಪಡೆದುಕೊಳ್ಳುವ ಸಂಬಂಧ ಪೋಷಕರು ಅರ್ಜಿ ಸಲ್ಲಿಸಲು ಫೆ.8 ಕೊನೆ ದಿನಾಂಕವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಜಗದೀಶ್ ತಿಳಿಸಿದ್ದಾರೆ.
ಈಗಾಗಲೇ ಅರ್ಜಿಗಳನ್ನು ಸ್ವೀಕರಿಸುವ ಕಾರ್ಯಕ್ಕೆ ಚಾಲನೆ ದೊರೆತಿದ್ದು, ಪೋಷಕರು ಅಗತ್ಯ ದಾಖಲೆಗಳೊಂದಿಗೆ ಅರ್ಜಿಗಳನ್ನು ಫೆ.8ರೊಳಗೆ ಹಿಂದಿರುಗಿಸಲು ಸೂಚಿಸಲಾಗಿದೆ. ಅರ್ಜಿಗಳನ್ನು ಸ್ವೀಕರಿಸಿದ ಶಾಲೆಗಳವರು ನಿಯಮಾನುಸಾರ ಪರಿಶೀಲನೆ ನಡೆಸಿ ಆಯ್ಕೆ ಪಟ್ಟಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಲು ಫೆ.17 ಕೊನೆ ದಿನಾಂಕವಾಗಿದೆ.  ಪಟ್ಟಿಯನ್ನು ಸಂಬಂಧಿಸಿದ ಶಾಲೆಗಳಿಗೆ ಹಿಂದಿರುಗಿಸಲು ಫೆ.28 ಕೊನೆ ದಿನಾಂಕವಾಗಿದ್ದು, ಮಾ.3 ರಿಂದ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ಪ್ರಾರಂಭಗೊಳ್ಳಲಿದೆ.

ಇಂದು ಪಲ್ಸ್‌ಪೋಲಿಯೊ ಜಾಗೃತಿ ಜಾಥಾ
ಟೇಕಲ್: ಜ.19ರ ಭಾನುವಾರದಿಂದ ಪಲ್ಸ್‌ಪೋಲಿಯೊ ಕಾರ್ಯಕ್ರಮ 3 ದಿನಗಳ ಕಾಲ ನಡೆಯಲಿದ್ದು, ಟೇಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ 16 ಬೂತ್‌ಗಳಿದ್ದು 3,175 ಮಕ್ಕಳು ಪೋಲಿಯೊ ಹನಿ ಹಾಕಿಸಿಕೊಳ್ಳುತ್ತಿದ್ದಾರೆ ಎಂದು ಟೇಕಲ್‌ವೈದ್ಯಾಧಿಕಾರಿ ಡಾ. ಪ್ರಕಾಶ್ ತಿಳಿಸಿದರು. ಟೇಕಲ್‌ವ್ಯಾಪ್ತಿಯ ಕೆ.ಜಿ. ಹಳ್ಳಿ, ಹುಣಸಿಕೋಟೆ ಸುತ್ತಮುತ್ತಲ ಹಳ್ಳಿಯವರು ಈ ಕೇಂದ್ರಗಳಿಗೆ ಬಂದು ಪೋಲಿಯೊ ಹನಿ ಹಾಕಿಸಿಕೊಳ್ಳಬೇಕೆಂದರು. ಟ್ಯಾನ್ಸಿಟ್ ಬೂತ್ ಆಗಿ ಟೇಕಲ್ ರೇಲ್ವೆ ಸ್ಟೇಷನ್‌ನಲ್ಲಿ ಪೋಲಿಯೊ ಬೂತ್ ಕೆಲಸ ನಿರ್ವಹಿಸಲಿದ್ದು ರೈಲಿನಲ್ಲಿ ಬಂದು ಹೋಗುವ ಮಕ್ಕಳಿಗೆ ಈ ಬೂತ್ ಸಹಾಯಕವಾಗುತ್ತದೆ ಎಂದರು. ಇದರ ಉಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು 19ರಿಂದ 22 ವರೆಗೂ ಮೊದಲ ಸುತ್ತಿನ ಪಲ್ಸ್ ಪೋಲಿಯೊ ಕಾರ್ಯಕ್ರಮವಾಗಿದೆ.

ರಥಸಪ್ತಮಿ ಪ್ರಯುಕ್ತ ಫೆ.6ರಂದು ಸೂರ್ಯ ಯಜ್ಞ
ಕೋಲಾರ: ನಗರದ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಫೆ.6ರ ಗುರುವಾರ ಮುಂಜಾನೆ 5.30 ಗಂಟೆಗೆ ಕೋಟೆಯ ಶ್ರೀ ಸೋಮೇಶ್ವರ ದೇವಾಲಯದಲ್ಲಿ ರಥಸಪ್ತಮಿ ಪ್ರಯುಕ್ತ ಸೂರ್ಯ ಯಜ್ಞವನ್ನು ಏರ್ಪಡಿಸಲಾಗಿದೆ. 109 ಸಾಮೂಹಿಕ ಸೂರ್ಯ ನಮಸ್ಕಾರಗಳನ್ನು ಅರ್ಪಿಸಲು ನಿರ್ಧರಿಸಿದ್ದು, ನಂತರ ಶೋಭಾಯಾತ್ರೆಯ ಮೂಲಕ ಯೋಗ ಮಂದಿರ ತಲುಪಿ ಅಲ್ಲಿ ಯಜ್ಞಾದಿಗಳಲ್ಲಿ ಪಾಲ್ಗೊಳ್ಳಲು ತಿಳಿಸಲಾಗಿದೆ. ಪೂರ್ವಭಾವಿಯಾಗಿ 27 ರಿಂದ ಫೆಬ್ರವರಿ 5 ರವರೆಗೂ ಪ್ರತಿದಿನ ಬೆಳಿಗ್ಗೆ ಅಭ್ಯಾಸವನ್ನು ನಗರದ ಶ್ರೀ ಪತಂಜಲಿ ಯೋಗವುಂದಿರ, ಪತ್ರಕರ್ತರ ಭವನ, ಆರ್.ಎಲ್. ಜಾಲಪ್ಪ ಆಸ್ಪತ್ರೆಯ ನಗರ ಶಾಖೆ ಮತ್ತು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ವಕೀಲರ ಭವನದಲ್ಲಿ ನಡೆಸಲಾಗುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.

ಗಾಯನದ ಮೂಲಕ ಸುಗ್ಗಿ ಸಂಭ್ರಮ
ಕೋಲಾರ: ಮಾಲೂರು ತಾಲೂಕಿನ ದೊಡ್ಡಮಲ್ಲೆಯಲ್ಲಿ ಸುಗ್ಗಿ ಸಂಕ್ರಾಂತಿಯನ್ನು ಗಾಯನದ ಮೂಲಕ ಸಂಭ್ರಮಿಸಲಾಯಿತು. ತಾಯಿಬೇರು ಜಾನಪದ ಕಲಾ ಸಂಘದ ಅಧ್ಯಕ್ಷ ದೊಡ್ಡಮಲ್ಲೆ ರವಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜನಪದ ಗೀತೆ, ಭಾವಗೀತೆಗಳನ್ನು ಹಾಡಿ ಕಲಾದವಿರು ಹಳ್ಳಿ ಜನತೆಯ ಮನ ಗೆದ್ದರು. ಕಲಾವಿದ ಮಾರ್ಜೇನಹಳ್ಳಿ ಆರ್. ಮುನಿಸ್ವಾಮಿ, ಕಾರ್ಯಕ್ರಮದ ಉದ್ದೇಶ ತಿಳಿಸಿದರು. ಡಾ. ಸುಬ್ಬಣ್ಣ ಸಾಯಿವೆಂಕಟೇಶ್ ಶಾಸ್ತ್ರೀಯ ಸಂಗೀತ ಹಾಗೂ ನೃತ್ಯವನ್ನು ನಡೆಸಿಕೊಟ್ಟರೆ ದೊಡ್ಡಮಲ್ಲೆ ರವಿ ತಂಡ ಹಾಗೂ ಕಲಾವಿದರಾದ ದೊಡ್ಡಮಲ್ಲೆ ನಾಗರಾಜ್, ಮೂರಾಂಡಹಳ್ಳಿ ಚಿಕ್ಕರೆಡ್ಡಪ್ಪ, ಹಿರೇಕರಪನಹಳ್ಳಿ ಯಲ್ಲಪ್ಪ, ಚಂದ್ರಮ್ಮ, ಜ್ಯೋತಿ, ಮತ್ತು ಸಂಗಡಿಗರು ನಡೆಸಿಕೊಟ್ಟ ಕಾರ್ಯಕ್ರಮವು ನೆರೆದಿದ್ದವರ ಜನಮನಸೂರೆಗೊಂಡಿತು.

ಶ್ರೀಅಂಬಿಗರ ಚೌಡಯ್ಯ ಜಯಂತ್ಯುತ್ಸವ
ಕೋಲಾರ: ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವವನ್ನು ಜ.21 ರಂದು ಬೆಳಿಗ್ಗೆ 11 ಗಂಟೆಗೆ ಟಿ. ಚನ್ನಯ್ಯ ರಂಗ ಮಂದಿರದಲ್ಲಿ ಏರ್ಪಡಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ನೆರವೇರಿಸುವರು. ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಪಾಲ್ಗೊಳ್ಳಲಿದ್ದು. ಅಧ್ಯಕ್ಷತೆಯನ್ನು ಶಾಸಕ ವರ್ತೂರು ಆರ್. ಪ್ರಕಾಶ್ ವಹಿಸುವರು. ಬೆಂಗಳೂರಿನ ವಿದೂಷಿ. ಸಂಗೀತ ಕಾಕಂಡಕಿ ಮತ್ತು ಸಂಗಡಿಗರಿಂದ ವಚನ ಗಾಯನ. ವಿದ್ವಾನ್ ಎಸ್.ಆರ್. ಜ್ಞಾನಮೂರ್ತ್ತಿ ಹಾಗೂ ಡಾ. ಉದಯಕುಮಾರ್‌ರಿಂದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಬಗ್ಗೆ ವಿಶೇಷ ಉಪನ್ಯಾಸ ಇದೆ.

25 ರಂದು ರಾಷ್ಟ್ರೀಯ ಮತದಾರರ ದಿನಾಚರಣೆ
ಕೋಲಾರ: ಜಿಲ್ಲೆಯ ಎಲ್ಲಾ ಪದವಿ ಪೂರ್ವ ಕಾಲೇಜುಗಳಲ್ಲಿ ಇದೇ ಜ.25 ರಂದು ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ನಡೆಸುವಂತೆ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಜಿ. ದೊರೆಸ್ವಾಮಿ ಕಾಲೇಜುಗಳ ಆಡಳಿತ ವರ್ಗಗಕ್ಕೆ ಸೂಚಿಸಿದ್ದಾರೆ. ಮತದಾರರ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಕಾಲೇಜು ಹಂತದಲ್ಲಿ ಪ್ರಬಂಧ ಅಥವಾ ಚರ್ಚಾ ಸ್ಪರ್ಧೆ ಹಮ್ಮಿಕೊಂಡು ಮತದಾನದ ಮಹತ್ವ, ಹಕ್ಕುಗಳು, ನಿರ್ಭೀತಿ ಮತದಾನ, ಆಮಿಷಗಳಿಗೆ ಬಲಿಯಾಗದೇ ಮತದಾನ ಮಾಡುವಿಕೆ ಮತ್ತಿತರ ಅಂಶಗಳ ಕುರಿತು ಜಾಗೃತಿ ಮೂಡಿಸುವಂತೆ ತಿಳಿಸಿದ್ದಾರೆ.  ಕಾಲೇಜು ಹಂತದಲ್ಲಿ ಸ್ಪರ್ಧೆ ನಡೆಸಿ ಬಹುಮಾನ ನೀಡುವುದಲ್ಲದೇ, ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಮತದಾರರ ದಿನಾಚರಣೆ ಯಶಸ್ಸುಗೊಳಿಸುವಂತೆ ತಿಳಿಸಿದ್ದಾರೆ.

ದಾಖಲೆ ಪಡೆಯಲು ರೈತರ ಪರದಾಟ
ಕೋಲಾರ: ರೈತರು ಪಹಣಿ ಸೇರಿದಂತೆ ಇನ್ನಿತರ ದಾಖಲೆಗಳನ್ನು ಪಡೆಯಲು ಕೋಲಾರ ತಾಲೂಕು ಕಚೇರಿ ಮುಂದೆ ಗಂಟೆಗಟ್ಟಲೆ ಕಾಯುವಂತಾಗಿರುವುದರಿಂದ ತ್ವಗಿತಗತಿಯಲ್ಲಿ ದಾಖಲೆ ಪಡೆಯುವುದಕ್ಕೆ ಕ್ರಮ ಕೈಗೊಳ್ಳುವಂತೆ ರೈತ ಮುಖಂಡರು ಒತ್ತಾಯಿಸಿದ್ದಾರೆ.
    ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಮುಖಂಡರು ಜಿಲ್ಲಾಧಿಕಾರಿ ಡಿ.ಕೆ. ರವಿ ಅವರನ್ನು ಭೇಟಿಯಾಗಿ ಈ ಸಂಬಂಧ ಮನವಿ ನೀಡಿದ್ದಾರೆ. ದಾಖಲೆಗಳನ್ನು ಪಡೆಯಲು ರೈತರು ಪರದಾಡುವಂತಾಗಿದೆ. ಹಳ್ಳಿಗಳಿಂದ ಬರುವ ರೈತರಿಗೆ ಇದರಿಂದ ಕಾಲ ವ್ಯಯವಾಗುತ್ತಿದೆ. ಈ ನಿಟ್ಟಿನಲ್ಲಿ ಪಹಣಿ ನೀಡಲು ಪ್ರತ್ಯೇಕವಾಗಿ ಕೌಂಟರ್‌ಗಳನ್ನು ತೆರೆಯಬೇಕೆಂದು ಹಸಿರುಸೇನೆ ಜಿಲ್ಲಾಧ್ಯಕ್ಷ ಕೋಟಿಗಾನಹಳ್ಳಿ ಗಣೇಶಗೌಡ ಮನವಿ ಮಾಡಿದ್ದಾರೆ.

ಆದಿಮದಲ್ಲಿ ಬೆಟ್ಟದ ಹೂವುಗಳ ಸಂಭ್ರಮ
ಕೋಲಾರ: ತಾಲೂಕಿನ ತೇರಹಳ್ಳಿ ಬೆಟ್ಟದಲ್ಲಿನ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ 93ನೇ ಹುಣ್ಣಿಮೆ ಹಾಡು ಕಾರ್ಯಕ್ರಮದ ಪ್ರಯುಕ್ತ ಹಮ್ಮಿಕೊಂಡಿದ್ದ ಬೆಟ್ಟದ ಹೂವು ಮತ್ತು ಚಾರ್ಲಿ ಚಾಪ್ಲಿನ್ ಸಿನಿಮಾ ಪ್ರದರ್ಶನ ಮಕ್ಕಳನ್ನು ರಂಜಿಸಿತು. ಶುಕ್ರವಾರ ರಾತ್ರಿ ಈ ಕಾರ್ಯಕ್ರಮ ನಡೆಯಿತು. ಮಕ್ಕಳು ಪಾಲ್ಗೊಂಡು ಎರಡೂ ಚಿತ್ರಗಳನ್ನು ನೋಡಿ ಸಂಭ್ರಮಿಸಿದರು. ಲಕ್ಷ್ಮೀನಾರಾಯಣ ನಿರ್ದೇಶನದ ಬೆಟ್ಟದ ಹೂ ಮತ್ತು ಚಾರ್ಲಿ ಚಾಪ್ಲಿನ್  ದ ಕಿಡ್ಸ್ ಸಿನಿಮಾಗಳ ಬಗ್ಗೆ ಕಿರುತೆರೆ ಮತ್ತು ಸಿನಿಮಾ ನಿರ್ದೇಶಕರಾದ ಎನ್.ಎಸ್. ಶಂಕರ್ ಮಾತನಾಡಿದರು. ಲಕ್ಷ್ಮೀನಾರಾಯಣರು ಕನ್ನಡದಲ್ಲಿ ಮೊದಲಿಗೆ ನಾಂದಿ ಎಂಬ ಕಿವುಡು ಮತ್ತು ಮೂಗರ ಕುರಿತ ಪ್ರಯೋಗಾತ್ಮಕ ಸಿನಿಮಾ ನಿರ್ದೇಶಿಸಿದವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಿರಿಗನ್ನಡ ವೇದಿಕೆಯಿಂದ ಇಂದು ಸಂಕ್ರಾಂತಿ ಸಂಭ್ರಮ
ಕೋಲಾರ: ಸಿರಿಗನ್ನಡ ವೇದಿಕೆ ಜಿಲ್ಲಾ ಶಾಖೆ ವತಿಯಿಂದ ಜ.19 ರಂದು ಭಾನುವಾರ ಮಧ್ಯಾಹ್ನ 2 ಗಂಟೆಗೆ ನಗರಸಭೆಯ ಆವರಣದಲ್ಲಿರುವ ರೋಟರಿ ಭವನದಲ್ಲಿ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಚಿತ್ರಕಲಾ ಅಕಾಡೆಮಿ ವಿಶ್ರಾಂತ ಸದಸ್ಯ ಅರವಿಂದ ಭೀ. ಕಟ್ಟಿ ಕಾರ್ಯಕ್ರಮ ಉದ್ಘಾಟಿಸುವರು. ಕಸಾಪ ಜಿಲ್ಲಾಧ್ಯಕ್ಷ ಜೆ.ಜಿ. ನಾಗರಾಜ್ ಅಧ್ಯಕ್ಷತೆ ವಹಿಸಿಲಿದ್ದಾರೆ. ರೋಟರಿ ಸಂಸ್ಥೆ ಅಧ್ಯಕ್ಷ ಬಿ. ಗೋಪಾಲ ಕೃಷ್ಣಾರೆಡ್ಡಿ, ತಾಲೂಕು ಕಸಾಪ ಮಾಜಿ ಅಧ್ಯಕ್ಷೆ ಜಯಶ್ರೀ, ಉಪನ್ಯಾಸಕಿ ರುಕ್ಮಿಣಿ, ಚುಟುಕು ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಪಿ. ನಾರಾಯಣಪ್ಪ, ಸಿರಿಗನ್ನಡ ವೇದಿಕೆಯ ಅಧ್ಯಕ್ಷ ಕೆ.ಎಂ.ಜೆ. ಮೌನಿ, ಪ್ರಧಾನ ಕಾರ್ಯದರ್ಶಿ ರಮೇಶ್ ಇರುವರು. ಭರತನಾಟ್ಯ, ಕವಿತಾ ವಾಚನಾ, ಪಂಡರೀಭಜನೆ, ಕಾರ್ಯಕ್ರಮಮಗಳು ನಡೆಯಲಿವೆ.

ಪೋಲಿಯೊ ಲಸಿಕೆ ಕಾರ್ಯಕ್ರಮಕ್ಕೆ ಸಿದ್ಧತೆ
ಗುಡಿಬಂಡೆ: ತಾಲೂಕಿನಾದ್ಯಂತ ಇರುವ 7,012 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಪ್ರಚಾರ ಸಾಮಗ್ರಿ, ಔಷಧಿ ಸೇರಿದಂತೆ ಎಲ್ಲಾ ಸಿದ್ಧತೆಗಳನ್ನು ತಾಲೂಕು ಆರೋಗ್ಯ ಇಲಾಖೆ ಮಾಡಿಕೊಂಡಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಮಹಿಮಾ ತಿಳಿಸಿದ್ದಾರೆ. ತಾಲೂಕಿನಲ್ಲಿ 19ರಂದು ಪ್ರಾರಂಭವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ 3 ದಿನಗಳ ಕಾಲ ಹಾಗೂ ಪಟ್ಟಣ ಪ್ರದೇಶಗಳಲ್ಲಿ 4 ದಿನಗಳ ಕಾಲ ನಡೆಯಲಿದ್ದು, ಪಟ್ಟಣದಲ್ಲಿ 5 ಬೂತ್‌ಗಳನ್ನು ಮತ್ತು ಗ್ರಾಮಾಂತರ ಪ್ರದೇಶದಲ್ಲಿ 24 ಬೂತ್‌ಗಳನ್ನು ಕಾರ್ಯಕ್ರಮದ ಪ್ರಯುಕ್ತ ತೆರೆಯಲಿದ್ದು, ತಾಲೂಕಿನ ಒಟ್ಟು 7,012 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಉದ್ದೇಶದಿಂದ 116 ಮಂದಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಭೂ ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ
ಚಿಂತಾಮಣಿ: ಮಸ್ತೇನಹಳ್ಳಿಯಲ್ಲಿ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕಾಗಿ ರೈತರ ಜಮೀನು ಸ್ವಾದೀನ ಮಾಡಿಕೊಂಡಿದ್ದು, ಇದಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ತಾಲೂಕು ರೈತಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ತಾಲೂಕು ದಂಡಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಒತ್ತಾಯಿಸಿದರು. ರೈತ ಸಂಘ ಹಾಗೂ ಹಸಿರುಸೇನೆ ತಾಲೂಕು ಅಧ್ಯಕ್ಷ ಜೆ.ವಿ. ರಘುನಾಥರೆಡ್ಡಿ ನೇತೃತ್ವದಲ್ಲಿ ನೂರಾರು ರೈತರು ತಾಲ್ಲೂಕು ದಂಡಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ, ಭೂಸ್ವಾದೀನಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಕಳೆದ 2 ದಿನಗಳಿಂದ ಮಸ್ತೇನಹಳ್ಳಿ ಗ್ರಾಮಸ್ಥರು ಚಿಕ್ಕಬಳ್ಳಾಪುರ ಜಿಲ್ಲಾ ಆಡಳಿತ ಭವನದ ಮುಂದೆ ಅನಿರ್ಧಿಷ್ಟ ಧರಣಿ ನಡೆಸುತ್ತಿದ್ದರೂ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರುತ್ತಿರುವುದರಿಂದ ತಾಲೂಕು ದಂಡಾಧಿಕಾರಿಗಳಿಗೆ ಪರಿಹಾರ ಕೊಡಲು ಒತ್ತಾಯಿಸಿ ಮನವಿ ಸಲ್ಲಿಸಿದರು.

'ಕನ್ನಡ ಉಳಿವಿಗಾಗಿ ಎಲ್ಲರೂ ಶ್ರಮಿಸಿ'
ಶಿಡ್ಲಘಟ್ಟ: ಕನ್ನಡ ಭಾಷೆ, ಸಾಹಿತ್ಯ ಉಳಿಸಬೇಕಾದ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರ ಮೇಲಿದೆ ಎಂದು ಜಿಲ್ಲಾ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸಿ.ಬಿ. ಹನುಮಂತಪ್ಪ ಹೇಳಿದರು.
ಪಟ್ಟಣದ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ತಾಲೂಕು ಚುಟುಕು ಸಾಹಿತ್ಯ ಪರಿಷತ್‌ನಿಂದ ಆಯೋಜಿಸಿದ್ದ ಸಂಕ್ರಾಂತಿ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿ, ಕನ್ನಡ ಪರ ಸಂಘಟನೆಗಳು, ವಿಚಾರವಂತರು ಪ್ರತಿಯೊಬ್ಬ ಕನ್ನಡಿಗರು ಭಾಷೆಯ ಉಳಿವಿಗಾಗಿ ಶ್ರಮಿಸಬೇಕು ಎಂದರು. ಸಮಾರಂಭದಲ್ಲಿ ಹಲಗೆಯ ಮೇಲೆ ಚುಟುಕು ಕವನಗಳನ್ನು ಬರೆಯುವ ಮುಖಾಂತರ ಉದ್ಘಾಟನೆ ಮಾಡಲಾಯಿತು. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಚಲಪತಿಗೌಡ, ವಿ. ಕೃಷ್ಣ, ಕಾಗತಿ ವೆಂಕಟರತ್ನಂ, ಎಸ್.ವಿ. ನಾಗರಾಜರಾವ್, ಆರ್. ಕೃಷ್ಣಪ್ಪ, ಮಳ್ಳೂರು ಹರೀಶ್ ಪ್ರೇಮಲೀಲಾ, ಚನ್ನಕೃಷ್ಣ ಇದ್ದರು.

ಅಂಗವಿಕಲ ಮಕ್ಕಳನ್ನು ಶಾಲೆಗೆ ದಾಖಲಿಸಿ
ಮುಳಬಾಗಲು: ಅಂಗವಿಕಲ ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಲು ಆವಣಿ ರಾಮಲಿಂಗೇಶ್ವರ ಸ್ವಾಮಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಇಕ್ಬಾಲ್ ಕೋರಿದರು. ತಾಲೂಕಿನ  ಆವಣಿ ಗ್ರಾಮದ ಸರ್ಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ಆವಣಿ ಹೋಬಳಿ ಮಟ್ಟದ 1 ರಿಂದ 8 ನೇ ತರಗತಿಯವರೆಗೂ ವ್ಯಾಸಂಗ ಮಾಡುವ ಅಂಗವಿಕಲ ಮಕ್ಕಳ ಪೋಷಕರ ಸಭೆಯಲ್ಲಿ ಮಾತನಾಡಿದರು. ಅಂಗವಿಕಲ ಮಕ್ಕಳ ನಿರ್ವಹಣೆಯಲ್ಲಿ ಪೋಷಕರ ಪಾತ್ರ ಮತ್ತು ಜವಾಬ್ದಾರಿಗಳ ಬಗ್ಗೆ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ಶಿವಕುಮಾರ್ ಮಾತನಾಡಿದರು. ವಿಶೇಷ ಶಿಕ್ಷಕ ಕೆ.ವಿ. ಪ್ರಕಾಶ್ ಸರ್ವಶಿಕ್ಷಣ ಅಭಿಯಾನ ಮತ್ತು ಸರ್ಕಾರಿ, ಸರ್ಕಾರೇತರ ಸಂಸ್ಥೆಗಳಿಂದ ಅಂಗವಿಕಲ ಮಕ್ಕಳಿಗೆ ಸಿಗುವ ಸವಲತ್ತುಗಳ ಕುರಿತು ವಿವರಿಸಿದರು.

ಚುಟುಕು ಸಾಹಿತ್ಯ ರಚನೆ ಮಾಡಲು ಸಲಹೆ
ಕೋಲಾರ; ಕ್ಷಣಾರ್ಧದಲ್ಲಿ ಮೂಡಿ ಮರೆಯಾಗುವ, ಭಾವಭಾವನೆಗಳನ್ನು ಸೆರೆಹಿಡಿದು ಅದಕ್ಕೆ ಜೀವ ಸತ್ವವನ್ನು ನೀಡುವ ಚುಟುಕುಗಳಿಂದ ಸಮಾಜದಲ್ಲಿ ಬದಲಾವಣೆ ಕಾಣಬಹುದೆಂದು ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಕೆ.ಎಸ್. ನಾಗರಾಜಗೌಡ ಅಭಿಪ್ರಾಯಪಟ್ಟರು.
ನಗರದ ಸುಭಾಷ್ ವಿದ್ಯಾ ಸಂಸ್ಥೆಯಲ್ಲಿ ಶನಿವಾರ ಇಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಮತ್ತು ರೋಟರಿ ಸಂಸ್ಥೆ ಹಮ್ಮಿಕೊಂಡಿದ್ದ ಚುಟುಕು ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಚನೆ ಮಾಡುವುದೆಲ್ಲ ಚುಟುಕು ಸಾಹಿತ್ಯ ಆಗಿರದೆ ಅದು ದೀರ್ಘಕಾಲಕ್ಕೆ ನೆನಪಿನಲ್ಲಿ ಉಳಿಯುವ ಸಮಾಜದ ಬದಲಾವಣೆಗೆ ಕಾರಣಾಗುವ ಮಾಧ್ಯಮ ಆಗಬೇಕು. ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಮಕ್ಕಳು ಚುಟುಕು ಸಾಹಿತ್ಯ ರಚನೆ ಮಾಡುವುದಕ್ಕೆ ಪ್ರೋತ್ಸಾಹ ಹಾಗೂ ತರಬೇತಿ ನೀಡಿದಾಗ ಮಾತ್ರ ಸಾಹಿತ್ಯ ಕ್ಷೇತ್ರದಲ್ಲಿ ಗಟ್ಟಿತನ ಕಾಣಲು ಸಾಧ್ಯವಾಗುತ್ತದೆ ಎಂದರು.
ಭಾಷೆ ಭಾವನೆ ಏರಿಳಿತಗಳಿಂದ ರಚಿತವಾಗುವ ಚುಟುಕುಗಳು ಅನೇಕ ವರ್ಷಗಳ ಹಿಂದಿನಿಂದಲೂ ಆಡಭಾಷೆಯಾಗಿ ಮೂಡಿ ಬಂದಿದ್ದು, ಇಂತಹ ಸಾಹಿತ್ಯದ ಕೃಷಿ ವಿದ್ಯಾರ್ಥಿಗಳಿಂದ ಆರಂಭವಾಗಬೇಕು ಎಂದರು.

ಹಿಪ್ಪುನೇರಳೆ ತೋಟಕ್ಕೆ ಕೀಟನಾಶಕ; ಹುಳುಗಳ ಸಾವು
ಶಿಡ್ಲಘಟ್ಟ: ಹಿಪ್ಪುನೇರಳೆ ತೋಟಕ್ಕೆ ದುಷ್ಕರ್ಮಿಗಳು ಕೀಟನಾಶಕ ಸಿಂಪಡಿಸಿದ ಪರಿಣಾಮ ಸುಮಾರು 2 ಲಕ್ಷ ರುಪಾಯಿ ಮೌಲ್ಯದ ರೇಷ್ಮೆ ಬೆಳೆ ನಷ್ಟವಾಗಿರುವ ಘಟನೆ ತಾಲೂಕಿನ ಗಂಗನ ಹಳ್ಳಿಯಲ್ಲಿ ನಡೆದಿದೆ.
ಗಂಗನಹಳ್ಳಿಯ ರೈತ ಕೃಷ್ಣಪ್ಪ ಮತ್ತು ಮುನಿಬಚ್ಚಪ್ಪ ಎಂಬ ರೈತರಿಗೆ ಸೇರಿದ ಸುಮಾರು 400 ಮೊಟ್ಟೆ ರೇಷ್ಮೆ ಹುಳುಗಳು ವಿಷ ಮಿಶ್ರಿತ ಹಿಪ್ಪುನೇರಳೆ ಸೊಪ್ಪನ್ನು ತಿಂದು ಸತ್ತುಹೋಗಿವೆ. ರೇಷ್ಮೆ ಬೆಳೆಯನ್ನೇ ನಂಬಿ ಜೀವನ ನಡೆಸುತ್ತಿರುವ ರೈತರು ನೆರೆಯ ಮುತ್ತೂರು ಗ್ರಾಮದ ಗೋವಿಂದಾಚಾರಿ ಎಂಬವರ ತೋಟದಿಂದ ಹಿಪ್ಪುನೇರಳೆ ಸೊಪ್ಪನ್ನು ಖರೀದಿ ಮಾಡಿ ತಂದು ರೇಷ್ಮೆ ಹುಳುಗಳಿಗೆ ಹಾಕಿದ್ದಾರೆ. ಮೂರು ದಿನಗಳಲ್ಲಿ ಹಣ್ಣಾಗಬೇಕಾಗಿದ್ದ ರೇಷ್ಮೆ ಹುಳುಗಳು ವಿಷ ಮಿಶ್ರಿತ ಸೊಪ್ಪನ್ನು ತಿಂದು ಸಾವನ್ನಪ್ಪಿದ್ದು, ಕೃಷ್ಣಪ್ಪ ಮತ್ತು ಮುನಿಬಚ್ಚಪ್ಪ ಕಂಗಾಲಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement