'ಹಳ್ಳಿಗಳ ಅಭಿವೃದ್ಧಿಗೆ ನರೇಗಾ ಅನುಷ್ಠಾನವಾಗಲಿ'
ಕ.ಪ್ರ.ವಾರ್ತೆ , ಕೋಲಾರ , ಜ.18
ನರೇಗಾ ಯೋಜನೆ ಸಮಪರ್ಕ ಅನುಷ್ಠಾನಕ್ಕೆ ಅಧಿಕಾರಿಗಳು ಸೂಕ್ತ ಕ್ರಿಯಾ ಯೋಜನೆ ರೂಪಿಸಬೇಕು, ಹಳ್ಳಿಗಳ ಅಭಿವೃದ್ಧಿಗೆ ಪೂರಕ ಕೆಲಸಗಳು ನಡೆಯದಿದ್ದರೆ ಯೋಜನೆ ಫಲಪ್ರದವಾಗುವುದಿಲ್ಲವೆಂದು ಶಾಸಕ ಕೆ.ಆರ್. ರಮೇಶ್ ಕುಮಾರ್ ಅಭಿಪ್ರಾಯಪಟ್ಟರು.
ಇಲ್ಲಿನ ತಾಪಂ ಕಚೇರಿಯಲ್ಲಿ ಶನಿವಾರ ನರೇಗಾ ಯೋಜನೆಗೆ ಸಂಬಂಧಿಸಿದಂತೆ ವಿವಿಧ ಗ್ರಾಪಂ ಪಿಡಿಒಗಳಿಂದ ಮಾಹಿತಿ ಪಡೆದ ಅವರು, ಕೇಂದ್ರ ಸರ್ಕಾರದ ಸುತ್ತೋಲೆ ಕೆಲವು ಸಲ ನಮಗೆ ಮಾರಕವಾಗಿದೆ. ಅಧಿಕಾರಿಗಳು ಕಡ್ಡಾಯವಾಗಿ ಗ್ರಾಮ ಸಭೆಗಳನ್ನು ನಡೆಸಿ ಹಳ್ಳಿಗಳ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಬೇಕೆಂದರು.
ಹೋಳೂರು ಹೋಬಳಿಯಲ್ಲಿ ನರೇಗಾ ಅನುಷ್ಠಾನಕ್ಕಾಗಿ 2012-13ನೇ ಸಾಲಿನಲ್ಲಿ 5 ಕೋಟಿ ರು ಬಿಡುಗಡೆ ಮಾಡಿದ್ದು ಕೇವಲ 12 ಲಕ್ಷ ರು. ಖರ್ಚು ಮಾಡಲಾಗಿದೆ, ಕೇಂದ್ರ ಸರ್ಕಾರ ಹಣ ಜಾಸ್ತಿ ಇದೆ ಎಂಬ ಕಾರಣಕ್ಕೆ ಜಿಲ್ಲೆಗೆ ಅನುದಾನ ಹೆಚ್ಚಾಗಿ ನೀಡಿರಬೇಕೆಂಬ ಉದ್ದೇಶ ಅಧಿಕಾರಿಗಳದ್ದಾಗಿದ್ದರೆ ತಪ್ಪಾಗುತ್ತದೆ, ಅನುದಾನ ಹೆಚ್ಚಾಗಿ ಬಂದಾಗ ಅದನ್ನು ಸದ್ಬಳಕೆ ಮಾಡಿಕೊಂಡು ಗ್ರಾಮ ಪಂಚಾಯಿತಿಗಳಿಗೆ ಶಾಶ್ವತ ಆಸ್ತಿಗಳನ್ನು ಕ್ರೂಢಿಕರಿಸದೆ ಹಣವನ್ನು ಕಾಲಿನಿಂದ ಒದ್ದಿರುವುದು ಅಧಿಕಾರಿಗಳ ಬೇಜಾವಾಬ್ದಾರಿ ತನವನ್ನು ತೋರಿಸುತ್ತದೆ ಎಂದು ಕಿಡಿಕಾರಿದರು. ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ ನನ್ನ ವಿರೋಧವಿಲ್ಲ. ಆದರೆ, ಶೌಚಾಲಯಗಳ ಹೆಸರಿನಲ್ಲಿ ಕಕ್ಕಸ್ಸು ತಿನ್ನುವ ನಿಸ್ಸಿಮರು ಇದ್ದಾರೆ ಎಂದು ಯಾರ ಹೆಸರನ್ನು ಪ್ರಸ್ತಾಪಿಸದೆ ಆಕ್ರೋಶ ವ್ಯಕ್ತಪಡಿಸಿದರು.
ನರೇಗಾ ಯೋಜನೆಯಲ್ಲಿ ಶಾಲಾ ಕಾಂಪೌಂಡ್ ನಿರ್ಮಾಣ, ರಾಜ ಕಾಲುವೆಗಳ ಅಭಿವೃದ್ಧಿ, ಕಲ್ಯಾಣಿಗಳ ಪುನಶ್ಚೇತನ, ರಸ್ತೆ, ಸ್ಮಶಾನ, ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಜನತೆಯಲ್ಲಿ ಇದರ ಬಗ್ಗೆ ಅರಿವು ಮೂಡಿಸಲು ವ್ಯಾಪಕ ಪ್ರಚಾರ ಕೈಗೊಳ್ಳಬೇಕು, ನೀಲಗಿರಿ, ಅಕೇಷಿಯಾ ಗಿಡಗಳನ್ನು ನೆಡುವುದನ್ನು ಬಿಟ್ಟು ನೆರಳೆ, ಹೊಂಗೆ, ಸಪೋಟಾ, ಮಾವು, ಹುಣಸೆ, ಸೀಬೆ ಮುಂತಾದ ಗಿಡಗಳನ್ನು ರಸ್ತೆ ಬದಿಯಲ್ಲಿ ಬೆಳೆದರೆ ಪ್ರಾಣಿಗಳಿಗೆ ಆಹಾರ, ಜನರಿಗೆ ನೆರಳು ಸಿಗುತ್ತದೆ ಎಂದು ಪಿಡಿಒಗಳಿಗೆ ಸಲಹೆ ನೀಡಿದರು. ನರೇಗಾ ಯೋಜನೆಗೆ ಸಂಬಂಧಿಸಿದಂತೆ ಗ್ರಾಮ ಸಭೆಗಳನ್ನು ನಡೆಸಿ ಫೆ.4ರೊಳಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಕಾನೂನು ಪ್ರಕಾರ ಕೆಲಸ ಮಾಡಿಸದಿದ್ದರೆ ಜೈಲು ವಾಸ ಗ್ಯಾರೆಂಟಿ ಎಂದು ಎಚ್ಚರಿಕೆ ನೀಡಿದ ಶಾಸಕ ರಮೇಶ್ ಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಫೆ.23ಕ್ಕೆ ಶ್ರೀನಿವಾಸಪುರಕ್ಕೆ ಬರುತ್ತಿದ್ದು ಅದಕ್ಕೆ ಮುಂಚಿತವಾಗಿಯೇ ಕುಡಿಯುವ ನೀರಿನ ಕಾಮಗಾರಿಗಳು ಹಾಗೂ ನರೇಗಾ ಯೋಜನೆ ಅನುಷ್ಠಾನಕ್ಕೆ ಬಂದಿರಬೇಕೆಂದು ಸೂಚಿಸಿದರು.
ನರೇಗಾ ಕೆಲಸ ಹೀಗೇ ಆಗಬೇಕೆಂದು ಕೆಲವರು ಹೆಗಲ ಮೇಲೆ ಟವಲ್ ಹಾಕಿಕೊಂಡು ಬಂದು ಬೆದರಿಸುವವರಿದ್ದಾರೆ. ಅದಕ್ಕೆಲ್ಲ ಭಯಬೇಡಿ, ನಿಮ್ಮ ರಕ್ಷಣೆಗೆ ನಾನಿದ್ದೇನೆ. ಅಭಿವೃದ್ಧಿ ಕೆಲಸಕ್ಕೆ ಬೇಕಾದ ಹಣವನ್ನು ಸರ್ಕಾರದಿಂದ ಕೂಡಿಸುವೆ. ನನಗೆ ಬೇಕಾಗಿರುವುದು ಫಲಶೃತಿ ಅಷ್ಟೇ ಎಂದು ತಿಳಿಸಿದರು. ಗ್ರಾಮಗಳಲ್ಲಿ ಅಂತರ್ಜಲ ಕಡಿಮೆ ಆಗಿರುವುದರಿಂದ ಶುದ್ಧವಾದ ಕುಡಿಯುವ ನೀರು ಸಿಗುತ್ತಿಲ್ಲ, ನೈಟ್ರೈಟ್, ಪ್ಲೊರೈಡ್ ಅಂಶ ಹೆಚ್ಚಾಗುತ್ತಿದೆ. ಇದರಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವುದರಿಂದ ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಬೇಕೆಂದರು.