ಇಂದು ಸಾರ್ವಜನಿಕರ ಕುಂದುಕೊರತೆ ಸಭೆ
ಚಿಂತಾಮಣಿ: ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ಚರ್ಚಿಸಿ ಕಾನೂನು ಸುವ್ಯವಸ್ಥೆ ಕಾಪಾಡಲು ಜ.20 ರ ಬೆಳಗ್ಗೆ 11 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲಾ ರಕ್ಷಣಾಧಿಕಾರಿ ಡಾ. ದಿವ್ಯ ಗೋಪಿನಾಥ್ ಅಧ್ಯಕ್ಷತೆಯಲ್ಲಿ ಸಭೆ ಹಮ್ಮಿಕೊಳ್ಳಾಗಿದೆ ಎಂದು ನಗರ ವೃತ್ತ ನಿರೀಕ್ಷಕ ನಂಜಪ್ಪ ತಿಳಿಸಿದ್ದಾರೆ.
ನಗರದ ಕೆಎಂಡಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಬೆಳಗ್ಗೆ 11 ಗಂಟೆಗೆ ಜಿಲ್ಲಾ ರಕ್ಷಾಣಾಧಿಕಾರಿ ಡಾ. ದಿವ್ಯ ಗೋಪಿನಾಥ್ ಅವರ ಅಧ್ಯಕ್ಷತೆಯಲ್ಲಿ ನಾಗರಿಕರ ಕುಂದು ಕೊರತೆಗಳ ಸಭೆ ಕರೆಯಲಾಗಿದ್ದು, ನಾಗರಿಕರು ಸಭೆಯಲ್ಲಿ ಪಾಲ್ಗೊಂಡು ಅಹವಾಲು ನೀಡಲಿದ್ದಾರೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಭೆಗೆ ಡಿವೈಎಸ್ಪಿ ಸಣ್ಣತಿಮ್ಮಪ್ಪ, ನಗರಸಭಾ ಸದಸ್ಯರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಲಿದ್ದಾರೆ.
ಸ್ಮಶಾನ ಜಾಗ ಗುರ್ತಿಸಲು ಒತ್ತಾಯ
ಬಂಗಾರಪೇಟೆ: ಹೆಣಗಳನ್ನು ಹೂಳಲು ಜಾಗವಿಲ್ಲದೆ ಗ್ರಾಮಸ್ಥರು ಪರದಾಡುತ್ತಿದ್ದು ಕೂಡಲೆ ಗ್ರಾಮಕ್ಕೆ ಸ್ಮಶಾನ ಜಾಗವನ್ನು ಗುರುತಿಸಿಕೊಡಿ ಎಂದು ಅಬ್ಬಿಗಿರಿಹೊಸಹಳ್ಳಿ ಗ್ರಾಮಸ್ಥರು ಶಾಸಕರನ್ನು ಒತ್ತಾಯಿಸಿದರು. ಹುಲಿಬೆಲೆ ಪಂಚಾಯ್ತಿ ವ್ಯಾಪ್ತಿಯಲ್ಲಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಕೈಗೊಂಡಿರುವ ಶಾಸಕರ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ಅಬ್ಬಿಗಿರಿಹೊಸಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದಾಗ ಗ್ರಾಮಸ್ಥರು ಬೇಡಿಕೊಂಡರು. ಇದಕ್ಕೆ ಸ್ಪಂದಿಸಿದ ಶಾಸಕ ನಾರಾಯಣಸ್ವಾಮಿ ತಾಸೀಲ್ದಾರ್ ಜೊತೆ ಮಾತನಾಡಿ ಸ್ಮಶಾನಕ್ಕೆ ಮೀಸಲಿಟ್ಟಿರುವ ಜಾಗ ಸರ್ವೆ ಮಾಡಿಸಿ ಒತ್ತುವರಿ ತೆರವುಗೊಳಿಸಲು ಸೂಚಿಸಿದರು. ಸರ್ಕಾರಿ ಜಾಗವನ್ನು ಯಾರೇ ಇರಲಿ ಒತ್ತುವರಿ ಮಾಡಿದ್ದರೆ ಕೂಡಲೆ ಸ್ವಯಂ ಪ್ರೇರಿತರಾಗಿ ತೆರವುಗೊಳಿಸಲು ಮುಂದಾಗಿ ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ಧವಾಗಿ ಎಂದು ಒತ್ತುವರಿದಾರರಿಗೆ ಎಚ್ಚರಿಕೆ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್,ಪುರಸಭೆ ಸದಸ್ಯ ಕೆ. ಚಂದ್ರಾರೆಡ್ಡಿ, ಪಂಚಾಯ್ತಿ ಅಧ್ಯಕ್ಷ ಶ್ರೀನಿವಾಸ್, ಸುರೇಶ್, ರಾಮಪ್ಪ, ಇಒ ಕೆ.ಎಸ್. ಭಟ್ ಇದ್ದರು.
ಇಂದಿನಿಂದ ಅದಾಲತ್ ಕಾರ್ಯಕ್ರಮ
ಟೇಕಲ್: ಗ್ರಾಮಸ್ಥರ ಸಮಕ್ಷಮದಲ್ಲಿ ರೆತರ ಖಾತೆ ಬದಲಾವಣೆ, ತಿದ್ದುಪಡಿ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳನ್ನು ಸಕಾಲದಲ್ಲಿ ಒದಗಿಸಲು ಮಾಲೂರು ತಾಲೂಕು ಕಂದಾಯ ಇಲಾಖೆ ಉತ್ತಮವಾದ ಸೇವೆ ನೀಡಲು ಹೋಬಳಿಯಾದ್ಯಂತ ತಹಸೀಲ್ದಾರ್ ಡಾ. ಸುಧಾಪಾಯಸ್ ಅವರ ನೇತೃತ್ವದಲ್ಲಿ ಅದಾಲತ್ ಕಾರ್ಯಕ್ರಮ ನಡೆಯುತ್ತಿದೆ. ಖಾತಾ ಬದಲಾವಣೆಗಾಗಿ ಇಲಾಖೆಗೆ ಅಲೆಯುವ ಹೊರೆ ಇಲ್ಲದೆ ಸ್ಥಳದಲ್ಲೆ ನೀಡುವ ಈ ಕಾರ್ಯಕ್ರಮ ಮೊದಲಿಗೆ ಜ.20 ರಂದು ಹುಣಸಿಕೋಟೆ, 21 ಹಳೇಪಾಳ್ಯ, ನಿದರಮಂಗಲ 22, ಟೇಕಲ್ 23, ಮಾಕಾರಹಳ್ಳಿ 24, ನೂಟವೆ 25, ಬನಹಳ್ಳಿ 27, ಸೀತಹಳ್ಳಿ 28, ಹುಳದೇನಹಳ್ಳಿ 29, ಕೊಂಡಶೆಟ್ಟಹಳ್ಳಿ 30, ಕೆ.ಜಿ. ಹಳ್ಳಿಯಲ್ಲಿ ಶುಕ್ರವಾರ 31 ರಂದು ಪ್ರತಿದಿನ ಬೆಳಿಗ್ಗೆ 11 ರಿಂದ 3 ಗಂಟೆಯವರೆಗೆ ಕಾರ್ಯಕ್ರಮ ನಡೆಯುತ್ತಿದ್ದು ಈ ವ್ಯಾಪ್ತಿಯ ಎಲ್ಲಾ ರೈತರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಟೇಕಲ್ ನಾಡಕಚೇರಿ ಉಪತಹಸೀಲ್ದಾರ್ ಶ್ರೀಧರ್ ತಿಳಿಸಿದ್ದಾರೆ. ಟೇಕಲ್ ನಾಡಕಚೇರಿಗೆ ನೂತನ ಉಪ ತಹಸೀಲ್ದಾರ್ ಆಗಿ ಶ್ರೀಧರ್ ಅಧಿಕಾರ ವಹಿಸಿಕೊಂಡಿದ್ದು ಹಿಂದೆ ಇವರು ಕೋಲಾರ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಚುನಾವಣಾ ವಿಭಾಗದ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಇವರಿಗೆ ನಾಡಕಚೇರಿ ಸಿಬ್ಬಂದಿ ಶುಭಕೋರಿದರು.
ಕರಾಟೆ ತರಬೇತಿ ಆರಂಭ
ಕೆಜಿಎಫ್: ಕೊರಿಯಾ ದೇಶದಲ್ಲಿ ಕರಾಟೆ ಪಟುಗಳ ಸಾಹಸ ಗುರುತಿಸಿ ಗಿನ್ನೀಸ್ ದಾಖಲೆಯಲ್ಲಿ ಹೆಸರು ನೊಂದಾಯಿಸಿ ಪ್ರಮಾಣ ಪತ್ರ ವಿತರಿಸುವ ಪ್ರಕ್ರಿಯೆ ಪ್ರಾರಂಭಿಸಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಕರಾಟೆ ಪಟುಗಳಿಗೆ ತರಬೇತಿ ಶಿಬಿರಗಳನ್ನು ನಡೆಸಲಾಗುತ್ತಿದೆ. ರಾಜ್ಯದಲ್ಲಿ ಪ್ರಥಮ ಬಾರಿಗೆ ಈ ತರಬೇತಿ ಶಿಬಿರವನ್ನು ಕೆಜಿಎಫ್ ಕ್ಷೇತ್ರದ ಬೆಮೆಲ್ ಕ್ರಿಡಾಂಗಣದಲ್ಲಿ ಯು.ಎನ್. ಟೈಕಾಂಡೋ ಮೆರಿಟಲ್ ಆರ್ಟ್ಸ್ ಹಾಗೂ ಜೆ.ಆರ್. ಅಂತಾರಾಷ್ಟ್ರೀಯ ಟೈಕಾಂಡೋ ಅಕಾಡೆಮಿ ಸಹಯೋಗದೊಂದಿಗೆ ಕರಾಟೆ ತರಬೇತಿ ಹಮ್ಮಿಕೊಳ್ಳಲಾಗಿದೆ. ಈ ಕರಾಟೆ ಶಿಬಿರದಲ್ಲಿ ಮಾತನಾಡಿದ ಆಂಧ್ರಪ್ರದೇಶದ ಭಾರತ ಸೈನಿಕರಿಗೆ ಕರಾಟೆ ಶಿಕ್ಷಣ ನೀಡುತ್ತಿರುವ ಗಜೇಂದ್ರನ್ ಮಾತನಾಡಿ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಚತ್ತೀಸ್ಗಡ, ದೆಹಲಿ, ಗುಜರಾತ್, ಕೊಲ್ಕತ್ತ, ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯಗಳಲ್ಲಿ ಆಯಾ ಕರಾಟೆ ಶಾಲೆಗಳ ವಿದ್ಯಾರ್ಥಿಗಳು ಪ್ರದರ್ಶಿಸುವ ಪ್ರತಿಭೆಯನ್ನು ಹಾಗೂ ಸಾಹಸಗಳನ್ನು ಸಿ.ಡಿ.ಮೂಲಕ ಚಿತ್ರೀಕರಣ ಮಾಡಿ ಕೊರಿಯರ್ ಮೂಲಕ ಕೊರಿಯಾ ದೇಶಕ್ಕೆ ಕಳುಹಿಸಲಾಗುತ್ತದೆ. ಅದೇ ರೀತಿ ಪಲಿತಾಂಶ ಇದೇ ಜನವರಿ ತಿಂಗಳಲ್ಲೆ ಪ್ರಕಟಿಸಿ ಗಿನ್ನೀಸ್ ದಾಖಲೆಯಲ್ಲಿ ಹೆಸರು ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸುವುದಾಗಿ ತಿಳಿಸಿದರು. ಪೊಲೀಸರಿಗೆ ಕರಾಟೆ ಚರಬೇತಿ ನೀಡುವ ಕರಾಟೆ ಶಿಕ್ಷಕ ಡೊಮಿಕ್ಸ್ ಜೇವಿಯರ್ ಮಾತನಾಡಿದರು. ಈ ವೇಳೆ ಕರಾಟೆ ಬ್ಲಾಕ್ ಬೆಲ್ಟ್ 5ನೇ ವಿಭಾಗದ ಮುಖ್ಯಸ್ಥ ಐ. ಉಳಗನಾದನ್ ಕರಾಟೆ ಶಾಲೆಯ ಸುಮಾರು 65 ವಿರ್ದ್ಯಾಗಳು ಭಾಗವಹಿಸಿದ್ದರು. ಬೆಮೆಲ್ ಕ್ರೀಡಾಂಗಣದ ಮುಖ್ಯಸ್ಥರು ಮಕ್ಕಳ ಪೊಷಕರು, ಶಿಕ್ಷಕರು ಹಾಜರಿದ್ದರು.
ಮನೆಗಳವು
ಕೆಜಿಎಫ್: ನಕಲಿ ಕೀಲಿ ಬಳಸಿ ಮನೆಯ ಬಾಗಿಲು ತೆಗೆದು ಒಳ ಪ್ರವೇಶಿಸಿದ ದುಷ್ಕರ್ಮಿಗಳು ಬೀರುವಿನಲ್ಲಿಟ್ಟಿದ್ದ ನಗದು ಹಾಗೂ ಇತರೆ ವಸ್ತುಗಳನ್ನು ದೋಚಿ ಪರಾರಿಯಾಗಿರುವ ಘಟನೆ ಬೆಮೆಲ್ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಾಲಾರ್ನಗರದ ನಿವಾಸಿ ಬಿಂದು ಲಕ್ಷ್ಮೀ ಎಂಬವರ ಮನೆಗೆ ಪ್ರವೇಶಿಸಿದ ಕಳ್ಳರು ಬೀರುವಿನಲ್ಲಿಟ್ಟಿದ್ದ 90 ಸಾವಿರ ನಗದು ಸೇರಿದಂತೆ ಒಟ್ಟು 1.42 ಲಕ್ಷ ಮೌಲ್ಯದ ಲ್ಯಾಪ್ಟಾಪ್, ಮೊಬೈಲ್ ಫೋನ್, ಕ್ಯಾಮರಾ ಹಾಗೂ ಇತರೆ ವಸ್ತುಗಳನ್ನು ದೋಚಿದ್ದಾರೆ ಎಂದು ಬಿಂದುಲಕ್ಷ್ಮೀ ಬೆಮೆಲ್ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಶಾಸಕ ವರ್ತೂರ್ ಪ್ರಕಾಶ್ಗೆ ಸನ್ಮಾನ
ಕೋಲಾರ: ನಗರದ ಬೈರೇಗೌಡ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀ ರುಕ್ಮಣಿ, ಸತ್ಯಭಾಮಾ ಸಮೇತ ಶ್ರೀ ಕೃಷ್ಣ, ಶ್ರೀ ಮಹಾಗಣಪತಿ, ಶ್ರೀ ಸುಬ್ರಮಣ್ಯ ಸ್ವಾಮಿ ದೇವಾಲಯದ ಪ್ರಥಮ ವಾರ್ಷಿಕ ಪೂಜಾ ಮಹೋತ್ಸವದಲ್ಲಿ ಪಾಲ್ಗೊಂಡ ಶಾಸಕ ವರ್ತೂರು ಪ್ರಕಾಶ್ 25 ಲಕ್ಷ ರು. ವೆಚ್ಚದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಸಮುದಾಯ ಭವನದ ಶಂಕುಸ್ಥಾಪನೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಸಕರನ್ನು ಸನ್ಮಾನಿಸಲಾಯಿತು. ಸಿಬಿಐಟಿ ಕಾರ್ಯದರ್ಶಿ ಕೃಷ್ಣಾರೆಡ್ಡಿ, ಲಕ್ಷ್ಮಣ್, ಶಂಕರಪ್ಪ, ಪವನ್ ನಾರಾಯಣಸ್ವಾಮಿ, ರುದ್ರಸ್ವಾಮಿ, ಚಂದ್ರಪ್ಪ, ಮಂಜುನಾಥ್, ರಮೇಶ್, ಪುಟ್ಟಸ್ವಾಮಿ, ದೇವರಾಜ್, ಗೋಪಾಲಗೌಡ, ಗೋಪಾಲ್, ದೀಕ್ಷೀತ್, ಅಪ್ಪಿ, ಶ್ರೀನಿವಾಸ್, ಶಿವಪ್ರಕಾಶ್, ಮುಕುಂದಪ್ಪ ಇದ್ದರು.
ಬಂಡೆ ನಿಧನಕ್ಕೆ ಸಂತಾಪ
ಚಿಂತಾಮಣಿ: ದಕ್ಷ ಮತ್ತು ಪ್ರಾಮಾಣಿಕ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ಅವರ ಸಾವಿಗೆ ತಾಲೂಕು ವಾಸವಿ ಯುವ ಜನ ಸಂಘ ಸಂತಾಪ ವ್ಯಕ್ತಪಡಿಸಿದೆ. ಮಲ್ಲಿಕಾರ್ಜುನ ಬಂಡೆ ಅವರ ಸೇವೆ ಅಮೂಲ್ಯವಾದದ್ದು ಅವರ ಪುತ್ಥಳಿಯನ್ನು ಗುಲ್ಬರ್ಗ ಅಥವಾ ವಿಧಾನ ಸೌಧ ಮುಂಭಾಗದಲ್ಲಿ ನಿರ್ಮಿಸಲು ಮುಂದಾಗಬೇಕೆಂದು ಸಂಘ ಸರ್ಕಾರವನ್ನು ಒತ್ತಾಯಿಸಿದೆ. ಸಂತಾಪ: ನಗರದ ದೊಡ್ಡಪೇಟೆಯ ವಾಸವಿ ವಿದ್ಯಾರ್ಥಿ ನಿಲಯದಲ್ಲಿ ವಾಸವಿ ಯುವ ಜನ ಸಂಘ ಹಾಗೂ ಲೈಯನ್ಸ್ ಕ್ಲಬ್ ಪದಾಧಿಕಾರಿಗಳಾದ ವಾಸವಿ ಸುರೇಶ್, ಎಂ.ಎನ್. ಕಿರಣ್, ವಿಶ್ವನಾಥ್, ಸಂದೇಶ್ ಇತರರು ಸೇರಿ ಮತ್ತೇ ಹುಟ್ಟಿ ಬಾ ಓ ವೀರ ಯೋಧನೇ ಎಂದು ಅವರ ಆತ್ಮಕ್ಕೆ ಶಾಂತಿ ಕೋರಿದರು.