ಕಂಬ ಇದೆ ದೀಪ ಇಲ್ಲ!?
ಕೋಲಾರ ನಗರದ ಮಹಾತ್ಮಗಾಂಧಿ ಉದ್ಯಾನವನದ ಹಿಂಭಾಗದಲ್ಲಿ ಎಸ್ಎನ್ಆರ್ ಆಸ್ಪತ್ರೆಗೆ ಹೋಗುವ ಮಾರ್ಗದಲ್ಲಿನ ಅ.ನ.ಕೃ ವೃತ್ತದಲ್ಲಿ ಅಳವಡಿಸಿದ್ದ ಡೂಮ್ ಲೈಟ್ ಹಾಳಾಗಿದ್ದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ದುರಸ್ತಿ ಮಾಡದೆ ನಿರ್ಲಕ್ಷ್ಯ ತೋರಿರುವುದರಿಂದ ರಾತ್ರಿ ವೇಳೆ ಜನತೆ ನಿರ್ಭಿತಿಯಿಂದ ಓಡಾಡಲು ಕಷ್ಟವಾಗುತ್ತಿದೆ. ಇತ್ತ ಅನಕೃ ವೃತ್ತವನ್ನು ಅಭಿವೃದ್ಧಿಪಡಿಸಿಲ್ಲ, ಅತ್ತ ದೀಪದ ವ್ಯವಸ್ಥೆ ಮಾಡದಿರುವುದರಿಂದ ವಿದ್ಯುತ್ ಕಂಬ ಬೆದರು ಗೊಂಬೆಯಾಗಿ ನಿಲ್ಲುವಂತಾಗಿದೆ. ಐದು ಮಾರ್ಗಗಳಿಗೆ ಸಂಪರ್ಕವಿರುವ ಈ ವೃತ್ತದಲ್ಲಿ ತುರ್ತು ಹಾಗೂ ಅಗತ್ಯ ಕೆಲಸ ನಿಮಿತ್ತ ಹಾದು ಹೋಗುವ ಜನರಿಗೆ ರಾತ್ರಿ ವೇಳೆ ಸಮಸ್ಯೆ ಇರುವುದರಿಂದ ಅಧಿಕಾರಿಗಳು ಕೂಡಲೇ ವಿದ್ಯುತ್ ಅಳವಡಿಸಬೇಕು.
- ಸತ್ಯನಾರಾಯಣರಾವ್, ಬಿಜೆಪಿ ಮುಖಂಡ, ಕೋಲಾರ
ಇದೇನು ಸಭ್ಯತೆ?
ಕೋಲಾರ ನಗರದ ಅರಳೆ ಪೇಟೆಯ ಶ್ರೀ ಕಾಶಿ ವಿಶ್ವನಾಥ ಹಾಗೂ ಬಸವೇಶ್ವರ ದೇವಾಲಯದ ಬಳಿ ಸಾರ್ವಜನಿಕರು ಹಾಗೂ ಪಾನಿಪುರಿ ಅಂಗಡಿಗಳವರು ಕಸಕಡ್ಡಿ ಮತ್ತು ಘನತ್ಯಾಜ್ಯಗಳನ್ನು ಎಸೆಯುತ್ತಿರುವುದರಿಂದ ದೇವಾಲಯದ ಪಾವಿತ್ರ್ಯಕ್ಕೆ ಧಕ್ಕೆ ಆಗುತ್ತಿರುವುದಲ್ಲದೆ, ಪರಿಸರ ಕಲುಷಿತಗೊಳ್ಳುತ್ತಿರುವುದರಿಂದ ನಗರಸಭೆಯವರು ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು. ದೇವಾಲಯ ಮಾತ್ರವಲ್ಲ, ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯದಂತೆ ಜನತೆಯಲ್ಲಿ ಜಾಗೃತಿ ಮೂಡಿಸಬೇಕು. ಪಾನಿಪುರಿ ಅಂಗಡಿ, ಹೋಟೆಲಲ್ಮಾಲೀಕರಿಗೆ ನೋಟಿಸ್ ಜಾರಿ ಮಾಡಿ ಕಸವನ್ನು ಎಸೆಯದಂತೆ ಎಚ್ಚರ ನೀಡಬೇಕು, ಕಾನೂನು ಉಲ್ಲಂಘನೆ ಮಾಡುವವರಿಗೆ ದಂಡ ವಿಧಿಸುವ ಮೂಲಕ ಬೇರೆಯವರು ಪಾಠ ಕಲಿಯುವಂತೆ ಪ್ರಚಾರಾಂದೋಲನ ಕೈಗೊಳ್ಳಬೇಕು.
- ಕೆ.ಪಿ. ಜಗದೀಶ್, ಅರಳೆಪೇಟೆ ನಿವಾಸಿ, ಕೋಲಾರ
ರಸ್ತೆ ಅಭಿವೃದ್ಧಿ ಎಷ್ಟು ದಿನ ಬೇಕು
ಕೋಲಾರ-ಮುಳಬಾಗಿಲು ಮಾರ್ಗದ ಗುಪ್ತ ಇಂಟರ್ ನ್ಯಾಷನಲ್ ಸ್ಕೂಲ್ ಬಳಿಯ ರಸ್ತೆಯು ಹಾಳಾಗಿ ಹಲವು ತಿಂಗಳಾಗಿದ್ದರೂ ದುರಸ್ತಿ ಮಾಡದೆ ಇರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ರಸ್ತೆಯ ಸಮಗ್ರ ಅಭಿವೃದ್ಧಿಗೆ ಗಮನ ನೀಡದೆ ಕೇವಲ ತೇಪೆ ಕಾಮಗಾರಿ ನಡೆಸಿ ಅಧಿಕಾರಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಕ್ರಮಬದ್ಧವಾಗಿ ಕಾಮಗಾರಿ ನಡೆದಿಲ್ಲ, ರಸ್ತೆಯಲ್ಲಿ ಗುಂಡಿ ಬಿದ್ದಿರುವುದರಿಂದ ವಾಹನಗಳ ಚಾಲಕರು ಮತ್ತು ಪ್ರಯಾಣಿಕರಿಗೆ ಜೀವ ಭಯ ಉಂಟಾಗಿದೆ. ಇದಿಷ್ಟೇ ಅಲ್ಲದೆ ಕೋಲಾರಮ್ಮ ಕೆರೆಯ ಏರಿಯ ಮೇಲೆ ಸೇತುವೆ ನಿರ್ಮಿಸಿ ರಸ್ತೆಯ ಗುಣಮಟ್ಟ ಕಾಯ್ದುಕೊಳ್ಳದಿರುವುದರಿಂದ ಸೇತುವೆ ಇದ್ದು ಇಲ್ಲದಂತಾಗಿದೆ. ಸಂಬಂಧಪಟ್ಟ ಇಲಾಖೆಯವರು ಗಮನ ಹರಿಸಬೇಕು.
- ಮಂಜುನಾಥ್, ಕೋಲಾರ
ಮೃತ್ಯುಕೂಪವಾಗಿರುವ ಚರಂಡಿ
ಕೋಲಾರ ನಗರದಲ್ಲಿ ಬಹುತೇಕ ಕಾಮಗಾರಿಗಳ ಗುಣಮಟ್ಟ ಪರಿಶೀಲನೆ ಮಾಡದೆ ಗುತ್ತಿಗೆದಾರರ ಹಿತ ಕಾಪಾಡುವ ಮೂಲಕ ಅಧಿಕಾರಿಗಳು ತಮ್ಮ ಜೇಬುಗಳ ಸಂತೃಪ್ತಿಯ ಕಡೆ ಹೆಚ್ಚಿನ ಗಮನ ನೀಡುತ್ತಿರುವುದರಿಂದ ಜನರ ಪ್ರಾಣಕ್ಕೆ ತುತ್ತುಂಟಾಗುತ್ತಿದೆ. ಇದಕ್ಕೊಂದು ಸಣ್ಣ ಉದಾಹರಣೆ ಎಂದರೆ ನಗರದ ಮೆಕ್ಕೆ ವೃತ್ತದಿಂದ ಚಿಕ್ಕಬಳ್ಳಾಪುರ ರಸ್ತೆಯಲ್ಲಿ ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿವಾಸದ ವೃತ್ತದವರೆಗೆ ನಿರ್ಮಿಸಿರುವ ಚರಂಡಿ ಕಾಮಗಾರಿಯೇ ಸಾಕ್ಷಿ. ವರ್ಷದ ಹಿಂದಷ್ಟೇ ರಸ್ತೆ ಬದಿಯಲ್ಲಿನ ಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಚರಂಡಿಯೇನೋ ನಿರ್ಮಾಣವಾಗಿದೆ. ಅದರ ಮೇಲೆ ಚಪ್ಪಡಿ ಕಲ್ಲು ಅಥವಾ ಸಿಮೆಂಟ್ ಕಾಂಕ್ರಿಟ್ ಸ್ಲ್ಯಾಬ್ ಹಾಕಿ ಪಾದಾಚಾರಿಗಳಿಗೆ ಅನುಕೂಲ ಕಲ್ಪಿಸಿಕೊಡಬಹುದಾಗಿತ್ತು. ಇದೇ ಉದ್ದೇಶದಿಂದ ಚರಂಡಿಗೆ ಉದ್ದಕ್ಕೂ ಚಪ್ಪಡಿ ಕಲ್ಲನ್ನು ಮುಚ್ಚಲಾಗಿದೆ. ಆದರೆ ಕೆಲವು ಕಡೆ ಚಪ್ಪಡಿ ಕಲ್ಲನ್ನು ಸರಿಯಾಗಿ ಮುಚ್ಚದೆ ಹಾಗೆಯೇ ಬಿಡಲಾಗಿದೆ. ಕೆಲವೆಡೆ ಚಪ್ಪಡಿ ಕಲ್ಲುಗಳು ಚರಂಡಿಯೊಳಗೆ ಜಾರಿ ಬಿದ್ದಿದೆ. ಅಧಿಕಾರಿಗಳು ಈಗಲಾದರೂ ಚರಂಡಿ ದುರಸ್ತಿಗೆ ಮುಂದಾಗಲಿ.
- ಚಂದ್ರಶೇಖರ್, ಪಾಲಸಂದ್ರ ಬಡಾವಣೆ, ಕೋಲಾರ.