ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕಾಂಗ್ರೆಸ್‌ಗೆ ಪಾಠ ಕಲಿಸಿ: ಎಚ್.ಕೆ. ಕುಮಾರಸ್ವಾಮಿ

Vishwanath S
Updated On : 20 Jan 2014, 12:26 pm

ಕೋಲಾರ: ಲೋಕಸಭಾ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಜೆಡಿಎಸ್ ಎಸ್‌ಸಿ ವಿಭಾಗದಿಂದ ಭಾನುವಾರ ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ಸಭೆಗೆ ಪಕ್ಷದ ಜಿಲ್ಲಾಧ್ಯಕ್ಷ ವೆಂಕಟಶಿವಾರೆಡ್ಡಿ, ಮಾಜಿ ಶಾಸಕ ಕೆ. ಶ್ರೀನಿವಾಸಗೌಡ ಸೇರಿದಂತೆ ಪ್ರಮುಖರು ಗೈರು ಆಗಿದ್ದರು.
ಪ್ರಚಾರದ ಕೊರತೆ ಹಾಗೂ ಜಿಲ್ಲೆಯ ಕೆಲವು ಪ್ರಮುಖ ಮುಖಂಡರಿಗೆ ಆಹ್ವಾನ ಇಲ್ಲದ ಕಾರಣ ಸಭೆಯಲ್ಲಿ ಹಾಜರಿದ್ದವರ ಸಂಖ್ಯೆ ನೂರು ದಾಟಿರಲಿಲ್ಲ. ಸಭೆಯನ್ನು ಜಿಲ್ಲೆಯ ಪ್ರಮುಖ ನಾಯಕರ ಅನುಪಸ್ಥಿತಿಯಲ್ಲಿ ಉದ್ಘಾಟಿಸಿದ ಹಾಸನ ಜಿಲ್ಲೆಯ ಜೆಡಿಎಸ್ ಶಾಸಕ ಎಚ್.ಕೆ. ಕುಮಾರಸ್ವಾಮಿ, ಕಾಂಗ್ರೆಸ್ ನೇತೃತ್ವದ ಕೇಂದ್ರ ಯುಪಿಎ ಸರ್ಕಾರ ಮತ್ತು ರಾಜ್ಯದ ಕಾಂಗ್ರೆಸ್ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲವಾಗಿರುವುದರಿಂದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲು ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಬೇಕೆಂದರು.
ಶೋಷಿತರನ್ನು ಕೇವಲ ಓಟ್‌ಬ್ಯಾಂಕ್ ಮಾಡಿಕೊಂಡು ಮೂಲ ಸೌಕರ್ಯಗಳಿಂದ ವಂಚಿಸಲಾಗುತ್ತಿದೆ, ಕೇಂದ್ರದಲ್ಲಿ ಕಳೆದ 10 ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಯುಪಿಎ-1 ಮತ್ತು ಯುಪಿಎ-2 ಸರ್ಕಾರಗಳು ಜನಪರ ಯೋಜನೆಗಳನ್ನು ಜಾರಿಗೆ ತರದೆ ಭ್ರಷ್ಟಾಚಾರದಲ್ಲಿ ಮುಳಗಿ ದೇಶದ ಪ್ರಗತಿಯನ್ನು ಕುಂಠಿತಗೊಳಿಸಿದೆ ಎಂದು ಆರೋಪಿಸಿದರು.
ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಿಂದ ಆರು ಬಾರಿ ಗೆದ್ದು ಎರಡು ಸಾರಿ ಸಚಿವರಾಗಿರುವ ಕೆ.ಎಚ್. ಮುನಿಯಪ್ಪ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಏನು, ಕೇವಲ ಅಧಿಕಾರಕ್ಕಾಗಿ ಇವರನ್ನು ಗೆಲ್ಲಿಸಬೇಕೇ ಎಂದು ಪ್ರಶ್ನಿಸಿದ ಅವರು, ಈ ಬಾರಿ ಪಕ್ಷದಿಂದ ಸೂಕ್ತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ನಿರ್ಧರಿಸಿದ್ದು ಜಿಲ್ಲೆಯ ಎಲ್ಲ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿದಲ್ಲಿ ಜೆಡಿಎಸ್ ಗೆಲುವು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲವೆಂದರು.
ಲೋಕಸಭಾ ಕ್ಷೇತ್ರಕ್ಕೆ ಮೂರು ಮೀಸಲು ವಿಧಾನಸಭಾ ಕ್ಷೇತ್ರಗಳು ಸೇರಿದ್ದು ಈ ಕ್ಷೇತ್ರಗಳಲ್ಲಿ ಪಕ್ಷದ ಕಾರ್ಯಕರ್ತರು ಎಲ್ಲ ವರ್ಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯಾವುದೇ ಭಿನ್ನಮತವಿಲ್ಲದೆ ಕೆಲಸ ಮಾಡಿದಲ್ಲಿ ಕೆ.ಎಚ್. ಮುನಿಯಪ್ಪನವರನ್ನು ಸೋಲಿಸುವುದು ಕಷ್ಟವೇನಿಲ್ಲ. ದಲಿತರು ಉಪ ಜಾತಿಗಳನ್ನು ಮರೆತು ಒಗ್ಗೂಡಬೇಕೆಂದು ಕರೆ ನೀಡಿದರು. ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೇಲೆ ಜನತೆ ಅಸಮಾಧಾನಗೊಂಡಿದ್ದಾರೆ. ಭ್ರಮನಿರಸನರಾಗಿದ್ದಾರೆ, ಜೆಡಿಎಸ್ ಬಗ್ಗೆ ಜನತೆಯಲ್ಲಿ ಇನ್ನೂ ವಿಶ್ವಾಸ ಕುಂದಿಲ್ಲದಿರುವುದರಿಂದ ಕಾರ್ಯಕರ್ತರು ಸಂಘಟಿತರಾಗಿ ಪ್ರಚಾರ ಮಾಡಿದಲ್ಲಿ ಕೋಲಾರ ಕ್ಷೇತ್ರವನ್ನು ಜೆಡಿಎಸ್ ತೆಕ್ಕೆಗೆ ತೆಗೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಅಭ್ಯರ್ಥಿ ಬಗ್ಗೆ ನಿರ್ಧರಿಸಿಲ್ಲ: ಕೋಲಾರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಾರೆಂಬುದು ಇನ್ನು ನಿರ್ಧಾರವಾಗಿಲ್ಲ, ಪಕ್ಷದ ವರಿಷ್ಟರು ಒಮ್ಮತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿದ್ದು ಕಾರ್ಯಕರ್ತರು ಗೆಲುವಿಗಾಗಿ ಶ್ರಮಿಸಬೇಕೆಂದು ಜೆಡಿಎಸ್ ಎಸ್‌ಸಿ ವಿಭಾಗದ ರಾಜ್ಯಾಧ್ಯಕ್ಷ ಅನ್ನದಾನಿ ತಿಳಿಸಿದರು. ಚುನಾವಣೆಗೆ ಸಿದ್ಧತೆ ನಡೆಸಲು ತಾಲೂಕು ಮಟ್ಟದಲ್ಲಿ ಸಮಾವೇಶಗಳನ್ನು ಹಮ್ಮಿಕೊಳ್ಳಬೇಕು, ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪನವರ ವೈಫಲ್ಯಗಳನ್ನು ಮತದಾರರಿಗೆ ತಿಳಿಸಬೇಕು, ಜಿಲ್ಲೆಯ ಹಿರಿಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ಸಂಘಟನೆ ವೃದ್ಧಿಸಬೇಕೆಂದು ಸಲಹೆ ನೀಡಿದರು.
ಕೋಲಾರ ಮೀಸಲು ಕ್ಷೇತ್ರಕ್ಕೆ ಎಸ್.ಬಿ. ಮುನಿವೆಂಕಟಪ್ಪ, ಡಾ.ಸಿ. ಮೋಹನ್ ಅಕಾಂಕ್ಷಿಗಳಾಗಿದ್ದು, ಇದನ್ನು ವರಿಷ್ಟರ ಗಮನಕ್ಕೆ ತರುವುದಾಗಿ ತಿಳಿಸಿದ ಅವರು ಯಾರಿಗೆ ಟಿಕೆಟ್ ನೀಡಲಿ ಅವರನ್ನು ಗೆಲ್ಲಿಸುವ ಕಡೆ ಗಮನ ಹರಿಸಬೇಕು ಮತ್ತು ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬ ಭಾವನೆ ನಮ್ಮಲ್ಲಿ ಮೂಡಬೇಕೆಂದರು ತಿಳಿಸಿದರು. ಆನಂದ್, ಆಲಂಗೂರು ಶಿವಣ್ಣ, ಜಿಪಂ ಸದಸ್ಯ ಎಸ್.ಬಿ. ಮುನಿವೆಂಕಟಪ್ಪ, ತಾಲೂಕು ಮೂರಾಂಡಹಳ್ಳಿ ಗೋಪಾಲ್, ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಕೃಷ್ಣ, ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್,ನಗರಸಭೆ ಸದಸ್ಯ ಮುರಳಿಗೌಡ, ಜಿಲ್ಲಾ ಎಸ್ಪಿ ವಿಭಾಗದ ಅಧ್ಯಕ್ಷ ಮಂಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement