ಗುಡಿಸಲಿಗೆ ಆಕಸ್ಮಿಕ ಬೆಂಕಿ: ವ್ಯಕ್ತಿ ಸಜೀವ ದಹನ
ಗೌರಿಬಿದನೂರು: ಗುಡಿಸಲಿಗೆ ಆಕಸ್ಮಿಕ ಬೆಂಕಿ ತಗುಲಿ ಗುಡಿಸಲಿನಲ್ಲಿದ್ದ ವ್ಯಕ್ತಿಯೊಬ್ಬ ಸಜೀವ ದಹನವಾಗಿರುವ ಘಟನೆ ಪಟ್ಟಣದ ಉಪ್ಪಾರ ಕಾಲೋನಿಯಲ್ಲಿ ಜರುಗಿದೆ. ಪಟ್ಟಣದ ಉಪ್ಪಾರಕಾಲೋನಿ ನಿವಾಸಿ ಗಂಗಾಧರಪ್ಪ (55 ) ನಿದ್ರಿಸುತ್ತಿದ್ದಾಗ ಸೀಮೆ ಎಣ್ಣೆ ದೀಪದಿಂದ ಬೆಂಕಿ ಹೂತ್ತಿ ಉರಿದು ಗುಡಿಸಲು ಸಂಪೂರ್ಣ ಭಸ್ಮವಾಗಿ ಗಂಗಾಧರಪ್ಪ ಸುಟ್ಟು ಕುರಕಲಾಗಿದ್ದಾನೆ. ಬೆಂಕಿ ಕಂಡ ಸಾರ್ವಜನಿಕರು ಅಗ್ನಿ ಶಾಮಕ ಠಾಣೆಗೆ ತಿಳಿಸಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಿಂದಿಸುವ ವೇಳೆಗೆ ಗಂಗಾಧರಪ್ಪ ಸಾವನ್ನಪ್ಪಿದ್ದ ಎನ್ನಲಾಗಿದೆ. ಗಂಗಾಧರಪ್ಪನ ಪತ್ನಿ ಹಾಗೂ ಮಕ್ಕಳು ಊರಿಗೆ ಹೂಗಿದ್ದರಿಂದ ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ತಹಸೀಲ್ದಾರ್ ಡಾ.ಎನ್. ಭಾಸ್ಕರ್, ವೃತ್ತ ನಿರೀಕ್ಷಕ ಕೆ. ನಾಗರಾಜ್, ಪುರಸಭೆ ಮುಖ್ಯಾಧಿಕಾರಿ ಹನುಮಂತೇಗೌಡ ಭೇಟಿ ನೀಡಿ ಪರಿಶೀಲಿಸಿದರು. ಪುರ ಪೊಲೀಸ್ ಠಾಣೆ ಎಸ್‌ಐ ಬೈರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಚಿನ್ನ ಅಪಹರಣ; ಮೂವರು ವಶಕ್ಕೆ
ಮುಳಬಾಗಲು: ಬಸ್ ನಿಲ್ದಾಣ ಸಮೀಪದ ಹೊಟೇಲ್ ಬಳಿ ಗ್ರಾಹಕರಿಂದ 700 ಗ್ರಾಮ್ ಚಿನ್ನವಿದ್ದ ಬ್ಯಾಗ್ ಅಪಹರಿಸಿ ಪರಾರಿಯಾಗಿದ್ದ ಮೂವರನ್ನು ಬಂಧಿಸಲಾಗಿದೆ ಎಂದು ಮುಳಬಾಗಲು ಡಿವೈಎಸ್ಪಿ ಟಿ. ಸಿದ್ದಪ್ಪ ಭಾನುವಾರ ತಿಳಿಸಿದ್ದಾರೆ. ಬಂಧಿತರು ರಂಜೀತ್, ರಾಜ್‌ಕುಮಾರ್ ಮತ್ತು ಸಂತೋಷ್ ಎಂದು ಗುರ್ತಿಸಲಾಗಿದೆ. ಕೆಜಿಎಫ್ ನಗರದಿಂದ ಚಿನ್ನದಂಗಡಿಗಳಿಗೆ ಚಿನ್ನ ನೀಡಲು ಬಂದಿದ್ದ ವೇಲಾಯುಧಂ ಎಂಬವರು ಹೊಟೇಲ್‌ನಲ್ಲಿ ಊಟ ಮಾಡುತ್ತಿದ್ದ ವೇಳೆ ಇಬ್ಬರು ಹಿಂದಿನಿಂದ ಬಂದು ಅವರ ಬಳಿ ಇದ್ದ ಚಿನ್ನದ ಬ್ಯಾಗ್ ಕಳವು ಮಾಡಿಕೊಂಡು ಬೈಕಿನಲ್ಲಿ ಪರಾರಿಯಾದ ಘಟನೆ ಶುಕ್ರವಾರ ನಡೆದಿತ್ತು. ಸಂತೋಷ್ ಎಂಬವನು ವೇಲಾಯುಧನ್ ಜೊತೆ ಬಂದಿದ್ದು ಬ್ಯಾಗ್ ಅಪಹರಣದ ನಂತರ ಅಲ್ಲಿ ಕಾಣಿಸಿರಲಿಲ್ಲ. ಇದನ್ನೇ ಆಧಾರವಾಗಿಟ್ಟುಕೊಂಡ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬಿಸಿ ಅರ್ಧ ಕೆಜಿ ಚಿನ್ನದ ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದ 200 ಗ್ರಾಂ ಮತ್ತೊಬ್ಬ ಆರೋಪಿಯ ಬಳಿ ಇದ್ದು, ಆತನನ್ನು ಬಂಧಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು. ಸರ್ಕಲ್ ಇನ್ಸ್‌ಪೆಕ್ಟರ್ ಕೃಷ್ಣಪ್ಪ, ಪಿಎಸ್‌ಐಗಳಾಗ ಮೇಲ್ವಿನ್ ಪ್ರಾನ್ಸಿಸ್, ಶಂಕರಪ್ಪ ಕಾರ್ಯಾಚರಣೆಯಲ್ಲಿ ತೊಡಗಿದ್ದರು.
ಅಪಘಾತದಲ್ಲಿ ಯುವಕ ಸಾವು
ಚಿಕ್ಕಬಳ್ಳಾಪುರ; ನಗರದ ಹೊರ ವಲಯದಲ್ಲಿರುವ ವಾಪಸಂದ್ರ ಬಳಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸು ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ದುರ್ಘಟನೆ ಭಾನುವಾರ ನಡೆದಿದೆ. ಮೃತನನ್ನು ತಾಲೂಕಿನ ಪೆರೇಸಂದ್ರ ನಿವಾಸಿ ಚೇತನ್ (21 ) ಎಂದು ಗುರುತಿಸಲಾಗಿದೆ. ಬಾಗೇಪಲ್ಲಿ ಕಡೆಯಿಂದ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಬೈಕ್‌ಗೆ ಡಿಕ್ಕಿ ಹೊಡೆದಿದ್ದು ಸ್ಥಳದಲ್ಲಿಯೇ ಸವಾರ ಚೇತನ್ ಮೃತಪಟ್ಟಿದ್ದಾನೆ. ಸಂಚಾರಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಾರಾಮಾರಿ; ರೌಡಿ ಶೀಟರ್ ಬಂಧನ
ಬಂಗಾರಪೇಟೆ: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾರಮಾರಿ ನಡೆದು ಒಬ್ಬ ರೌಡಿ ಸೇರಿದಂತೆ ಮೂವರನ್ನು ಬಂಧಿಸಿರುವ ಘಟನೆ ಭಾನುವಾರ ಸಂಜೆ ಪಟ್ಟಣದಲ್ಲಿ ನಡೆದಿದೆ. ಕೆಜಿಎಎಫ್ ಚಾಂಪಿಯನ್ ರೀಪ್‌ನ ಸೂಸೆಪಾಳ್ಯ ನಿವಾಸಿಗಳಾದ ಶರಥ್ ಕುಮಾರ್, ನವೀನ್ ಹಾಗೂ ಸೂರ್ಯ ಎಂಬವರು ಬಂಧಿತ ಆರೋಪಿಗಳಾಗಿದ್ದು, ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದೆ ಎನ್ನಲಾಗಿದೆ.ಗಾಯಾಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾನೆ. ಆರೋಪಿ ಶರಥ್ ಕುಮಾರ್ ಈಗಾಗಲೇ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಇತ್ತೀಚಿಗಷ್ಟ ಹೊರಗಡೆ ಬಂದಿದ್ದು, ಈತನ ವಿರುದ್ಧ ರಾಬರ್ಟ್‌ಸನ್ ಪೇಟೆ ಠಾಣೆಯಲ್ಲಿ ರೌಡಿ ಶೀಟರ್ ಪ್ರಕರಣ ದಾಖಲಾಗಿದೆ. ಪಿಎಸ್‌ಐ ಯೋಗಾನಂದ್ ಸೋನಾರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಭೂ ವಿವಾದ; ಮಾರಾಮಾರಿ
ಚಿಂತಾಮಣಿ. ಜಮೀನು ಭೂ ವಿವಾದ ಹಿನ್ನಲೆಯಲ್ಲಿ ದಾಯಾದಿಗಳ ನಡುವೆ ಮಾರಾಮಾರಿ ನಡೆದ ಪರಿಣಾಮ ಹಲವರು ತೀವ್ರ ಗಾಯಗೊಂಡಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ನರಸಾಪುರದಲ್ಲಿ ಭಾನುವಾರ ನಡೆದಿದೆ. ತಾಲೂಕಿನ ನರಸಾಪುರದಲ್ಲಿ ಜಮೀನು ವಿಷಯವಾಗಿ ದಾಯಾದಿಗಳಾದ ಲಕ್ಷ್ಮಿ ನರಸಮ್ಮ ಮತ್ತು ಪ್ರಭಾವತಮ್ಮ ಎಂಬವರ ನಡುವೆ ಮಾತಿನ ಚಕಮಕಿ ನಡೆದು ಹಲ್ಲೆ ಮಾಡಿರುವುದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಕೇಸು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.