ಡಿವೈಎಫ್‌ಐ ಮುಖಂಡನ ಮೇಲೆ ಹಲ್ಲೆ: ಪ್ರತಿಭಟನೆ
ಕೋಲಾರ: ಕುಡಿದ ಅಮಲಿನಲ್ಲಿ ಮೈ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದನ್ನು ಪ್ರಶ್ನಿಸಿದ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ವಿಜಯಕೃಷ್ಣನ ಮೇಲೆ ಜೆಡಿಎಸ್ ಕಾರ್ಯಕರ್ತರೆನ್ನಲಾದ ಇಬ್ಬರು ಹಲ್ಲೆ ನಡೆಸಿರುವ ಘಟನೆ ಭಾನುವಾರ ಪತ್ರಕರ್ತರ ಸಂಘದ ಆವರಣದಲ್ಲಿ ನಡೆದಿದೆ.
ತೀವ್ರವಾಗಿ ಗಾಯಗೊಂಡ ವಿಜಯಕೃಷ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಆರೋಪಿಗಳಾದ ಕೋತಿ ಮಂಜು ಮತ್ತು ರಮೇಶ್ ಎಂಬುವರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಪತ್ರಕರ್ತರ ಭವನದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಡಿವೈಎಫ್‌ಐ ತಾಲೂಕು ಸಮ್ಮೇಳನದಲ್ಲಿ ಭಾಗವಹಿಸಿದ್ದ ಜಿಲ್ಲಾ ಕಾರ್ಯದರ್ಶಿ ವಿಜಯಕೃಷ್ಣ ಮೂತ್ರ ವಿಸರ್ಜನೆಗಾಗಿ ಶೌಚಾಲಯಕ್ಕೆ ಹೋಗಿದ್ದಾಗ, ಅದೇ ಸಮಯಕ್ಕೆ ಅಲ್ಲಿಗೆ ಹೋದ ಕೋತಿ ಮಂಜು ವಿಜಯಕೃಷ್ಣ ಮೈ ಮೇಲೆ ಹಾರುವ ರೀತಿಯಲ್ಲಿ ಹಿಂದಿನಿಂದ ಮೂತ್ರ ವಿಸರ್ಜನೆ ಮಾಡಿದ್ದಾನೆ.
ಇದರಿಂದ ಕುಪಿತರಾದ ವಿಜಯಕೃಷ್ಣ, ಪ್ರಶ್ನಿಸಿದಾಗ ಕೋತಿ ಮಂಜು ಜಗಳ ತೆಗೆದು ಹಲ್ಲೆ ಮಾಡಿದ್ದಾನೆ, ಇವನೊಂದಿಗೆ ಇದ್ದ ರಮೇಶ್ ಎಂಬುವ ಕೋತಿ ಮಂಜುಗೆ ಬೆಂಬಲವಾಗಿ ವಿಜಿ ಮೇಲೆ ಹಲ್ಲೆ ನಡೆಸಿದ್ದರಿಂದ ವಿಜಿ ಬಾಯಿಲ್ಲಿ ರಕ್ತ ಸೋರಿದೆ.
ವಿಷಯ ತಿಳಿದು ತಾಲೂಕು ಸಮ್ಮೇಳನದಲ್ಲಿದ್ದ ಡಿವೈಎಫ್‌ಐ ಕಾರ್ಯಕರ್ತರು ಆರೋಪಿಗಳ ಮೇಲೆ ಹಲ್ಲೆ ಮಾಡಿದ್ದಾರೆ, ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಬರುವ ವೇಳೆಗೆ ಆರೋಪಿಗಳು ಗೋಡೆ ಹಾರಿ ಪರಾರಿಯಾಗಿದ್ದಾರೆ. ಕುಡಿದ ಅಮಲಿನಲ್ಲಿ ನಮ್ಮ ಮುಖಂಡರ ಮೇಲೆ ಹಲ್ಲೆ ಮಾಡಿರುವ ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕೆಂದು ಡಿವೈಎಫ್‌ಐ ಮುಖಂಡರು, ಜನವಾದಿ ಮಹಿಳಾ ಸಂಘಟನೆಯ ಗೀತಾ ಇತರರು ಒತ್ತಾಯಿಸಿದರು, ಜೆಡಿಎಸ್ ಸಭೆ ಪತ್ರಕರ್ತರ ಸಂಘದಲ್ಲಿ ನಡೆಯುತ್ತಿದ್ದರಿಂದ ಹೊರಗೆ ಗಲಾಟೆ ಕೇಳಿ ಹೊರ ಬಂದ ಜೆಡಿಎಸ್ ಮುಖಂಡರು ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿದರು. ಹಲ್ಲೆ ಮಾಡಿರುವವವರು ನಮ್ಮ ಪಕ್ಷದವರಲ್ಲವೆಂದು ಸ್ಪಷ್ಟನೆ ನೀಡಿದರು. ಪೊಲೀಸರು ಬಂದು ಪರಿಸ್ಥಿತಿ ತಹಬದಿಗೆ ತಂದ ಮೇಲೆ ಎರಡೂ ಕಡೆ ಸಭೆಗಳು ಸುಸೂತ್ರವಾಗಿ ನಡೆಯಿತು.