ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವಿಳಂಬ ಧೋರಣೆ ಖಂಡಿಸಿದ ಸದಸ್ಯರು

Vishwanath S
Updated On : 20 Jan 2014, 12:27 pm

ಚಿಕ್ಕಬಳ್ಳಾಪುರ: ನಗರದಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡಲು ಅನುಮತಿ ನೀಡುವಲ್ಲಿ ವಿಳಂಬ ಧೋರಣೆಯನ್ನು ಅನುಸರಿಸಿ ಜನರನ್ನು ಅಲೆದಾಡಿಸುತ್ತಿರುವ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ವಿರುದ್ಧ ನಗರಸಭೆಯ ಸದಸ್ಯರು ಮುಗಿ ಬಿದ್ದು ಆಕ್ರೋಶ ವ್ಯಕ್ತಪಡಿಸಿದರು.ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ, ತ್ವರಿತವಾಗಿ ನಗರದಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡಲು ಅನುಮತಿಯನ್ನು ನೀಡಿ, ಇಲ್ಲವೇ ನಾವು ಸಂಬಂಧಪಟ್ಟವರ ಬಳಿಗೆ ಹೋಗಿ ನಮ್ಮ ಕೈಯಲ್ಲಾಗಿರುವುದನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ನಗರಸಭೆಯ ಸಭಾಂಗಣದಲ್ಲಿ ಕಟ್ಟಡ ನಿರ್ಮಾಣಕ್ಕೆ ಪ್ರಾಧಿಕಾರ ಅನುಮತಿ ನೀಡುವಲ್ಲಾಗುತ್ತಿರುವ ಗೊಂದಲಗಳನ್ನು ಬಗೆಹರಿಸಲು ಚರ್ಚಿಸುವ ನಿಟ್ಟಿನಲ್ಲಿ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿದ್ದ ನಗರಸಭಾ ಸದಸ್ಯರಾದ ಎಸ್.ಎಂ. ರಫಿಕ್, ಪಿ.ಶ್ರೀನಿವಾಸ್, ರಮೇಶ್ ಬಾಬು ಕೆ.ವಿ. ಮಂಜುನಾಥ್, ಮುನಿಕೃಷ್ಣ, ಕಟ್ಟಡ ಮಾಲೀಕರು ಸೇರಿದಂತೆ ಅನೇಕರು ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ಸಹಾಯಕ ನಿರ್ದೇಶಕ ಸುರೇಶ್ ರನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು.ನಗರದ ಬಹುತೇಕ ಕಟ್ಟಡ ಮಾಲೀಕರು ತಮ್ಮ ನಿವೇಶನದಲ್ಲಿ ಕಟ್ಟಡವನ್ನು ನಿರ್ಮಿಸಿಕೊಳ್ಳಲು ಚಿಕ್ಕಬಳ್ಳಾಪುರ ಯೋಜನಾ ಪ್ರಾಧಿಕಾರದಿಂದ ಪರವಾನಗಿ ಪಡೆಯಲು ತುಂಬಾ ತೊಂದರೆಯನ್ನು ಅನುಭಸುತ್ತಿದ್ದಾರೆ. ಪರವಾನಗಿ ಸಿಗದೆ ಸಾರ್ವಜನಿಕರು ನಗರಸಭೆಗೆ ಶಾಪ ಹಾಕುತ್ತಿದ್ದಾರೆ ಎಂದು ಟೀಕಿಸಿದರು.ಅಧಿಕಾರಿಗಳಿರುವುದು ಜನರ ಕೆಲಸ ಮಾಡಲು, ಯಾವ್ಯಾವುದೋ ನೀತಿ ನಿಯಮಗಳಿಲ್ಲದ ಹಾಗೂ ಕಾನೂನಿನಲ್ಲಿ ಇಲ್ಲ-ಸಲ್ಲದನ್ನು ದೊಡ್ಡದು ಮಾಡಿಕೊಂಡು ಸಾರ್ವಜನಿಕರಿಗೆ ಕಿರಿಕಿರಿ ಮಾಡುವುದಕ್ಕೆ ಅಲ್ಲ. ಒಂದು ವೇಳೆ ಕೆಲಸ ಮಾಡಲು ಇಷ್ಟವಿಲ್ಲ ಎಂದಾದರೆ ಬೇರೆಡೆಗೆ ವರ್ಗ ಮಾಡಿಸಿಕೊಂಡು ಅಧಿಕಾರಿಗಳು ಹೋಗಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.ನೀವು ಕಚೇರಿಯಲ್ಲಿ ನಿಮ್ಮ ಮನಸ್ಸಿಗೆ ಬಂದಂತೆ ಕೆಲಸ ಮಾಡಿದರೆ ಅದಕ್ಕೆ ತಕ್ಕ ಪ್ರತಿಫಲವನ್ನು ಎದುರಿಸಬೇಕಾಗುತ್ತದೆ ಎಂದು ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ಸಹಾಯಕ ನಿರ್ದೇಶಕರಿಗೆ ಎಚ್ಚರಿಕೆ ನೀಡಿದರು.ಪೌರಾಯುಕ್ತ ಮುನಿಸ್ವಾಮಿ ಮಾತನಾಡಿ, ಕಾನೂನು ನಿಯಮಗಳ ಪ್ರಕಾರ ಇರುವ ಕಡತಗಳನ್ನು ಪರಿಶೀಲಿಸಿ ತಾಂತ್ರಿಕ ಒಪ್ಪಿಗೆ ನೀಡಬೇಕು. ಅದು ಬಿಟ್ಟು ನಗರಸಭೆಯತ್ತ ಬೊಟ್ಟು ಮಾಡುವುದು ಸರಿಯಲ್ಲ. ನಗರಸಭೆಯ ಅಧಿಕಾರಿಗಳು ಕಡತವನ್ನು ಕಳುಹಿಸಿಲ್ಲ. ಆ ಫೈಲು ಬಂದಿಲ್ಲ, ಇದು ಸರಿಯಿಲ್ಲ, ಅದು ಸರಿಯಿಲ್ಲ ಎಂದು ಸಬೂಬುಗಳನ್ನು ಹೇಳಿ ನಮ್ಮ ಮೇಲೆ ಗೂಬೆ ಕೂರಿಸಬಾರದೆಂದು ತಿಳಿಸಿದರು. ರತ್ನಮ್ಮ, ಶ್ರೀನಿವಾಸ್, ಶ್ವೇತಾ, ರತ್ನಮ್ಮ, ಭಾರತೀದೇವಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement