ಹಿರಿಯರ ಸಲಹೆ ಪಡೆದು ಉತ್ತಮ ಕೆಲಸ ಮಾಡಿ
ಕೋಲಾರ: ಹಿರಿಯ ವಕೀಲರ ಸಲಹೆ, ಸೂಚನೆ ಪಡೆದು ವಕೀಲರ ಸಂಘವನ್ನು ಉತ್ತಮ ರೀತಿಯಲ್ಲಿ ಬೆಳೆಸಿ ಹಾಗೂ ಸಮಾಜಕ್ಕೆ ಉಪಯುಕ್ತವಾದ ಕೆಲಸಗಳನ್ನು ಮಾಡುವಂತೆ ವಕೀಲರ ಸಂಘದ ನೂತನ ಪದಾಧಿಕಾರಿಗಳಿಗೆ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ರೇಣುಕಾಪ್ರಸಾದ್ ಸಲಹೆ ನೀಡಿದರು.
ಜಿಲ್ಲಾ ವಕೀಲರ ಭವನದಲ್ಲಿ ಶನಿವಾರ ವಕೀಲರ ಸಂಘದ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಸ್ಪರ್ಧೆಯಲ್ಲಿ ಸೋಲು-ಗೆಲುವು ಸಾಮಾನ್ಯ ಎಂದ ಅವರು, ಗೆದ್ದವರು ಬೀಗದೇ ಎಲ್ಲಾ ವಕೀಲರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸಂಘವನ್ನು ಮುನ್ನಡೆಸಬೇಕು ಎಂದು ಕಿವಿಮಾತು ಹೇಳಿದರು.
ನೂತನ ಯುವ ಪದಾಧಿಕಾರಿಗಳ ತಂಡಕ್ಕೆ ಸಿಕ್ಕಿರುವ ಎರಡು ವರ್ಷಗಳ ಅಧಿಕಾರದ ಅವಧಿಯಲ್ಲಿ ವಕೀಲರು, ಕಕ್ಷಿದಾರರ ಹಿತಕ್ಕಾಗಿ ಕೈಗೊಳ್ಳಬಹುದಾದ ಕಾರ್ಯಗಳನ್ನು ಪಟ್ಟಿಮಾಡಿಕೊಂಡು ನ್ಯಾಯಾಲಯದ ಕಲಾಪಗಳಿಗೆ ಸಹಕರಿಸಿ ಎಂದು ತಿಳಿಸಿದರು. ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಎ.ವಿ. ಆನಂದ್, ಸಂಘದ ಕಾರ್ಯಚಟುವಟಿಕೆಗಳ ಅನುಷ್ಠಾನದಲ್ಲಿ ಹಿರಿಯರ ಸಹಕಾರ ಪಡೆಯುವುದಾಗಿ ತಿಳಿಸಿ, ವಕೀಲರ ಸಮಸ್ಯೆಗಳ ನಿವಾರಣೆಗೆ ನ್ಯಾಯಾಧೀಶರ ಸಹಕಾರ ಕೋರಿದರು.
ಪ್ರಧಾನ ಕಾರ್ಯದರ್ಶಿ ಸತೀಶ್, ವಕೀಲರು ಸಂವಿಂಧಾನದ ಬದ್ದತೆಯಿಂದ ಕಾರ್ಯನಿರ್ವಹಿಸಲು ಅಗತ್ಯ ಸಹಕಾರ ನೀಡುವಂತೆ ಕೋರಿ, ಸಂಘವನ್ನು ಬಲಗೊಳಿಸುವ ಮತ್ತು ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಕೆಲಸ ಮಾಡುವ ಭರವಸೆ ನೀಡಿದರು.
ನಿರ್ಗಮಿತ ಅಧ್ಯಕ್ಷ ಟಿ.ಎಂ. ಶಿವಣ್ಣ ನೂತನ ಅಧ್ಯಕ್ಷರಿಗೆ ಅಧಿಕಾರ ವಹಿಸಿಕೊಟ್ಟು ಶುಭ ಕೋರಿದರು. ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಬಿ.ವಿ. ರೇಣುಕಾ, ಮಲ್ಲಿಕಾರ್ಜುನ ಕಿಣಿಕೇರಿ, ಸಂಗಣ್ಣ ಎಸ್. ಪಾಟೀಲ್, ಕೆಂಗಬಾಲಯ್ಯ, ಮನಗೋಳಿ ಪ್ರೇಮಾವತಿ, ಕುಮಾರ್, ನಟೇಶನ್, ಶಕುಂತಲಾ, ವಕೀಲರ ಸಂಘದ ಪದಾಧಿಕಾರಿಗಳಾದ ಚಂದ್ರಪ್ಪ, ಸೋಮಣ್ಣ, ನಂಜುಂಡೇಶ್ವರಿ, ಕಾರ್ಯಕಾರಿ ಸಮಿತಿಯ ಚೌಡೇಗೌಡ, ಎಲ್. ಮಂಜುನಾಥ್, ಕೆ. ಮಂಜುನಾಥ್, ಹರೀಶ್, ಲಕ್ಷ್ಮೀಪತಿ, ಎನ್. ಮಂಜುನಾಥ್, ಎಂ.ಎ. ಶ್ರೀನಿವಾಸ್, ಶಂಕರಪ್ಪ ಇದ್ದರು.