ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು
ಮಾಲೂರು: ವಿದ್ಯಾರ್ಥಿಗಳು ವ್ಯಾಸಂಗದ ವೇಳೆ ಸಮಾಜವನ್ನು ತಿದ್ದುವ ಸಾಹಿತ್ಯ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಎ. ಅಶ್ವಥ್ರೆಡ್ಡಿ ಕಿವಿಮಾತು ಹೇಳಿದರು.
ಪಟ್ಟಣದ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಸ್ಥಳೀಯ ಅನಿಕೇತನ ಸಾಂಸ್ಕೃತಿಕ ವೇದಿಕೆ ಕಸಾಪ ಸಂಯೋಗದಲ್ಲಿ ಆಯೋಜಿಸಿದ್ದ ಕುವೆಂಪು ವಿಶ್ವಮಾನವ ಸಂದೇಶ ಪ್ರಚಾರ ಯಾತ್ರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಂಡಾಗ ಉತ್ತಮ ಸಮಾಜ ನಿರೀಕ್ಷಿಸಲು ಸಾಧ್ಯ ಎಂದರು.
ತಾಪಂ ಅಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿ, 15ನೇ ಶತಮಾನದಲ್ಲಿದ್ದ ಮೂಢನಂಬಿಕೆ, ಅನಾಚಾರದ ವಿರುದ್ಧ ಬಸವಣ್ಣ,ಅಕ್ಕಮಹಾದೇವಿ ಅವರ ವಚನಗಳು ಮಾಡಿದ ಸಮಾಜ ತಿದ್ದುವ ಕೆಲಸವನ್ನು 21 ನೇ ಶತಮಾನದಲ್ಲಿ ಸಾಹಿತಿಗಳು ಸಾಹಿತ್ಯದ ಮೂಲಕ ಮಾಡುತ್ತಿದ್ದಾರೆ ಎಂದರು. ವೇದಿಕೆ ಸಂಸ್ಥಾಪನಾ ಅಧ್ಯಕ್ಷ ಕೆ. ಮುನಿಕೃಷ್ಣಪ್ಪ ಮಾತನಾಡಿದರು. ಇದೇ ಸಂಧರ್ಭದಲ್ಲಿ ಸಮಾಜ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಚಂದ್ರಶೇಖರ್ ಹಡಪ, ಟಿ.ಎಸ್. ಮಣಿಕಂಠ,ಬಿ.ಎಚ್. ವೆಂಕಟರಣಮಪ್ಪ ನರಸಿಂಹಪ್ಪ, ಡಾ.ಡಿ.ಕೆ. ರಾಧಮ್ಮರನ್ನು ಸನ್ಮಾನಿಸಲಾಯಿತು. ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಕುಂ. ಚಂದ್ರಪ್ಪ, ಕಸಾಪ ಅಧ್ಯಕ್ಷ ಮ.ಗೋ. ಮಧುಸೂಧನ್, ಎಂ.ವಿ. ರವೀಂದ್ರ, ಸುಧಾ, ಎಚ್. ರಾಮಚಂದ್ರಪ್ಪ, ಕೆ.ಎಂ. ರಾಜಪ್ಪ ಇದ್ದರು.