ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕುಡಿವ ನೀರಿನ ಹೆಸರಿನಲ್ಲಿ ರಾಜಕಾರಣ

Rashmi Kasaragodu
Updated On : 21 Jan 2014, 1:27 am

ಕೋಲಾರ: ಕುಡಿಯುವ ನೀರಿನ ಹೆಸರಿನಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರದ ಕೆಲ ಜನಪ್ರತಿನಿಧಿಗಳು ರಾಜಕಾರಣ ಮಾಡುತ್ತಿರುವುದರಿಂದ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಅಡ್ಡಿಯಾಗುತ್ತಿದೆ ಎಂದು ಸಿಪಿಐ(ಎಂ)ಮುಖಂಡ, ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ ಆರೋಪಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಶಾಶ್ವತ ನೀರಾವರಿ ಹೋರಾಟ ಸಮಿತಿಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಹತ್ತಾರು ವರ್ಷಗಳ ಹಿಂದೆ ಡಾ. ಪರಮಶಿವಯ್ಯ ವರದಿಯ ಅನುಷ್ಠಾನಕ್ಕಾಗಿ ಒತ್ತಾಯಿಸಿ ನಾವು ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡಾಗ ಲೇವಡಿ ಮಾಡಿದ್ದ ರಾಜಕಾರಣಿಯೊಬ್ಬರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಕ್ಕಾಗಿ ಪ್ರಾಣ ಬಿಡಲು ಸಿದ್ಧವೆಂದು ಹೇಳಿ ಗೆದ್ದು ಶಾಸಕರಾದ ನಂತರ ನೀರಿನ ವಿಷಯ ಮರೆತಿದ್ದಾರೆಂದು ಶ್ರೀನಿವಾಸಪುರ ಶಾಸಕ ರಮೇಶ್ಕುಮಾರ್ ಹೆಸರು ಹೇಳದೆ ಟೀಕಿಸಿದರು.
ಮೊಯ್ಲಿ ವಿರುದ್ಧ ಆಕ್ರೋಶ: ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದರಾಗಿರುವುದು ದುರ್ದೈವ, ಜನತೆಯ ಸಮಸ್ಯೆ ಬಗ್ಗೆ ಕೊಂಚವೂ ಕಾಳಜಿ ಇಲ್ಲ, ದಕ್ಷಿಣ ಕನ್ನಡ ಜಿಲ್ಲೆಯ ಜನರ ಮನವೊಲಿಸಿ ಬಯಲುಸೀಮೆಯ ಜನರಿಗೆ ಶಾಶ್ವತ ಪರಿಹಾರ ಕಲ್ಪಿಸಬಹುದಾಗಿತ್ತು. ಆದರೆ, ಸ್ವಾರ್ಥಕ್ಕಾಗಿ ಹಾಗೂ ರಾಜಕಾರಣದಿಂದಾಗಿ ಅಲ್ಲಿನ ಜನರ ವಿರೋಧ ಕಟ್ಟಿಕೊಳ್ಳಲು ಭಯಪಟ್ಟು ಅವೈಜ್ಞಾನಿಕವಾದ ಎತ್ತಿನ ಹೊಳೆ ಯೋಜನೆಯನ್ನು ಜಾರಿಗೆ ತರಲು ಯತ್ನಿಸುತ್ತಿದ್ದಾರೆ. ಇದರಿಂದ ಯಾವುದೇ ಪ್ರಯೋಜನವಿಲ್ಲವೆಂಬುದು ಗೊತ್ತಿದ್ದರೂ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಬಯಲುಸೀಮೆಯ ಜನತೆ ಡಾ. ಪರಮಶಿವಯ್ಯ ವರದಿ ಆಧಾರಿತ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದರೆ ವೀರಪ್ಪ ಮೊಯ್ಲಿ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಎತ್ತಿನ ಹೊಳೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರದ ಮೇಲೆ ಪ್ರಭಾವ ಬೀರುತ್ತಿದ್ದಾರೆಂದು ತಿಳಿಸಿದರು. ಎತ್ತಿನ ಹೊಳೆ ವೀರಪ್ಪ ಮೊಯ್ಲಿಯವರ ಕನಸಿನ ಕೂಸು, ಈ ಯೋಜನೆಯನ್ನು ಸದಾನಂದಗೌಡರು ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ಅನುಮೋದನೆ ಪಡೆದಿದ್ದರು. ಇವರು ಸಹ ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದ ಹಿನ್ನೆಲೆಯಲ್ಲಿ ಜನರ ವಿರೋಧ ಕಟ್ಟಿಕೊಳ್ಳದೆ ಎತ್ತಿನಹೊಳೆಗೆ ಅನುಮೋದನೆ ನೀಡಿದರೆಂದು ದೂರಿದರು.
ಎತ್ತಿನಹೊಳೆ ಯೋಜನೆಯನ್ನು ಕೇವಲ ಕುಡಿಯುವ ನೀರಿನ ಯೋಜನೆಗೆಂದು ಪರಿಗಣಿಸಲಾಗಿದೆ. ಆದರೆ ಕೃಷಿ ಪ್ರಧಾನವಾಗಿರುವ ಬಯಲು ಸೀಮೆ ಪ್ರದೇಶಕ್ಕೆ ಕೃಷಿ ಮತ್ತು ಕುಡಿಯಲು ಸಹ ನೀರು ಬೇಕಾಗಿದೆ ಎಂಬ ಪರಿಜ್ಞಾನ ಇಲ್ಲದೆ ವೀರಪ್ಪ ಮೊಯ್ಲಿ ಹಾಗೂ ಪ್ರತಿಯೊಂದು ಸರ್ಕಾರ ಒಂದೊಂದು ಯೋಜನೆಗಳನ್ನು ತರುವುದರ ಮೂಲಕ ಪರಮಶಿವಯ್ಯ ವರದಿ ಯೋಜನೆಯನ್ನು ಮೂಲೆಗುಂಪು ಮಾಡಲು ಹುನ್ನಾರ ನಡೆಸಿದೆ, ನೀರಾವರಿ ಯೋಜನೆಗಳ ಬಗ್ಗೆ ಅರಿವು ಇಲ್ಲದ ಲಂಡನ್ನಲ್ಲಿ ವೈದ್ಯರಾಗಿರುವ ಡಾ. ಮಧು ಸೀತಪ್ಪ, ಸೇರಿದಂತೆ ಕೆಲವರು ಸ್ವಯಂ ಘೋಷಿತ ಯೋಜನೆಗಳನ್ನು ಹುಟ್ಟುಹಾಕಿ ಪರಮಶಿವಯ್ಯ ವರದಿ ಯೋಜನೆಯನ್ನು  ಸರ್ಕಾರ ನಿರ್ಲಕ್ಷ್ಯ ಮಾಡುವುದಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆಂದು ಕಿಡಿಕಾರಿದರು. ಡಾ. ಪರಮಶಿವಯ್ಯ ವರದಿ ಆಧಾರಿತ ಶಾಶ್ವತ ನೀರಾವರಿ ಯೋಜನೆ ಜಾರಿಗಾಗಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ಬಯಲುಸೀಮೆಯ 9 ಜಿಲ್ಲೆಗಳಲ್ಲಿ ಜನಾಂದೋಲನವಾಗಬೇಕಾಗಿದೆ. ಧರಣಿ, ಹೋರಾಟ, ಸಮಾವೇಶಗಳಿಂದ ಬಯಲು ಸೀಮೆ ಪ್ರದೇಶಗಳಿಗೆ ನೀರು ತರಲು ಸಾಧ್ಯವಿಲ್ಲ, 9 ಜಿಲ್ಲೆಗಳ ಪ್ರತಿಯೊಂದು ಹಳ್ಳಿಯಲ್ಲೂ ಜನಾಂದೋಲನಕ್ಕೆ ಚಾಲನೆ ನೀಡಿ ಜನತೆಯಲ್ಲಿ ಅರಿವು ಮೂಡಿಸಿದಾಗ ಮಾತ್ರ ಸರ್ಕಾರದ ಕಣ್ಣು ತೆರೆಸಲು ಸಾಧ್ಯವೆಂದು ಅಭಿಪ್ರಾಯಪಟ್ಟರು.
ಫೆಬ್ರವರಿ ವಿಧಾನಸೌಧ ಚಲೋ:  ಬಯಲುಸೀಮೆಯ 9 ಜಿಲ್ಲೆಗಳಲ್ಲಿ  ಹೋರಾಟ ಸಮಿತಿಗಳನ್ನು ಪುನಶ್ಚೇತನಗೊಳಿಸಿ ಫೆಬ್ರವರಿ ತಿಂಗಳಲ್ಲಿ ವಿಧಾನಸೌಧ ಚಲೋ ಹಮ್ಮಿಕೊಳ್ಳುವುದಕ್ಕೆ ತಯಾರಿ ನಡೆಸಬೇಕು, ಈ ಆಂದೋಲನ ಜನರ ಹೋರಾಟವಾಗಿ ರೂಪುಗೊಳ್ಳಬೇಕು, ಯಾವುದೇ ರಾಜಕೀಯವಿಲ್ಲದೆ ಕುಡಿಯುವ ನೀರಿನ ಯೋಜನೆ ಪಡೆಯುವುದಕ್ಕೆ  ಗುರಿ ಹೊಂದಬೇಕೆಂದು ತಿಳಿಸಿದರು. ಹೋರಾಟ ಸಮಿತಿಯ ಜಿಲ್ಲಾ ಸಮಿತಿ ಕಾರ್ಯದರ್ಶಿ ಎಂ.ಜಿ. ಪ್ರಭಾಕರ್ ಮಾತನಾಡಿ, ಕೆಜಿಎಫ್ ಗಣಿ ಪುನಶ್ಚೇತನ ವಿಷಯವನ್ನು ಹಲವಾರು ವರ್ಷಗಳಿಂದ ಪ್ರಸ್ತಾಪಿಸುತ್ತಾ ರಾಜಕೀಯ ಗಿಮಿಕ್ ಮಾಡಲು ಹೊರಟಿದ್ದಾರೆ ಎಂದು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಶಾಶ್ವತ ನೀರಾವರಿ ವಿಚಾರದಲ್ಲಿ ವಿಫಲರಾಗಿದ್ದಾರೆಂದು ಆರೋಪಿಸಿದರು.
ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ವಿ. ಗೀತಾ, ಸಿಪಿಎಂ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ, ನಗರಸಭೆ ಸದಸ್ಯರಾದ ಮುರಳಿಗೌಡ, ಸೋಮಶೇಖರ್, ವೆಂಕಟಾಚಲಪತಿ, ನಾರಾಯಣಮ್ಮ, ಕಾಶೀ ವಿಶ್ವನಾಥ್, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ವಿಜಯಕೃಷ್ಣ, ಎಸ್.ಎಫ್.ಐ ಜಿಲ್ಲಾಧ್ಯಕ್ಷ ವಾಸುದೇವರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement