ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತರ ಪ್ರತಿಭಟನೆ

Rashmi Kasaragodu
Updated On : 21 Jan 2014, 1:28 am

ಗುಡಿಬಂಡೆ: ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ಕಾರ್ಯಕರ್ತರು ಪಟ್ಟಣದ ಮುಖ್ಯ ಬೀದಿಯಲ್ಲಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಹಾಗೂ ಎತ್ತಿನಹೊಳೆ ಯೋಜನೆ ಜಾರಿಯನ್ನು ವಿರೋಧಿಸಿ ವೀರಪ್ಪ ಮೊಯ್ಲಿ ಪ್ರತಿಕೃತಿ ದಹಿಸಿ ಪ್ರತಿಭಟಿಸಿದರು.
ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ತಾಲೂಕು ಉಸ್ತುವಾರಿ ಅಧ್ಯಕ್ಷ ಬಿ. ನಾರಾಯಣಸ್ವಾಮಿ ಬಯಲು ಸೀಮೆಗಳಿಗೆ ಶಾಶ್ವತವಾಗಿ ನೀರು ಒದಗಿಸುವ ಉದ್ದೇಶದಿಂದ ನೀರಿನ ತಜ್ಞ ಡಾ. ಪರಮಶಿವಯ್ಯ ನವರು ಮಹತ್ತರವಾದ ಯೋಜನೆಯನ್ನು ರೂಪಿಸಿದ್ದಾರೆ. ಈ ಯೋಜನೆಯಿಂದ ಬಯಲುಸೀಮೆ ಜಿಲ್ಲೆಗಳಲ್ಲಿರುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ದೂರ ಮಾಡಬಹುದಾಗಿದೆ. ಆದರೆ ಕೆಲ ರಾಜಕೀಯ ಮುಖಂಡರು ತಮ್ಮ ರಾಜಕೀಯ ಜೀವನಕ್ಕೋಸ್ಕರ ಎತ್ತಿನಹೊಳೆ ಯೋಜನೆಯೆಂಬ ಅವೈಜ್ಞಾನಿಕ ಯೋಜನೆಯನ್ನು ಜಾರಿ ಮಾಡಲು ಹೊರಟಿದ್ದಾರೆ. ಇದರಿಂದ ನೀರಿನ ಸಮಸ್ಯೆ ನಿವಾರಣೆಯಾಗುವುದಿಲ್ಲ. ಈ ಯೋಜನೆಯಿಂದ ಬಯಲುಸೀಮೆಗೆ ಬೇಕಾದ ನೀರನ್ನು ಪೂರೈಸಲು ಸಾಧ್ಯವೇ ಇಲ್ಲ ಎಂದರು.
ಕೇಂದ್ರ ಸಚಿವ ವೀರಪ್ಪ ಮೊಯ್ಲಿಯವರು ಅಧಿಕಾರ ಗದ್ದುಗೆ ಏರಿದಾಗಿನಿಂದ ತಮ್ಮ ಕ್ಷೇತ್ರವನ್ನು ಮಾದರಿ ಕ್ಷೇತ್ರ ಮಾಡುತ್ತೇನೆ ಎಂದು ಪ್ರತೀ ಸಭೆಯಲ್ಲೂ ಹೇಳುವುದನ್ನು ಬಿಟ್ಟರೇ ಅವರಿಗೆ ಮಾದರಿ ಕ್ಷೇತ್ರದ ಪರಿಕಲ್ಪನೆಯೇ ಇಲ್ಲ. ಲೋಕಸಭೆಯಲ್ಲಿ ಉನ್ನತ ಪದವಿಯನ್ನು ಪಡೆದು ಕ್ಷೇತ್ರ ಜನತೆಗೆ ಮಾಡಿದ್ದಾದರೂ ಏನು ಎಂದು ಪ್ರಶ್ನಿಸಿದರು.
ನಂತರ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ತಾಲೂಕು ಅಧ್ಯಕ್ಷ ಟಿ. ವೆಂಕಟರಮಣಪ್ಪ ತಾಲೂಕಿನಲ್ಲಿ ಅನೇಕ ಬಡವರಿಗೆ ಇಂದಿಗೂ ಸಹ ಪಡಿತರ ಚೀಟಿ ದೊರೆತಿಲ್ಲ. ಆದ್ದರಿಂದ ವಿತರಣೆಯಾಗದ ಪಡಿತರ ಚೀಟಿಗಳನ್ನು ಕೂಡಲೇ ವಿತರಿಸಿ ಜೊತೆಗೆ 20 ಕೆಜಿ ರಾಗಿ, 5ಕೆಜಿ ಗೋಧಿ, 3 ಕೆಜಿ ಸಕ್ಕರೆ, 5ಲೀಟರ್ ಸೀಮೆಎಣ್ಣೆ ನೀಡಬೇಕು, ಬೆಸ್ಕಾಂ ಇಲಾಖೆಯವರು ಕನಿಷ್ಟ 10 ಗಂಟೆಗಳ ಕಾಲ 3ಫೇಸ್ ವಿದ್ಯುತ್ ಪೂರೈಸಬೇಕು, ಬಗುರ್ಹುಕುಂ ಜಮೀನುಗಳನ್ನು ಸಕ್ರಮಗೊಳಿಸಬೇಕು, ನಿವೇಶನ ರಹಿತ ಬಡವರಿಗೆ ಉಚಿತ ನಿವೇಶನ ನೀಡಬೇಕು, ಕಾಲುಬಾಯಿ ಜ್ವರದಿಂದ ಸತ್ತಿರುವ ಹಸುಗಳಿಗೆ 50 ಸಾವಿರ ರು.ಪರಿಹಾರವಾಗಿ ನೀಡುವುದು ಸೇರಿದಂತೆ ಅನೇಕ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement