ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರಾಜಕೀಯ ಪಕ್ಷಗಳಲ್ಲಿ ಗರಿಗೆದರಿದ ರಾಜಕೀಯ

Rashmi Kasaragodu
Updated On : 21 Jan 2014, 1:28 am

ಎನ್. ವೆಂಕಟೇಶ್
ಚಿಕ್ಕಬಳ್ಳಾಪುರ: ತೀವ್ರ ಪೈಪೋಟಿಗೆ ಕಾರಣವಾಗಿರುವ ಮುಂದಿನ ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ತಮ್ಮ ಪಕ್ಷದಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಆಯ್ಕೆಗಾಗಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ತಯಾರಿಸಿ ಅಂತಿಮ ರೂಪ ಕೊಡುವಲ್ಲಿ ನಿರತರಾಗಿರುವುದರ ನಡುವೆ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಬಗ್ಗೆ ವಿಮರ್ಶೆ, ಪರಸ್ಪರ ತುಲನೆ ಮಾತುಗಳು ಕೇಳಿ ಬರುತ್ತಿವೆ.
ಅಭ್ಯರ್ಥಿಗಳ ಆಯ್ಕೆ ವಿಷಯಕ್ಕೆ ಸಂಬಂಧಿಸಿ ತೀವ್ರ ಚರ್ಚೆಗಳು ನಡೆದಿವೆ. ತಮ್ಮ ಪಕ್ಷದ ಚುನಾವಣಾ ವೀಕ್ಷಕರು ಮತ್ತು ತಂಡದ ಎದುರು ಆಯಾ ಪಕ್ಷಗಳ ಬೆಂಬಲಿಗರು ತಮ್ಮ ನಾಯಕರಿಗೆ ಟಿಕೆಟ್ ನೀಡಬೇಕೆಂಬ ಮನವಿ ಮಾಡಿಕೊಂಡಿದ್ದು ಸಂಭಾವ್ಯ ಪಟ್ಟಿಯಲ್ಲಿ ಯಾರ್ಯಾರ ಹೆಸರು ಕಿತ್ತು ಹೋಗುತ್ತದೆ, ಇನ್ಯಾರ ಹೆಸರು ಚಾಲ್ತಿಗೆ ಬರುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಗೌರಿಬಿದನೂರು, ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಯಲಹಂಕ, ನೆಲಮಂಗಲ,ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಲು ಹಾಲಿ ಸಂಸದ, ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಹೆಸರು ಪಕ್ಕಾ ಆಗಿದೆ. ಮೊಯ್ಲಿ ಅವರಿಗೆ ಪಕ್ಷದಲ್ಲಿ ಪ್ರತಿಸ್ಪರ್ಧಿಗಳು ಇಲ್ಲ. ಪಕ್ಷದಲ್ಲಿ ಅಭ್ಯರ್ಥಿ ಆಯ್ಕೆಯ ಗೊಂದಲ ಕಂಡು ಬರುತ್ತಿಲ್ಲವಾದ್ದರಿಂದ ಮೊಯ್ಲಿ ಪರ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಚುನಾವಣಾ ಪ್ರಚಾರ ಕೈಗೊಳ್ಳಲಾಗುತ್ತಿದೆ. ಪಕ್ಷದಲ್ಲಿ ಏನೇ ಭಿನ್ನಾಭಿಪ್ರಾಯಗಳಿದ್ದರೂ ಮರೆತು ಮುಖಂಡರು ಗೆಲುವಿಗೆ ಸಂಘಟಿತರಾಗಬೇಕೆಂಬ ಮಂತ್ರವನ್ನು ಪಠಿಸಲಾಗುತ್ತಿದೆ. ಇನ್ನು ಜೆಡಿಎಸ್, ಬಿಜೆಪಿ, ಸಿಪಿಎಂ ಪಕ್ಷಗಳಲ್ಲಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಆಗಬೇಕಾಗಿದೆ. ಜೆಡಿಎಸ್ನಲ್ಲಿ ಅನೇಕರು ಆಕಾಂಕ್ಷಿಗಳಿದ್ದಾರೆ.
ಇದರ ಮಧ್ಯೆ ಜೆಡಿಎಸ್ ಜಿಲ್ಲಾ ಘಟಕದಿಂದ ಚಿಕ್ಕಬಳ್ಳಾಪುರವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಣೆ ಮಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಲ್ಲವೇ ಅನಿತಾ ಕುಮಾರಸ್ವಾಮಿಯವರಾಗಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬ ಪ್ರಸ್ತಾಪವಿಡಲಾಗಿದೆ.
ಮಂಗಳೂರು ಕಡೆಯಿಂದ ಬಂದ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಕಳೆದ 2009 ರಲ್ಲಿ ಈ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವನ್ನು ಸಾಧಿಸಿದ್ದು ಇದೀಗ ಮತ್ತೊಮ್ಮೆ 2014 ರಲ್ಲಿ ಮತ್ತೆ ಸಂಸದರಾಗಿ ಆಯ್ಕೆಯಾಗಲು ಬಯಸಿದ್ದಾರೆ. ಆದರೆ,ಅವರು ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ. ಹೇಳಿದಂತೆಯೇ ಶಾಶ್ವತ ನೀರಾವರಿ ಯೋಜನೆಯನ್ನು ಅನುಷ್ಠಾನಕ್ಕೆ ತರುವಲ್ಲಿ ಅವರ ಕೈಯಿಂದಾಗಿಲ್ಲ. ಪ್ರಮುಖವಾಗಿ ಕೇಂದ್ರ ಸರ್ಕಾರದಿಂದಲೂ ಹೆಚ್ಚಿನ ಅನುದಾನವನ್ನು ಈ ಕ್ಷೇತ್ರದ ಅಭಿವೃದ್ಧಿಗೆ ತಂದಿಲ್ಲದ ಕಾರಣ ಕ್ಷೇತ್ರದಲ್ಲಿ ಅವರ ವಿರುದ್ಧ ಅಲೆ ಎದ್ದಿದೆ. ಈ ಹಿನ್ನೆಲೆಯಲ್ಲಿ ಮೊಯ್ಲಿಗೆ ಸೆಡ್ಡು ಹೊಡೆಯಲು ಪ್ರಬಲ ಅಭ್ಯರ್ಥಿಯನ್ನು ಪಕ್ಷದಿಂದ ಚುನಾವಣೆಗೆ ನಿಲ್ಲಿಸಬೇಕೆಂಬ ಅಭಿಪ್ರಾಯವನ್ನು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರು ಸೇರಿದಂತೆ ಹಿರಿಯ ಮುಖಂಡರು ಕೋರಿದ್ದಾರೆ. ಇದೇ ಸಂದರ್ಭದಲ್ಲಿ ಹೈಕಮಾಂಡ್ ಯಾರನ್ನೇ ಆಗಲಿ ಅಭ್ಯರ್ಥಿಯನ್ನಾಗಿ ಘೋಷಿಸಿದರೂ ಅವರ ಗೆಲುವಿಗೆ ಶ್ರಮಿಸುತ್ತೇವೆ ಎನ್ನುವುದನ್ನೂ ತಿಳಿದ್ದಾರೆ ಎನ್ನಲಾಗಿದೆ. ಈ ನಡುವೆ ಲೋಕಸಭಾ ಚುನಾವಣೆಗೆ ತಾವು ನಿಲ್ಲುವುದಿಲ್ಲ, ಅಲ್ಲದೇ ಮಾಜಿ ಪ್ರಧಾನಿ ದೇವೇಗೌಡರನ್ನು ಹೊರತುಪಡಿಸಿದರೆ ನಮ್ಮ ಕುಟುಂಬದವರು ಯಾರೂ ಸ್ಪರ್ಧಿಸುವುದಿಲ್ಲ ಎಂಬ ಮಾತನ್ನು ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾಗಿದೆ. ಆದರೂ ಕೊನೆಯ ಪ್ರಯತ್ನವಾಗಿ ಒತ್ತಡ ಹಾಕಲಾಗುತ್ತಿದೆ.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ದೇಶದ ಪ್ರಧಾನಿಯನ್ನಾಗಿಸುವ ಉತ್ಸುಕತೆಯಲ್ಲಿರುವ ಬಿಜೆಪಿಯಲ್ಲೂ ರಾಜಕೀಯ ಚಟುವಟಿಕೆಗಳು ಗಿರಕಿ ಹೊಡೆಯುತ್ತಿವೆ. ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲೋಕಸಭಾ ಸ್ಥಾನಗಳನ್ನು ಗೆಲ್ಲಬೇಕೆಂಬ ಭಾವನೆಯಲ್ಲಿರುವ ಬಿಜೆಪಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು ಡಿ.ವಿ. ಸದಾನಂದಗೌಡರವರು ಮುಖ್ಯಮಂತ್ರಿಯಾಗಿದ್ದಾಗ ಎತ್ತಿನಹೊಳೆ ಯೋಜನೆಯ ಮೂಲಕ ಈ ಭಾಗಕ್ಕೆ ಶಾಶ್ವತ ನೀರಾವರಿ ಸೌಲಭ್ಯವನ್ನು ಕಲ್ಪಿಸುವ ಘೋಷಣೆ ಮಾಡಿದರು. ಅಲ್ಲದೇ ಜಗದೀಶ್ ಶೆಟ್ಟರ್ ಪರಮಶಿವಯ್ಯನವರ ವರದಿ ಕಾರ್ಯಗತಕ್ಕೆ ತರುವ ಬಗ್ಗೆ ಉತ್ಸುಕರಾಗಿರುವ ಬಗ್ಗೆ ತಿಳಿಸಿದ್ದು ಇದರ ಲಾಭವನ್ನು ಪಡೆಯಲು ಮುಂದಾಗಿದೆ. ಇದಕ್ಕೆ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿಗೆ ಪ್ರಬಲ ವ್ಯಕ್ತಿಯನ್ನು ಘೋಷಿಸಬೇಕೆಂದು ಪಕ್ಷದ ಮುಖಂಡರು ಹೈಕಮಾಂಡ್ ಗಮನ ಸೆಳೆದಿದ್ದಾರೆ. ಈ ಭಾಗಕ್ಕೆ ಡಿ.ವಿ. ಸದಾನಂದಗೌಡರವರ ಆಯ್ಕೆ ಸೂಕ್ತ ಎಂಬ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ. ಆದರೆ,ಬಿಜೆಪಿಯಿಂದ ಮಾಜಿ ಕಾರ್ಮಿಕ ಸಚಿವ ಬಿ.ಎನ್. ಬಚ್ಚೇಗೌಡ ಸಂಭಾವ್ಯ ಅಭ್ಯರ್ಥಿಯಾಗಿದ್ದು ಜೊತೆಗೆ ವಿಧಾನಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಹೆಸರೂ ಇದೆ.




Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement