ಲೋಪ ವಿರುದ್ಧ ಕಾನೂನು ಹೋರಾಟ ಅವಶ್ಯ
ಕೋಲಾರ: ವಿದ್ಯುತ್ ಪೂರೈಕೆ ಸಂಸ್ಥೆಗಳು ಗ್ರಾಹಕರ ಹಕ್ಕುಗಳಿಗೆ ಚ್ಯುತಿ ತಂದರೆ ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗ ನಿಯಮಗಳ ಅನುಸಾರ ದೂರು ದಾಖಲಿಸಿ ನ್ಯಾಯ ಪಡೆದುಕೊಳ್ಳಬಹುದಾಗಿದೆ ಎಂದು ಕೆಇಆರ್ಸಿ ಸಲಹಾ ಸಮಿತಿ ಮಾಜಿ ಸದಸ್ಯ ಎಂ.ಜಿ. ಪ್ರಭಾಕರ್ ತಿಳಿಸಿದರು.
ನಗರದ ಲಯನ್ಸ್ ಭವನದಲ್ಲಿ ಬೆಸ್ಕಾಂ, ಫೆವಡ್ಕೆ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ, ಗ್ರಾಹಕರ ಹಕ್ಕು ಶಿಕ್ಷಣ ಮತ್ತು ಜಾಗೃತಿ ವೇದಿಕೆ ಬೆಂಗಳೂರು ಹಾಗೂ ಕೋವನ್ ವೇದಿಕೆ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿದ್ಯುತ್ ಕುಂದುಕೊರತೆ ಕುರಿತ ಜನ ಸಂವಾದ ಸಭೆಯಲ್ಲಿ ಮಾತನಾಡಿ, ಮೀಟರ್ ಭದ್ರತಾ ಠೇವಣಿಗೆ ವಾರ್ಷಿಕ ಶೇ.6.5 ದರದಲ್ಲಿ ಬಡ್ಡಿ ನೀಡಬೇಕು ಆ ಬಡ್ಡಿಯ ಮಾಹಿತಿ ಜುಲೈ ತಿಂಗಳ ಬಿಲ್ನಲ್ಲಿ ನಮೂದಾಗಿರಬೇಕು, 60 ದಿನಗಳವರೆವಿಗೂ ಬಡ್ಡಿ ನೀಡದಿದ್ದರೆ ಶೇ.2 ರಂತೆ ಬಡ್ಡಿ ಸೇರಿಸಿ ಗ್ರಾಹಕರಿಗೆ ನೀಡಬೇಕು ಆದರೆ ಗ್ರಾಹಕರಿಗೆ ಈ ಬಗ್ಗೆ ಮಾಹಿತಿ ಇಲ್ಲದೆ ವಂಚನೆಗೊಳಗಾಗಿದ್ದಾರೆಂದು ವಿಷಾದಿಸಿದರು.
ವಿದ್ಯುತ್ ಸರಬರಾಜು ಸಂಸ್ಥೆ ಕಾನೂನು ಉಲ್ಲಂಘನೆ ಮಾಡಿದರೆ ಕೆಇಅರ್ಸಿ ನಿಯಮಗಳ ಸೆಕ್ಷನ್ 142ರ ಅನ್ವಯ ಸಂಬಂಧಪಟ್ಟ ಲೆಕ್ಕಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಬಹುದಾಗಿದೆ, ಇದಕ್ಕೆ 3 ತಿಂಗಳ ಸಜೆ ಹಾಗೂ ಒಂದು ಲಕ್ಷ ರು.ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.
ಬಿಲ್ ಪಾವತಿಸಲು ನಿಗದಿಪಡಿಸಿದ ಕೊನೆಯ ದಿನಾಂಕ ಆದ ನಂತರವೂ ಬಿಲ್ ಪಾವತಿ ಮಾಡದ ಗ್ರಾಹಕರಿಗೆ15 ದಿನಗಳ ಲಿಖಿತ ನೋಟಿಸ್ ಜಾರಿ ಮಾಡಿ ಕಾಲಾವಧಿ ಮುಗಿದ ನಂತರವೇ ವಿದ್ಯುತ್ ಸಂಪರ್ಕ ಕಡಿತಗೊಳಬೇಕು, ಅದರೆ ಬಿಲ್ ರಶೀಧಿಯನ್ನೇ ನೋಟಿಸ್ ಎಂದು ಪರಿಗಣಿಸುವಂತೆ ತಿಳಿಸಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವಂತಿಲ್ಲ ಎಂದು ಹೇಳಿದರು.
ಅಧಿಕ ವಿದ್ಯುತ್ ಸರಬರಾಜು ಅಥವಾ ವಿದ್ಯುತ್ ಪರಿವರ್ತಕದ ವಿಫಲತೆ ಕಾರಣಗಳಿಗೆ ಗ್ರಾಹಕರ ಗೃಹ ಬಳಕೆಯ ವಸ್ತುಗಳಾದ, ಟಿ.ವಿ. ಮೊದಲಾದವುಗಳಿಗೆ ಹಾನಿಯಾದರೆ ಸೆಕ್ಷನ್ 142 ಅನ್ವಯ ವಿದ್ಯುತ್ ನಿರೀಕ್ಷಕರ ವರದಿ ಮೇರೆಗೆ ಪ್ರಕರಣ ದಾಖಲಿಸಬಹುದು ಆ ಮೂಲಕ ಸೂಕ್ತ ಪರಿಹಾರ ಪಡೆಯಲೂ ಬಹುದಾಗಿದೆ ಎಂದರು.
ನೆರೆಯ ಕೇರಳದಲ್ಲಿರುವಂತೆ ಗ್ರಾಹಕರ ದೂರು ಸ್ವೀಕಾರ ಆಯೋಗವೊಂದು ರಾಜ್ಯದಲ್ಲೂ ಅಗತ್ಯವಿದೆ. ಪ್ರಸ್ತುತ ಬೆಸ್ಕಾಂ ಅಧಿಕಾರಿಗಳು ಹಳೆಯ ಕಾನೂನುಗಳನ್ನೇ ಬಳಸುತ್ತಿದ್ದಾರೆ ಅವರು 2010ರಲ್ಲಿ ಪರಿಷ್ಕೃತಗೊಂಡ ಕಾನೂನುಗಳನ್ನು ಪಾಲಿಸಬೇಕು, ಗ್ರಾಹಕರ ಸಮಸ್ಯೆಗಳನ್ನು ದಾಖಲಿಸಲು ಶುಲ್ಕ ರಹಿತ ಉಚಿತ ಕರೆ ಮಾಡಲು ದೂರವಾಣಿ ಸೌಕರ್ಯ ಪ್ರಾರಂಭಿಸಬೇಕು ಮತ್ತು ಬಳಕೆದಾರರಿಗೆ ಮಾಪನ ಅಳವಡಿಸಿದ ಮೇಲೆ ಕಡ್ಡಾಯವಾಗಿ ಸರ್ವೀಸ್ ಸರ್ಟಿಫಿಕೇಟ್ ನೀಡಬೆಕೆಂದು ಹೇಳಿದರು.
ಬೆಂಗಳೂರು ವಿದ್ಯುತ್ಚ್ಚಕ್ತಿ ಕುಂದು ಕೊರತೆಗಳ ನಿವಾರಣಾ ವೇದಿಕೆಯ ಭಗವಾನ್, ಫೆವಾರ್ಡ್ಕೆ ಕಾರ್ಯದರ್ಶಿ ಆಂಜನೇಯರೆಡ್ಡಿ, ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಯಂತರ ಸತೀಶ್, ಎನ್.ಎಂ. ರಮೇಶ್, ಮಂಜುನಾಥರೆಡ್ಡಿ, ವಕೀಲ ಕೆ.ಆರ್. ಧನರಾಜ್, ಬ್ರೇಸ್ ಸಂಸ್ಥೆ ಹಾಗೂ ಕಾವೇರಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಎಂ. ಕುಮಾರ್ ಭಾಗವಹಿಸಿದ್ದರು.