ವಿದ್ಯಾರ್ಥಿನಿ ಸಾವು: ವೈದ್ಯರ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ
ಕೆಜಿಎಫ್: ವಿದ್ಯಾರ್ಥಿಗೆ ಶಸ್ತ್ರ ಚಿಕಿತ್ಸೆ ಮಾಡಿದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂಂದ ವಿದ್ಯಾರ್ಥಿ ಮೃತಪಟ್ಟಿರುವುದಾಗಿ ಆರೋಪಿಸಿ ಪೊಷಕರು ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ರಾಬರ್ಟ್ಸನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಅರಿವುಡಿಯ ನಂಬಿ ಎಂಬುವರ ಮಗಳಾದ ರಮ್ಯಾ(18) ನಗರದ ಸೆಂತ ತೆರೇಸಾ ಪಧವಿ ಪೂರ್ವ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದು, ಆಕೆಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆ ನಡೆಸಿದ ವೈದ್ಯರಾದ ಡಾ. ಶಿವಕುಮಾರ್ ರಮ್ಯಾಳಿಗೆ ಅಪೆಂಡಿಕ್ಸ್ ಆಪರೇಷನ್ ಮಾಡಬೇಕು ಎಂದು ತಿಳಿಸಿದ್ದು ಅರಿವುಡಿಯನಂಬಿ ಅವರ ಒಪ್ಪಿಗೆ ಮೇರೆಗೆ ಡಾ. ಶಿವಕುಮಾರ್ ಇದೇ ಜ.10 ರಂದು ಶಸ್ತ್ರ ಚಿಕಿತ್ಸೆ ಮಾಡಿದ್ದರು ಎಂದು ತಿಳಿಸಲಾಗಿದೆ.
ಡಾ.ಶಿವಕುಮಾರ್ ಪ್ರತಿ ದಿನ ಸರಿಯಾಗಿ ತಪಾಸಣೆ, ಚಿಕಿತ್ಸೆ ನಡೆಸದ ಕಾರಣ ವಿದ್ಯಾರ್ಥಿನಿ ರಮ್ಯಾಳ ದೇಹದಲ್ಲಿ ರಕ್ತದಲ್ಲಿ ಏರುಪೇರಾಗಿ ಮೂರು ದಿನಗಳ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ರಾಮಯ್ಯ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದು ಚಿಕಿತ್ಸೆ ಫಲಕಾರಿಯಾಗದ ಕಾರಣ ರಮ್ಯಾ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ರಮ್ಯಾಳ ಸಾವಿಗೆ ಡಾ. ಶಿವಕುಮಾರ್ ಅವರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಪೋಷಕರು,ಎಬಿವಿಪಿ ಕಾರ್ಯಕರ್ತರು ಡಾ. ಶಿವಕುಮಾರ್ ವಿರುದ್ಧ ಸೂಕ್ತ ಕಾನೂನು ರೀತ್ಯ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ವೃತ್ತ ನಿರೀಕ್ಷಕ ಲಕ್ಷ್ಮೀನಾರಾಯಣಗೆ ಮನವಿ ಸಲ್ಲಿಸಿದರು