ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಂಬಿಗರ ಚೌಡಯ್ಯ ಜಯಂತಿಗೆ ನಾಯಕರ ಗೈರು

Rashmi Kasaragodu
Updated On : 22 Jan 2014, 1:40 am

ಕ.ಪ್ರ.ವಾರ್ತೆ    ಕೋಲಾರ್ಣ ಜ. 21
ಬಸವಣ್ಣನವರ ಸಮಕಾಲಿನರಾದ ಶ್ರೀನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಅತ್ಯಂತ ಸರಳವಾಗಿ ನಡೆಯಿತು.
ಜಿಲ್ಲಾ ಆಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೆಲವೇ ಮಂದಿ ಅಧಿಕಾರಿಗಳು, ಅಂಬಿಗರ ಚೌಡಯ್ಯನವರ ಅನುಯಾಯಿಗಳು ಪಾಲ್ಗೊಂಡಿದ್ದರು. ಆಹ್ವಾನ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಜನಪ್ರತಿನಿಧಿಗಳು ಯಾರೊಬ್ಬರು ಬಂದಿರಲ್ಲ.
ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ನವೀನ್ ಕುಮಾರ್ ರಾಜು ಕಾರ್ಯಕ್ರಮ ಉದ್ಘಾಟಿಸಿ, ಅಂಬಿಗರ ಚೌಡಯ್ಯ ಮಹಾನ್ ದಾರ್ಶನಿಕ. ಇವರ ವಚನಗಳನ್ನು ಪ್ರತಿಯೊಬ್ಬರು ಓದಿ ಅರ್ಥ ಮಾಡಿಕೊಂಡಲ್ಲಿ ಸಮಾಜದ ಸುಧಾರಣೆಗೆ ದಾರಿ ದೀಪವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಐ. ಜಮೀಲ್ ಮಾತನಾಡಿ, ಉತ್ತಮ ಸಮಾಜ ನಿರ್ಮಾಣಕ್ಕಾಗಿ ದಾರ್ಶನಿಕರು ಭದ್ರ ಬುನಾದಿ ಹಾಕಿದ್ದಾರೆ, ನಾವುಗಳು ಈ ಮಹನೀಯರ ಆದರ್ಶಗಳನ್ನು ಪಾಲನೆ ಮಾಡುವ ಮೂಲಕ ಸಮಾಜ ಸುಧಾರಣೆಗೆ ಪಣತೊಡಬೇಕಾಗಿದೆ ಎಂದರು.
ಹರಿಕಥಾ ವಿದ್ವಾನ್ ಎಸ್.ಆರ್. ಜ್ಞಾನಮೂರ್ತಿ ಹಾಗೂ ಬೆಸ್ತರ ಸಮುದಾಯದ ಡಾ. ಉದಯಕುಮಾರ್ ಅಂಬಿಗರ ಚೌಡಯ್ಯನವರ ಬದುಕಿನ ಬಗ್ಗೆ ಮಾತನಾಡಿ, ಶೋಷಣೆ ವಿರುದ್ಧ ವಚನಗಳ ರಚನೆಯ ಮೂಲಕ ಜನತೆಯಲ್ಲಿ ಜಾಗೃತಿ ಮೂಡಿಸಿರುವ ಅಂಬಿಗರ ಚೌಡಯ್ಯ ಕುಲದಿಂದ ಯಾರು ದೊಡ್ಡವರಲ್ಲವೆಂಬುದನ್ನು ಸಾಭೀತು ಮಾಡಿದ್ದಾರೆ. ಸರ್ಕಾರ ಇವರ ಜಯಂತಿಯನ್ನು ಆಚರಿಸುವ ಮೂಲಕ ಸಮಾಜ ಸುಧಾರಕರಿಗೆ ಮಾನ್ಯತೆ ಸಿಗುವಂತೆ ಮಾಡಿದೆ ಎಂದು ತಿಳಿಸಿದರು.
ನಿಜಶರಣ ಅಂಬಿಗರ ಜಯಂತಿಯನ್ನು ಯಾವುದೇ ದುಂದುವೆಚ್ಚ, ಆಡಂಬರವಿಲ್ಲದೆ ಸರಳವಾಗಿ ಆಚರಿಸಿ, ಬೇಸ್ತರ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡುವ ಮೂಲಕ ಉತ್ತೇಜನ ನೀಡಲಾಯಿತು. ಎಸ್.ಎಸ್.ಎಲ್.ಸಿ., ದ್ವಿತೀಯ ಪಿಯುಸಿ ಹಾಗೂ ಉನ್ನತ ಶಿಕ್ಷಣದಲ್ಲಿ ಹೆಚ್ಚು ಅಂಕ ಪಡೆದ 23 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ದೊರೆಯಿತು. ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಮಂಗಮ್ಮ ಮುನಿಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಎಸ್. ವೆಂಕಟಾಚಲಪತಿ, ಬೆಸ್ತರ ಜನಾಂಗದ ಮುನಿವೆಂಕಟಪ್ಪ, ಚಿಕ್ಕತಿರುಪತಿಯ ನಾಗೇಶ್, ಮಾಣಿಕ್ಯಂ ಇದ್ದರು.
ಜನಪ್ರತಿನಿಧಿಗಳ ಗೈರು: ದಾರ್ಶನಿಕರ ಜಯಂತಿಯನ್ನು ಸರ್ಕಾರವೇ ಆಚರಿಸಬೇಕೆಂಬ ಬೇಡಿಕೆ ಈಡೇರಿದೆ. ಆದರೆ, ಮಹಾ ಪುರುಷರ ಕಾರ್ಯಕ್ರಮಗಳಿಗೆ ಜನಪ್ರತಿನಿಧಿಗಳು ಗೈರು ಆಗುವ ಮೂಲಕ ನಿರ್ಲಕ್ಷ್ಯ ತೋರುತ್ತಿರುವುದು ಸಮುದಾಯದ ಅಸಮಾಧಾನಕ್ಕೆ ಎಡೆ ಮಾಡಿದೆ.
ನಿಜಶರಣ ಅಂಬಿಗರ ಚೌಡಯ್ಯ ಜಯಂತಿಗೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಹಾಗೂ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಶಾಸಕರು, ವಿಧಾನ ಪರಿಷತ್ ಸದಸ್ಯರಿಗೆ ಆಹ್ವಾನವಿತ್ತಾದರೂ ಯಾರೊಬ್ಬರು ಬಂದಿರಲಿಲ್ಲ.
ಕ್ಷೇತ್ರದ ಶಾಸಕ ವರ್ತೂರ್ ಪ್ರಕಾಶ್ ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಪ್ರತಿಯೊಂದು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ತಾವೊಬ್ಬ ಎಲ್ಲ ವರ್ಗದ ಪ್ರತಿನಿಧಿ ಎಂಬುದನ್ನು ತೋರ್ಪಡಿಸಿದ್ದರು. ಆದರೆ, ಎರಡನೇ ಬಾರಿಗೆ ಶಾಸಕರಾದ ಮೇಲೆ ಅಹಿಂದ ಮತ್ತು ಶೋಷಿತ ವರ್ಗಕ್ಕೆ ಸೇರಿದ ಸಭೆ-ಸಮಾರಂಭಗಳಿಂದ ದೂರ ಉಳಿದಿರುವುದು ಜಿಜ್ಞಾಸೆ ಮೂಡಿಸಿದೆ. ಕೋಲಾರದಲ್ಲಿ ನಡೆಯುತ್ತಿರುವ ಯಾವುದೇ ಸರ್ಕಾರಿ ಕಾರ್ಯಕ್ರಮಗಳಿಗೆ ಶಾಸಕರು ಗೈರು ಹಾಜರಾಗುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
 


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement