ನಾಯಿ ದಾಳಿ, ರೈಲಿಗೆ ಸಿಕ್ಕಿ 25 ಕುರಿಗಳ ಸಾವು
ಚಿಂತಾಮಣಿ: ನಾಯಿಗಳ ದಾಳಿ ಮತ್ತು ಅವುಗಳಿಂದ ತಪ್ಪಿಸಲು ಹೋದ ಕುರಿಗಳ ಮೇಲೆ ರೈಲು ಹಾದು ಹೋದ ಪರಿಣಾಮ 25ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಅಮಿಟಗಾನಹಳ್ಳಿ ರೇಲ್ವೆ ಅಂಡರ್ಪಾಸ್ ಬಳಿ ಮಂಗಳವಾರ ನಡೆದಿದೆ.
ಕುರಿ ಮಂದೆ ಮೇಲೆ ಏಕಾಏಕಿ ನಾಯಿಗಳು ದಾಳಿ ಮಾಡಿದವು. ಈ ನಾಯಿಗಳಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಕುರಿಗಳು ಒಮ್ಮೆಲೆ ರೈಲು ಹಳಿಗಳ ಮೇಲೆ ಓಡಲು ಆರಂಭಿಸಿದವು. ಇದೇ ವೇಳೆ ರೈಲು ಕೂಡ ಆಗಮಿಸಿದ್ದರಿಂದ ಕುರಿಗಳ ಮಾರಣಹೋಮವೇ ನಡೆಯಿತು. ನಾಯಿಗಳ ದಾಳಿಯಿಂದಲೂ ಕೆಲ ಕುರಿಗಳು ಮೃತಪಟ್ಟಿದ್ದು, ಒಟ್ಟು 25 ಕುರಿಗಳು ಅಸುನೀಗಿವೆ. ಅಮಿಟಗಾನಹಳ್ಳಿಯಲ್ಲಿ ಮಂಗಳವಾರ ಮಧ್ಯಾಹ್ನದಂದು ಸುಮಾರು 10ಕ್ಕೂ ಹೆಚ್ಚು ಬೀದಿ ನಾಯಿಗಳು ಕಸಾಯಿ ಖಾನೆಗಳ ಬಳಿ ರಕ್ತ ಮತ್ತು ಮೂಳೆಗಳ ರುಚಿ ಕಂಡಿದ್ದವು. ಅಮಿಟಗಾನಹಳ್ಳಿ ಗ್ರಾಮದ ವೆಂಕಟಲಕ್ಷ್ಮಮ್ಮ ಕೋಂ ವೆಂಕಟೇಶ್ ಎಂಬವರಿಗೆ ಸೇರಿದ ಕುರಿಗಳ ಮಂದಿ ಮೇಲೆ ಈ ನಾಯಿಗಳು ಏಕಾಏಕಿ ದಾಳಿ ನಡೆಸಿದ ಪರಿಣಾಮ ಹಲವು ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಇನ್ನೂ ಹಲವು ಕುರಿಗಳು ದಿಕ್ಕು ತೋಚದೆ ದಿಕ್ಕಾ ಪಾಲಾಗಿ ಓಡಿದ ಪರಿಣಾಮ ಚಿಕ್ಕಬಳ್ಳಾಪುರ ಮಾರ್ಗವಾಗಿ ಬರುತ್ತಿದ್ದ ರೈಲಿಗೆ ಇನ್ನೂ ಹಲವು ಕುರಿಗಳು ಬಲಿಯಾದ ಪರಿಣಾಮ ಸುಮಾರು 25ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ಇದರಿಂದ ಸುಮಾರು 2 ಲಕ್ಷ ಉಂಟಾಗಿದೆ ಎಂದು ಮಹಿಳೆ ವೆಂಕಟಲಕ್ಷ್ಮಮ್ಮ ಮತ್ತು ಪತಿ ವೆಂಕಟೇಶ್ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.