ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮಕ್ಕಳಿಗೆ ಸೈಕಲ್ ವಿತರಣೆ

Rashmi Kasaragodu
Updated On : 22 Jan 2014, 1:41 am

ಶಿಡ್ಲಘಟ್ಟ: ಸರ್ಕಾರದ ಸೌಲತ್ತುಗಳನ್ನು ಸದುಪಯೋಗಪಡಿಸಿಕೊಂಡು ವಿಧ್ಯಾಭ್ಯಾಸದಲ್ಲಿ ಮುಂದುವರಿಯಬೇಕು ಎಂದು ಶಾಸಕ ಎಂ. ರಾಜಣ್ಣ ಹೇಳಿದರು.ಗಂಜಿಗುಂಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಸೈಕಲ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯುವಂತಾಗಬೇಕು ಎಂಬ ಉದ್ದೇಶದಿಂದ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.ಶಾಲೆಗೆ ಅವಶ್ಯವಿರುವ ಕಾಂಪೌಂಡ್, ಶಾಲಾ ಮೈದಾನ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಜಿಪಂ ಸದಸ್ಯರ ನಿಧಿಯಿಂದ ಒದಗಿಸುವುದಾಗಿ ಭರವಸೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಎಸ್ಡಿಎಂಸಿ ಅಧ್ಯಕ್ಷ ರಘುನಾಥರೆಡ್ಡಿ, ಬಾಬಾಜಾನ್, ವಸಂತಾಚಾರಿ ಇದ್ದರು.
ಆಸ್ಪತ್ರೆ ಕಾಂಪೌಂಡ್ ಕಟ್ಟಲು 10 ಲಕ್ಷ
ಟೇಕಲ್: ಹುಳದೇನಹಳ್ಳಿ ಗ್ರಾಮದಲ್ಲಿ 1 ಕೋಟಿ ರುಪಾಯಿ ಅಂದಾಜು ವೆಚ್ಚದಲ್ಲಿ ಆಗಿನ ಅಧ್ಯಕ್ಷೆ ಚೌಡೇಶ್ವರಿ ರಾಮು ಅವರು ಗುದ್ದಲಿ ಪೂಜೆ ನೆರವೇರಿಸಿದ್ದರು. ಇದೀಗ ಇಂದಿನ ಅಧ್ಯಕ್ಷ ತೋಪಲ್ಲಿ ನಾರಾಯಣಸ್ವಾಮಿ ಈ ಆಸ್ಪತ್ರೆ ಕಾಂಪೌಂಡ್ ನಿರ್ಮಾಣಕ್ಕೆ 10 ಲಕ್ಷ ಬಿಡುಗಡೆ ಮಾಡಿದ್ದಾರೆಂದು ಟೇಕಲ್ ಜಿಪಂ ಸದಸ್ಯೆ ರತ್ನಮ್ಮ ನಂಜೇಗೌಡರು ತಿಳಿಸಿದರು. ಗ್ರಾಮದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಆಸ್ಪತ್ರೆ ಕಟ್ಟಡದ ವೀಕ್ಷಣೆ ಮಾಡಿ ಮಾತನಾಡಿ, ಈ ಆಸ್ಪತ್ರೆಯನ್ನು 2-3 ತಿಂಗಳಲ್ಲಿ ಸುಸಜ್ಜಿತವಾದ ಆಸ್ಪತ್ರೆಯಾಗುತ್ತಿದ್ದು ಈ ಭಾಗದ ಜನತೆಗೆ ಸಹಕಾರಿಯಾಗಲಿದೆ ಎಂದರು. ಹಳೇ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಸ್ವಚ್ಛತೆಯಿಂದ ಕೊಠಡಿಗಳನ್ನು ಇಟ್ಟಿರುವುದಕ್ಕೆ ಪ್ರಶಂಸಿದರು. ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ಕೆ.ವೈ.ನಂಜೇಗೌಡ, ತಾಪಂ ಸದಸ್ಯೆ ನಿರ್ಮಲಾಆಂಜಿನಪ್ಪ, ಆಸ್ಪತ್ರೆ ವೈದ್ಯಾಧಿಕಾರಿ ಶೃತಿ, ಟೇಕಲ್ ಆಂಜಿನಪ್ಪ ಇದ್ದರು.


ಕರಡಿ ದಾಳಿ; ವ್ಯಕ್ತಿಗೆ ತೀವ್ರ ಗಾಯ


ಬಂಗಾರಪೇಟೆ: ಕರಡಿ ದಾಳಿಗೆ ವ್ಯಕ್ತಿಯೊಬ್ಬ ಗಾಯಗೊಂಡಿರುವ ಪ್ರಕರಣ ತಾಲೂಕಿನ ಗಡಿ ಭಾಗದ ಕದರಿನತ್ತ ಗ್ರಾಮದಲ್ಲಿ ನಡೆದಿದೆ. ಮನ್ನೋಜಿರಾವ್ ಎಂಬಾತ ಕರಡಿ ದಾಳಿಗೆ ತುತ್ತಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದು, ಗ್ರಾಮದ ಬಳಿಯಿರುವ ಕಾಡಿನಲ್ಲಿ ದನಗಳನ್ನು ಮೇಯಿಸುತ್ತಿದ್ದಾಗ ಮೂರು ಕರಡಿಗಳು ಏಕಕಾಲಕ್ಕೆ ದಾಳಿ ಮಾಡಿ ಮನ್ನೋಜಿರಾವ್ ಅವರ ಕಾಲುಗಳನ್ನು ಕಚ್ಚಿದೆ ಇದರಿಂದ ಬಿಡಿಸಿಕೊಂಡು ಹೊರಬರಲು ಆತ ಹೆಣಗಾಡಬೇಕಾಯಿತು. ತಕ್ಷಣ ಅಕ್ಕಪಕ್ಕದ ಗ್ರಾಮಸ್ಥರು ಮನ್ನೋಜಿರಾವ್ ಸಹಾಯಕ್ಕೆ ಬಂದು ನಂತರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಳೆದ ಐದು ತಿಂಗಳಿಂದ ಕಾಡಾನೆಗಳ ಹಾವಳಿಯಿಂದ ತತ್ತರಿಸಿದ್ದರು. ಆನೆಗಳನ್ನು ಮರಳಿ ತಮಿಳುನಾಡಿನತ್ತ ಸಾಗ ಹಾಕಲಾಗಿದೆ. ಈಗ ಕರಡಿ ಹಾವಳಿ ಶುರುವಾಗಿದೆ. ಕಳೆದ ವರ್ಷ ಇದೇ ಪ್ರದೇಶದಲ್ಲಿ ಕರಡಿ ದಾಳಿ ಮಾಡಿ ಪೊಲೇನಹಳ್ಳಿ ಬಾಲಮ್ಮ ಹಾಗೂ ಕದರಿನತ್ತ ಗ್ರಾಮದ ಗೋವಿಂದಪ್ಪ ಎಂಬುವರನ್ನು ಗಂಭೀರವಾಗಿ ಗಾಯಗೊಳಿಸಿತ್ತು. ಈಗ ಮತ್ತೆ ಕರಡಿಗಳು ಕಾಣಿಸಿಕೊಂಡು ಗ್ರಾಮಸ್ಥರನ್ನು ಭಯಬೀತರನ್ನಾಗಿಸಿದೆ. ಕದರಿನತ್ತ ಗ್ರಾಮಸ್ಥರು ಕಾಡಿನ ಮಾರ್ಗವಾಗಿಯೇ ಪಟ್ಟಣಕ್ಕೆ ಬರಬೇಕು ಹಾಗೂ ದನ ಮೇಯಿಸಲು ಪ್ರತಿದಿನ ಹತ್ತಾರು ಮಂದಿ ಕಾಳಮ್ಮನಗುಡಿ ಕಾಡಿಗೆ ಹೋಗುವರು. ಆಗಾಗ ಕಾಡಿನಲ್ಲಿರುವ ಮೃಗಗಳು ಮನುಷ್ಯರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದೆ. ಇದರಿಂದ ದನಗಳನ್ನು ಮೇಯಿಸಲು ಕಾಡಿಗೆ ಹೋಗಲು ಜನರು ಹೆದರುವಂತಾಗಿದೆ. ಅರಣ್ಯ ಇಲಾಖೆ ಆನೆಗಳನ್ನು ಕಾರ್ಯಾಚರಣೆ ಮೂಲಕ ಓಡಿಸಿದರ ರೀತಿಯಲ್ಲೇ ಕರಡಿಗಳನ್ನು ಓಡಿಸಬೇಕೆಂದು ಕದರಿನತ್ತ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement