ಕಲ್ಯಾಣಿ ಪುನಶ್ಚೇತನಕ್ಕೆ ಶುಕ್ರದಸೆ
ಶ್ರೀ ವೇಣುಗೋಪಾಲಸ್ವಾಮಿ ಕಲ್ಯಾಣಿಗೆ ನಗರಸಭೆಯಿಂದ 30 ಲಕ್ಷ ವೆಚ್ಚದಲ್ಲಿ ಪ್ರಥಮ ಹಂತದ ಕಾಮಗಾರಿಗೆ ಚಾಲನೆ
ಟಿ ಪಾ.ಶ್ರೀ. ಅನಂತರಾಮ್
ಕನ್ನಡಪ್ರಭ ವಾರ್ತೆ ಕೋಲಾರ ಜ.22
ಮುಚ್ಚುವ ಹಂತ ತಲುಪಿದ್ದ ಕೋಲಾರದ ಟೇಕಲ್ ರಸ್ತೆಯಲ್ಲಿನ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯಕ್ಕೆ ಸೇರಿದ ಪುರಾತನ ಕಲ್ಯಾಣಿಯ ಪುನಶ್ಚೇತನಕ್ಕೆ ಶುಕ್ರದಸೆ ಒದಗಿದೆ.
ಈ ಕಲ್ಯಾಣಿ ಇನ್ನು ಪ್ರಯೋಜನಕ್ಕೆ ಬಾರದು ಎಂದು ಕೆಲವರು ಮುಚ್ಚಿ ಅಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಚಿಂತಿಸಿದ್ದರು. ಆದರೆ, ಕನ್ನಡಪ್ರಭ ಸೇರಿದಂತೆ ಇನ್ನಿತರ ಮಾಧ್ಯಮಗಳು ಈ ಕಲ್ಯಾಣಿ ಉಳಿಯುವುದರಿಂದ ಮುಂದೊಂದು ದಿನ ನಗರದಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ಪೂರಕವಾಗಬಲ್ಲದು ಎಂದು ಜಿಲ್ಲಾ ಆಡಳಿತ ಗಮನ ಸೆಳೆದಿತ್ತು.
ಈ ಹಿಂದಿನ ಜಿಲ್ಲಾಧಿಕಾರಿ ಪ್ರಸ್ತುತ ರಾಮನಗರದ ಡಿಸಿ ಆಗಿರುವ ಡಿ.ಎಸ್. ವಿಶ್ವನಾಥ್ ಅವರು ಕಲ್ಯಾಣಿಯ ಪುನಶ್ಚೇತನಕ್ಕೆ ಸಿದ್ಧತೆ ನಡೆಸಿದ್ದರಾದರೂ ರಾಜಕೀಯ ಒತ್ತಡಗಳಿಂದ ಅಭಿವೃದ್ಧಿ ಕಾರ್ಯ ಕೈಗೂಡಿರಲಿಲ್ಲ.
ಹಾಲಿ ಡಿಸಿ ಡಿ.ಕೆ. ರವಿ ಅವರ ಮೇಲೂ ಪ್ರಭಾವ ಬೀರಲು ಕೆಲವರು ಯತ್ನಿಸಿದ್ದರಾದರೂ ದಿಟ್ಟ ನಿಲುವಿನಿಂದಾಗಿ ಪುರಾತನ ಶ್ರೀ ವೇಣುಗೋಪಾಲಸ್ವಾಮಿ ಕಲ್ಯಾಣಿಯ ಕಾಯಕಲ್ಪಕ್ಕೆ ಇದೀಗ ನಗರಸಭೆಯ ಅಧಿಕಾರಿಗಳು ಮುಂದಾಗಿದ್ದಾರೆ.
ಕಲ್ಯಾಣಿಯಲ್ಲಿ ಅನೇಕ ವರ್ಷಗಳಿಂದ ತುಂಬಿಕೊಂಡಿರುವ ಕೊಳಚೆ ನೀರು ಹಾಗೂ ಹೂಳನ್ನು ತೆಗೆದು ಸ್ವಚ್ಛಗೊಳಿಸಲಾಗುತ್ತಿದೆ. ಸುಮಾರು 75 ಲಕ್ಷ ರು.ಗಳು ಅಭಿವೃದ್ಧಿಗೆ ಬೇಕಾಗಿದ್ದು ನಗರಸಭೆಯು ತನ್ನ ಬಳಿ ಲಭ್ಯವಿರುವ 30 ಲಕ್ಷ ರು.ಗಳಲ್ಲಿ ಮೊದಲ ಹಂತದ ಕಾಮಗಾರಿಗೆ ಯೋಜನೆ ಸಿದ್ಧಪಡಿಸಿ ಪುನಶ್ಚೇತನಕ್ಕೆ ಚಾಲನೆ ನೀಡಿದೆ.
35 ಅಡಿ ಉದ್ದ-35 ಅಡಿ ಅಗಲ ವ್ಯಾಪ್ತಿಯ ಕಲ್ಯಾಣಿಯ ಒಟ್ಟು ಆಳ 9 ಮೀಟರ್ಗಳಾಗಿದ್ದು ಬುಧವಾರದಿಂದ ಜೆಬಿಸಿ ಮೂಲಕ ಕಲ್ಯಾಣಿಯ ಸುತ್ತ ಹರಡಿರುವ ಮಣ್ಣು, ಗಿಡ ಗಂಟೆಗಳನ್ನು ತೆರವು ಮಾಡಲಾಗುತ್ತಿದೆ. ಕಲ್ಯಾಣಿಯ ಸುತ್ತಲು ಬೇಲಿ ಹಾಕಲು, ಮೆಟ್ಟಲುಗಳನ್ನು ಸರಿಪಡಿಸುವುದು ಮತ್ತು ಅಗತ್ಯವಿರುವ ಕಡೆ ಹೊಸದಾಗಿ ಮೆಟ್ಟಲುಗಳ ನಿರ್ಮಾಣ ಜತೆಗೆ ಹೂಳು ತೆಗೆದು ನೀರು ಸಂಗ್ರಹಣೆಗೆ ವ್ಯವಸ್ಥೆ ಕಲ್ಪಿಸುವುದು ಮೊದಲ ಹಂತದ ಕಾಮಗಾರಿಯಾಗಿದೆ ಎಂದು ನಗರಸಭೆ ಆಯುಕ್ತ ಜಗದೀಶ್ ತಿಳಿಸಿದ್ದಾರೆ.
ಇದೊಂದು ಸುಂದರ ಕಲ್ಯಾಣಿ ಆಗಲಿದೆ, ಬೇಲಿ ಹಾಕುವುದರಿಂದ ಒತ್ತುವರಿ ತಪ್ಪಿಸಬಹುದಾಗಿದೆ, ಪಕ್ಕದಲ್ಲೇ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯ ಇರುವುದರಿಂದ ಈ ಹಿಂದಿನ ಪದ್ಧತಿಯಂತೆ ಹಬ್ಬಹರಿದಿನಗಳಲ್ಲಿ ದೇವರನ್ನು ಕಲ್ಯಾಣಿಯಲ್ಲಿ ತೊಳೆದು ಪೂಜಾ ಕಾರ್ಯಗಳು ನೆರವೇರುವುದಕ್ಕೆ ಅವಕಾಶವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಮುಂದಿನ ಮಳೆಗಾಲದ ವೇಳೆಗೆ ಕಲ್ಯಾಣಿಯ ಅಭಿವೃದ್ಧಿ ಕಾಮಗಾರಿ ಮುಗಿಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಲ್ಯಾಣಿ ಕಾಮಗಾರಿಯ ಪರಿಶೀಲನೆ ಸಂದರ್ಭದಲ್ಲಿ ಆರ್.ಒ ಪ್ರಕಾಶ್, ಎಂಜನಿಯರ್ ಶ್ರೀನಿವಾಸ್, ಚಲಪತಿ ಇದ್ದರು.