ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಕ್ರಮ
ಶ್ರೀನಿವಾಸಪುರ: ಪರಿಶಿಷ್ಟ ಜಾತಿ, ಪಂಗಡಗಳ ಕುಂದು ಕೊರತೆ ಸಭಗೆ ಕೆಲ ಅಧಿಕಾರಿಗಳು ಗೈರು ಆಗಿರುವುದಕ್ಕೆ ಶಿಸ್ತಿನ ಕ್ರಮ ಜರುಗಿಸಲಾಗುವುದೆಂದು ತಹಸೀಲ್ದಾರ್ ಎಚ್. ಜಯ ಅವರು ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಗಬೇಕಿದ್ದ ಸಭೆಗೆ ದಲಿತ ಮುಖಂಡರಿಗೆ ಸರಿಯಾದ ಮಾಹಿತಿ ಇಲ್ಲದೆ ದಲಿತರು ಬರದೆ ಹೊರಗೆ ಪ್ರತಿಭಟಿಸಲು ಮುಂದಾಗಿದ್ದರು. ತಾಲೂಕು ಸಮಾಜ ಕಲ್ಯಾಣಾಧಿಕಾರಿ ಶಾಂತಮ್ಮ ದಲಿತ ಮುಖಂಡರ ಮನವೊಲಿಸಿ ಸಭೆ ಪ್ರಾರಂಭಿಸಿದರು. ಹಿಂದಿನ ಸಭೆಯ ನಡಾವಳಿಗಳನ್ನು ಓದುವಾಗ ಸಭೆಗೆ ಕೆಲ ಇಲಾಖಾಧಿಕಾರಿಗಳು ಗೈರು ಹಾಜರಿ ಆಗಿರುವುದಕ್ಕೆ ಆಕ್ರೋಶಗೊಂಡ ದಲಿರ ಮುಖಂಡರು ಈ ಬಗ್ಗೆ ಪ್ರಶ್ನಿಸಿದಾಗ ಗೈರು ಹಾಜರಾಗಿರುವ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಜರುಗಿಸಲಾಗುವುದೆಂದು ತಹಸೀಲ್ದಾರರು ತಿಳಿಸಿದರು. ಸಭೆಯಲ್ಲಿ ದಲಿತ ಮುಖಂಡರು ತೊಂದರೆಗಳ ಬಗ್ಗೆ ದೂರುಗಳ ಸುರಿಮಳೆ ಸುರಿಸಿದರು. ಇದಕ್ಕೆ ಮುಂದಿನ ಸಭೆಯಲ್ಲಿ ಪರಿಹಾರ ನೀಡುವುದಾಗಿ ತಹಸೀಲ್ದಾರರು ಸಭೆ ಮುಗಿಸಿದರು. ಪುರಸಭೆ ಮುಖ್ಯಾಧಿಕಾರಿ ರೇಣುಕಾ, ಸಮಾಜ ಕಲ್ಯಾಣಾಧಿಕಾರಿ ಶಾಂತಮ್ಮ, ಕಾರ್ಯನಿರ್ವಹಣಾಧಿಕಾರಿ ಸಿ. ಶಂಕರಪ್ಪ, ಸರ್ಕಲ್ ಇನ್ಸಪೆಕ್ಟರ್ ಜಿ. ಶಿವಪ್ರಸಾದ್, ಕೃಷಿ ಇಲಾಖೆಯ ರವಿ ಇದ್ದರು.