ನಶಿಸುತ್ತಿರುವ ಕಲೆ, ಸಂಸ್ಕೃತಿ ಉಳಿಸಿ
ಕ.ಪ್ರ.ವಾರ್ತೆ ಕೋಲಾರ ಜ.22
ಇಂದಿನ ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಕಂಪ್ಯೂಟರ್, ಮೊಬೈಲ್, ದೂರದರ್ಶನದ ಕಡೆ ಹೆಚ್ಚು ಗಮನಿಸದೆ ನಶಿಸಿ ಹೋಗುತ್ತಿರುವ ಕಲೆ- ಸಂಸ್ಕೃತಿ ಉಳಿಸುವತ್ತ ಚಿಂತನೆ ಮಾಡಬೇಕೆಂದು ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಂಗವಾದಿ ಎಂ.ನಾಗರಾಜ್ ಸಲಹೆ ನೀಡಿದರು.
ಶ್ರೀನಿವಾಸಪುರ ತಾಲೂಕಿನ ದಳಸನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಚಿಗುರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಲೆ ಮತ್ತು ಸಂಸ್ಕೃತಿಯ ಮೂಲಕ ಮಕ್ಕಳಲ್ಲಿ ದೇಶಭಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ ಎಂದರು.
ಸಮಾಜದ ಬೆಳವಣಿಗೆಗೆ ಪೂರಕವಾಗಿ ಶ್ರಮಿಸುವ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಹಸಿವು ಮೂಡಿಸಿ, ಪಾಠ ಪ್ರವಚನಗಳ ಜೊತೆಗೆ ಇತರೆ ಹವ್ಯಾಸ, ಪಠ್ಯೇತರ ಚಟುವಟಿಕೆಗಳಲ್ಲೂ ಮುಂದಾಗಬೇಕು. ಅಲ್ಲದೆ, ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆ ಗುರುತಿಸಿ, ಗೌರವಿಸುವ ಕೆಲಸ ನಿರಂತರ ಆಗಬೇಕು ಎಂದರು.
ಶಾಲಾ ಮುಖ್ಯೋಪಾಧ್ಯಾಯ ಶ್ರೀನಿವಾಸಯ್ಯ ಮಾತನಾಡಿ, ಸಹ ಪಠ್ಯ ಚಟುವಟಿಕೆಗಳಲ್ಲಿನ ಕಲಿಕೆ ನಿರಂತರ ಆದಾಗ ಕನ್ನಡ, ಕನ್ನಡತನ ಬೆಳೆಯುತ್ತದೆ. ಭಾಷಾ ವ್ಯಾಮೋಹ ಮೂಡುತ್ತದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಚಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಶ್ರೀನಿವಾಸ್, ಚಿಗುರು ಮೂಲಕ ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಗುರುತಿಸಿದಂತೆಯೇ ಯಾವ ವಿದ್ಯಾರ್ಥಿಗೆ ಯಾವ ವಿಷಯದಲ್ಲಿ ಆಸಕ್ತಿ ಎಂಬುದನ್ನು ಅರಿತು ಮೌಲ್ಯಾಧಾರಿತ ಶಿಕ್ಷಣ- ಸಾಹಿತ್ಯದ ಅರಿವು ಮೂಡಿಸಲು ಶಿಕ್ಷಕರು ನೆರವಾಗಬೇಕು ಎಂದರು.
ಏರ್ಪಡಿಸಿದ್ದ ಜನಪದ ಗೀತ ಗಾಯನ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.