ವಿದ್ಯಾರ್ಥಿಗಳ ಪ್ರತಿಭಟನೆ, ಲಘು ಲಾಠಿ ಪ್ರಹಾರ
ಕೋಲಾರ: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ನಗರದ ಆಲ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಳಬಾಗಿಲು ರಸ್ತೆಯಲ್ಲಿನ ಕಾಂತರಾಜ ವೃತ್ತದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿ ಗಂಗರಾಜು ದೇಹ ಸ್ಥಿತಿಯ ಬಗ್ಗೆ ಮಾಹಿತಿ ನೀಡಲು ಮತ್ತು ರೋಗಿಯನ್ನು ಭೇಟಿಯಾಗಲು ಅವಕಾಶ ನೀಡುತ್ತಿಲ್ಲವೆಂದು ಆಸ್ಪತ್ರೆ ಸಿಬ್ಬಂದಿ ವಿರುದ್ಧ ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿಗಳ ಬೇಡಿಕೆಗೆ ಬೆಂಬಲ ನೀಡಲು ಬಂದಿದ್ದ ಎಬಿವಿಪಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮುರಳಿ,ನಗರ ಕಾರ್ಯದರ್ಶಿ ಹರೀಶ್, ಪಾಲಿಟೆಕ್ನಿಕ್ನ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದ್ದಾರೆ. ಸುಮಾರು 600 ವಿದ್ಯಾರ್ಥಿಗಳು ಪೊಲೀಸರ ಕ್ರಮ ಖಂಡಿಸಿ ಧರಣಿ ಮಾಡಲು ಮುಂದಾದಾಗ ವಿನಾ ಕಾರಣ ಲಾಠಿ ಪ್ರಹಾರ ನಡೆಸಿದ್ದಾರೆ, ಹೆಣ್ಣು ಮಕ್ಕಳ ಮೇಲೂ ಪೊಲೀಸರು ದೌರ್ಜನ್ಯವೆಸಗಿದ್ದಾರೆಂದು ಆರೋಪಿಸಿದ್ದಾರೆ.
ನಾಲ್ಕು ದಿನಗಳಿಂದ ಆಸ್ಪತ್ರೆಗೆ ಬಂದು ವಿಚಾರಿಸಿದರೂ ಮಾಹಿತಿ ನೀಡುತ್ತಿಲ್ಲ, ಗಾಯಾಳುವಿನ ತಂದೆ-ತಾಯಿಗೂ ಮಗನ ದೇಹ ಸ್ಥಿತಿ ಏನಾಗಿದೆ ಎಂಬುದು ತಿಳಿಯದೆ ಗಾಬರಿಗೊಂಡಿರುವುದರಿಂದ ಬುಧವಾರ ವಿದ್ಯಾರ್ಥಿಗಳು ಆಸ್ಪತ್ರೆಗೆ ಬಂದು ಮಾಹಿತಿ ಕೇಳಿದಾಗ ಭದ್ರತಾ ಸಿಬ್ಬಂದಿ ಅನುಚಿತವಾಗಿ ವರ್ತಿಸಿದ್ದಾರೆ, ಈ ವಿಚಾರ ತಿಳಿದು ತಾವು ಆಸ್ಪತ್ರೆಗೆ ಹೋಗಿ ನ್ಯಾಯ ಕೇಳಿದಾಗ ಮಾಹಿತಿ ನೀಡುವುದಾಗಿ ಹೇಳಿ ಕೆಲವರನ್ನು ಮಾತ್ರ ಎಂಎಸ್ ಕೊಠಡಿಗೆ ಕರೆದಿದ್ದರಿಂದ ವಿದ್ಯಾರ್ಥಿಗಳು ಇಲ್ಲೇ ಉತ್ತರ ನೀಡುವಂತೆ ಕೇಳಿದಾಗ ನಿರಾಕರಿಸಿದರಲ್ಲದೆ ನಮ್ಮನ್ನು ಬಂಧಿಸಿದ್ದರಿಂದ ಉಳಿದವರು ಪ್ರತಿಭಟಿಸಿದರು.
ರೋಗಿಯ ಆರೋಗ್ಯದ ಬಗ್ಗೆ ಮಾಹಿತಿ ನೀಡದಿರುವುದು ಅವನ ತಂದೆ-ತಾಯಿಯ ಆತಂಕಕ್ಕೆ ಕಾರಣವಾಗಿರುವುದರಿಂದ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿ ಮುಖಂಡ ಮುರಳಿ ಒತ್ತಾಯಿಸಿದ್ದಾರೆ.