ಸಮರ್ಪಕ ಅನಿಲ ಪೂರೈಕೆಗೆ ಆಗ್ರಹಿಸಿ ಪ್ರತಿಭಟನೆ
ಟೇಕಲ್: ಟೇಕಲ್ನ ಇಂಡೇನ್ ಗ್ಯಾಸ್ ಸಬ್ ಡೀಲರ್ ಏಕಮುಖ ಧೋರಣೆಯಿಂದ ಪರದಾಡಿದ ಗ್ರಾಹಕರು ರೊಚ್ಚಿಗೆದ್ದು ಗ್ಯಾಸ್ ಏಜೆಂಟ್ ಹಾಗೂ ಗ್ಯಾಸ್ ಸಿಲಿಂಡರ್ ತುಂಬಿದ ವಾಹನಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕಾನೂನಿನ ಪ್ರಕಾರ 40 ದಿನಕ್ಕೆ ಒಂದು ಸಿಲಿಂಡರ್ ನೀಡಬೇಕು. ಆದರೆ ಇಲ್ಲಿ 40 ದಿನದ ತರುವಾಯ ಭಾನುವಾರದ ದಿನ ಖಾಲಿ ಸಿಲಿಂಡರ್ ಕೊಟ್ಟು ಬುಕ್ ಮಾಡಬೇಕು. ಬುಧವಾರ ರಾತ್ರಿಯೆ ಸರದಿ ಪ್ರಕಾರ ರಾತ್ರಿ 2 ಗಂಟೆಯಿಂದಲೆ ಅದಕ್ಕೆ ಸರತಿ ಸಾಲು ನಿಲ್ಲಿಸಿ ರಾತ್ರಿಯಿಡಿ ಜಾಗರಣೆ ಮಾಡಿದರೆ ಮುಂಜಾನೆ ತುಂಬಿದ ಸಿಲಿಂಡರ್ ನೀಡುವುದು. ಗ್ಯಾಸ್ ಬೆಲೆ 430 ಇದ್ದು, ಟೇಕಲ್ನಲ್ಲಿ 480 ರುಪಾಯಿ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ಏಜೆಂಟರನ್ನು ವಿಚಾರಿಸಿದರೆ ಉಡಾಫೆ ಉತ್ತರ ನೀಡುತ್ತಾರೆ ಎಂದು ಆರೋಪಿಸಿದ ಜನತೆ ಬುಧವಾರ ಘೇರಾವ್ ಮಾಡಿದರು.
ಈ ಸಂದರ್ಭದಲ್ಲಿ ಗ್ಯಾಸ್ ಏಜೆಂಟರಿಗೂ ಗ್ರಾಹಕರಿಗೆ ಮಾತಿನ ಚಕಮಕಿ ನಡೆದು, ಮಾಲೂರಿನ ಮಾರಿಕಾಂಭ ಏಜೆಂಟ್ರು ಬರಬೇಕೆಂದು ಪಟ್ಟುಹಿಡಿದರು.
ಕೊನೆಗೆ ಸ್ಥಳೀಯ ಮುಖಂಡರಾದ ಜಿಪಂ ಮಾಜಿ ಸದಸ್ಯ ಆರ್. ರಾಜಣ್ಣ, ತಾಪಂ ಮಾಜಿ ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ, ಆರ್. ವೆಂಕಟೇಶಗೌಡ ಮುಂತಾದವರ ಮಧ್ಯಸ್ಥಿಕೆಯಿಂದ ಮಾಲೂರಿನ ಮೂಲ ಏಜೆಂಟರಿಗೆ ಪೋನ್ ಮಾಡಿ ಮುಂದಿನ ವಾರ ಟೇಕಲ್ಗೆ ಬಂದು ಸಮಸ್ಯೆ ಇತ್ಯರ್ಥಪಡಿಸಬೇಕೆಂದು ತಿಳಿಸಿ ಗ್ಯಾಸ್ ವಿತರಣೆ ಮಾಡಲಾಯಿತು.