ಸಿದ್ದಯ್ಯ ಸ್ಪರ್ಧೆಗೆ ಜೆಡಿಎಸ್ನಲ್ಲಿ ವಿರೋಧ
ಕೋಲಾರ: ಕೋಲಾರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಜೆಡಿಎಸ್ನಿಂದ ಅಧಿಕೃತ ಅಭ್ಯರ್ಥಿಯ ಹೆಸರು ಪ್ರಕಟವಾಗುವ ಮುನ್ನವೇ ಭಿನ್ನಮತ ಸ್ಪೋಟಗೊಂಡಿದೆ. ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಬುಧವಾರ ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷರು ಪತ್ರಿಕಾಗೋಷ್ಠಿ ಕರೆದಿದ್ದರು.
ಈ ಬಾರಿ ಚುನಾವಣೆಗೆ ಸ್ಪರ್ಧಿಸಲು 10ಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳು ಇದ್ದಾರೆ, ಎಸ್.ಬಿ. ಮುನಿವೆಂಕಟಪ್ಪ, ಶ್ರೀಕೃಷ್ಣ, ಮಂಗಮ್ಮ, ಸಿದ್ದಯ್ಯ, ಮೈಲಾರಪ್ಪ ಸೇರಿದಂತೆ ಆಕಾಂಕ್ಷಿತರ ಪಟ್ಟಿಯನ್ನು ಪಕ್ಷದ ವರಿಷ್ಠರಿಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಪತ್ರಕರ್ತರಿಗೆ ತಿಳಿಸುತ್ತಿದ್ದಂತೆ ಪತ್ರಕರ್ತರ ಹಿಂದಿನ ಸಾಲಿನಲ್ಲಿ ಕುಳಿತಿದ್ದ ಐದಾರು ಮಂದಿ ಯುವಕರು ಒಟ್ಟಿಗೆ ಎದ್ದು ಯಾವುದೇ ಕಾರಣಕ್ಕೂ ಸಿದ್ದಯ್ಯನವರಿಗೆ ಟಿಕೆಟ್ ನೀಡಬಾರದು, ಒಂದು ವೇಳೆ ಕಾರ್ಯಕರ್ತರ ಅಭಿಪ್ರಾಯ ಕಡೆಗಣಿಸಿದರೆ ಚುನಾವಣೆಯಲ್ಲಿ ಪಕ್ಷದ ಪರವಾಗಿ ಕೆಲಸ ಮಾಡಲ್ಲವೆಂದು ಎಚ್ಚರಿಸಿದರು. ಈ ಯುವಕರು ಪತ್ರಿಕಾಗೋಷ್ಠಿ ಮುಗಿಯುತ್ತಿದ್ದಂತೆ ವೇದಿಕೆಯ ಬಳಿ ನಿಂತು ಸಿದ್ದಯ್ಯ ಅಭ್ಯರ್ಥಿ ಆಗುವುದಕ್ಕೆ ನಮ್ಮ ವಿರೋಧವಿದೆ, ಎಸ್.ಬಿ. ಮುನಿವೆಂಕಟಪ್ಪ ಇಲ್ಲವೇ ಮೈಲಾರಪ್ಪನವರಿಗೆ ಟಿಕೆಟ್ ನೀಡಿ ಎಂದು ಗಟ್ಟಿಯಾಗಿ ಹೇಳಿದರು. ಪರಿಸ್ಥಿತಿ ಬಿಗಡಾಯಿಸಿರುವುದನ್ನು ಅರಿತ ಮುಖಂಡರು ಪತ್ರಕರ್ತರ ಭವನದಿಂದ ನಿರ್ಗಮಿಸಿದರು