ಕಂದಾಯ ಅದಾಲತ್ ಕಾರ್ಯಕ್ರಮಕ್ಕೆ ಚಾಲನೆ
ಟೇಕಲ್: ಕಂದಾಯ ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಕಂದಾಯ ಅದಾಲತ್ ಕಾರ್ಯಕ್ರಮ ನಡೆಸುತ್ತಿದ್ದು, ತಿದ್ದುಪಡಿ, ಖಾತೆ ಬದಲಾವಣೆ ಸಕಾಲದಲ್ಲಿ ಒದಗಿಸಲು ಇದು ಸಹಾಯಕವಾಗಿದೆ ಎಂದು ಮಾಲೂರು ತಹಸೀಲ್ದಾರ್ ಡಾ. ಸುಧಾಪಾಯಸ್ ಅಭಿಪ್ರಾಯಪಟ್ಟರು. ತಾಲೂಕಿನಲ್ಲಿ ಪ್ರಥಮ ಬಾರಿಗೆ ಟೇಕಲ್ನಲ್ಲಿ ಕಂದಾಯ ಅದಾಲತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಅದಾಲತ್ ಕಾರ್ಯಕ್ರಮ ಜ.31ರವರೆಗೂ 10 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ನಡೆಯುತ್ತಿದ್ದು, ಸಂಬಂಧಪಟ್ಟ ಹಳ್ಳಿಗಳ ರೈತರು ಇದರ ಸದುಪಯೋಗಪಡೆಯಬೇಕೆಂದರು. ಬೆಳಿಗ್ಗೆ 11 ರಿಂದ 3 ಗಂಟೆಯವರೆಗೆ ಅರ್ಜಿಗಳು ಮುಗಿಯುವವರೆಗೂ ಕಾರ್ಯಕ್ರಮ ನಡೆಯುತ್ತದೆ. ಫೆಬ್ರವರಿ ಮೊದಲ ವಾರದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವಿಶೇಷವಾಗಿ ಲಕ್ಕೂರಿನಲ್ಲಿ ಕಂದಾಯ ಅದಾಲತ್ ನಡೆಯುತ್ತಿದ್ದು ಅದೇ ತಿಂಗಳ ಕೊನೆಯ ವಾರದಲ್ಲಿ ಮಾಸ್ತಿಯಲ್ಲಿ ನಡೆಸಲಾಗುತ್ತದೆ ಎಂದರು. ಕಾರ್ಯಕ್ರಮದ ಮೊದಲ ದಿನವೇ 150ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು 100ಕ್ಕೂ ಹೆಚ್ಚು ಅರ್ಜಿಗಳು ಸ್ಥಳದಲ್ಲೆ ವಿಲೇವಾರಿಯಾಗಿವೆ ಎಂದರು. ಇದಾದ ನಂತರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪೋಡಿ ಆಂದೋಲನ ನಡೆಯುತ್ತಿದ್ದು ಗ್ರಾಮಗಳಲ್ಲಿ ಪಿ ನಂಬರುಗಳನ್ನು ತೆಗೆಯಲು ವಿಶೇಷವಾಗಿ ಒಂದು ಗ್ರಾಮವನ್ನು ಆಯ್ದುಕೊಂಡು ಪಿ ನಂಬರ್ ಸಮಸ್ಯೆ ನಿವಾರಿಸಲಾಗುತ್ತದೆ ಎಂದರು.