ರೌಡಿ ಪಟ್ಟಿಯಿಂದ ತೆಗೆಯುವ ಪ್ರಯತ್ನ
ಕೆಜಿಎಫ್; ಸಮಾಜ ಘಾತಕ ಕೃತ್ಯಗಳಲ್ಲಿ ಭಾಗಿಯಾಗದೆ ಇರುವ ಆರೋಪಿಗಳ ಹೆಸರನ್ನು ರೌಡಿಶೀಟ್ ಪಟ್ಟಿಯಿಂದ ತೆಗೆದು ಹಾಕುವ ಪ್ರಯತ್ನ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರೋಹಿಣಿಕಟೋಚ್ ಸೆಫಟ್ ಹೇಳಿದರು.
ನಗರದ ಕಿಂಗ್ಜಾರ್ಜ್ಹಾಲ್ ಆವರಣದಲ್ಲಿ ಆಯೋಜಿಸಿದ್ದ ಅಟ್ರಾಸಿಟಿ ಸಭೆಯಲ್ಲಿ ಮಾತನಾಡಿ, ಯಾವುದೇ ರಾಜಕೀಯ ಒತ್ತಡಕ್ಕೆ ಮಣಿದು ಪೊಲೀಸರು ರೌಡಿಶೀಟ್ ತಯಾರು ಮಾಡುವುದಿಲ್ಲ. ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗುವ ಮತ್ತು ಅವರ ಮೇಲೆ ಮೊಕದ್ದಮೆ ಇರುವ ವ್ಯಕ್ತಿಗಳ ವಿರುದ್ಧ ಜಾತಿ, ಮತ, ಅಂತಸ್ತು ನೋಡದೆ ರೌಡಿಪಟ್ಟಿಯನ್ನು ತೆರೆಯಲಾಗುತ್ತದೆ ಇದು ಪೊಲೀಸ್ ಇಲಾಖೆಯ ಆಂತರಿಕ ಕ್ರಿಯೆಯಾಗಿದೆ ಎಂದರು.
ಠಾಣೆಗೆ ಬರುವ ದಲಿತರ ಜೊತೆ ಸುಮಧುರ ಬಾಂಧವ್ಯ ಇಟ್ಟುಕೊಳ್ಳಲು ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಯಾರೇ ದೂರು ನೀಡಿದರೂ ಅದನ್ನು ಸ್ವೀಕರಿಸಬೇಕು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ನಂತರ ಚಾರ್ಜ್ಶೀಟ್ ಹಾಕಲಾಗುವುದು ಎಂದರು. ಕೆಜಿಎಫ್ ನಗರದಲ್ಲಿ ಗಾಂಜಾ ಮತ್ತು ಅಫೀಮು ಮಾರಾಟ ಹೆಚ್ಚಾಗುತ್ತಿದ್ದರೂ ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ದಲಿತ ಮುಖಂಡ ಜಯಕುಮಾರ್ ಆರೋಪಿಸಿದರಲ್ಲದೆ ದಲಿತರ ಸಭೆಗೆ ಇತರೆ ಜನಾಂಗದವರನ್ನು ಕರೆಯಬಾರದು ಎಂದು ಒತ್ತಾಯಿಸಿದರು.
ಇದೇ ವೇಳೆ ಮಾತನಾಡಿದ ಕರ್ನಾಟಕ ದಲಿತ ಸಮಾಜ ಸೇನೆ ಸಂಸ್ಥಾಪಕ ಸೂಲಿಕುಂಟೆ ಆನಂದ್ ಬಂಗಾರಪೇಟೆ ತಾಲೂಕಿನಲ್ಲಿ ದಲಿತರಿಗೆ ರಕ್ಷಣೆ ದೊರೆಯುತ್ತಿಲ್ಲ ಎಂದು ಆರೋಪಿಸಿದರು.
ಸಭೆಯಲ್ಲಿ ವಿವಿಧ ದಲಿತ ಸಂಘಟನೆಗಳ ಅನ್ಬರಸನ್, ವೆಂಕಟೇಶ್, ರಮೇಶ್, ಸುಭಾಷ್, ಪಳನಿ, ಪೊಲೀಸ್ ಉಪರಕ್ಷಣಾಧಿಕಾರಿ ಎ.ಕೆ. ವಿವೇಕಾನಂದ, ವೃತ್ತನಿನೀಕ್ಷ ಲಕ್ಷ್ಮೀನಾರಾಯಣ ಹಾಗೂ ಇತರೆ ಪೊಲೀಸ್ ಅಧಿಕಾರಿಗಳು ಇದ್ದರು.