ವಿವಿಧ ಕಾಮಗಾರಿಗಳಿಗೆ ರು. 18 ಕೋಟಿ ಮಂಜೂರು
ಕೋಲಾರ/ಮುಳಬಾಗಿಲು: ಮುಳಬಾಗಿಲು ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ಸರ್ಕಾರ 18ಕೋಟಿ ರು.ಮಂಜೂರು ಮಾಡಿದ್ದು ಶುಕ್ರವಾರ ಕಾಮಗಾರಿಗಳಿಗೆ ಚಾಲನೆ ಸಿಗಲಿದೆ ಎಂದು ಶಾಸಕ ಕೊತ್ತೂರು ಜಿ. ಮಂಜುನಾಥ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕೆ.ಜಿ.ಎಫ್ ರಸ್ತೆಯ ಹೊನಗಾನಹಳ್ಳಿ ಮತ್ತು ಬೈರಕೂರು ಹೋಬಳಿಯ ಮರಹೇರು ಕೊತ್ತೂರು ಗ್ರಾಮದ ಬಳಿ ತಲಾ 8 ಕೋಟಿ ರು. ವೆಚ್ಚದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಹಾಗೂ ಪಟ್ಟಣದಲ್ಲಿ ಅಂಬೇಡ್ಕರ್ ಭವನ, ವಾಲ್ಮೀಕಿ ಭವನ, ದೇವರಾಜು ಅರಸು ಭವನಗಳನ್ನು ತಲಾ ಒಂದು ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ ಎಂದರು.
ಜ.24 ರಂದು ಮುಳಬಾಗಿಲು ಪಟ್ಟಣದ ನೇತಾಜಿ ಕ್ರೀಡಾಂಗಣದಲ್ಲಿ ಮಧ್ಯಾಹ್ನ 1.30ಕ್ಕೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ, ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್. ಆಂಜನೇಯ, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಸೇರಿದಂತೆ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಶಾಸಕರು, ವಿಧಾನ ಪರಿಷತ್ ಸದಸ್ಯರು ಭಾಗವಹಿಸಲಿದ್ದಾರೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ. ರಾಮಲಿಂಗಾರೆಡ್ಡಿ, ಬ್ಲಾಕ್ ಅಧ್ಯಕ್ಷ ಷಹಬಾಜ್ ಖಾನ್, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಎಂ.ಸಿ. ನೀಲಕಂಠೇಗೌಡ, ಕೇಂದ್ರ ಜವಳಿ ಮಂಡಳಿ ಸದಸ್ಯ ಆರ್.ಎಸ್. ಕೃಷ್ಣಯ್ಯಶೆಟ್ಟಿ, ಪುರಸಭಾ ಮಾಜಿ ಅಧ್ಯಕ್ಷ ಯಾಮಣ್ಣ, ಮಾಜಿ ಸದಸ್ಯ ವಾಜೀದ್ ಇದ್ದರು.