ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವಿವೇಚನೆಯಿಂದ ಸಂಚಾರಿ ನಿಯಮ ಪಾಲಿಸಿ

Rashmi Kasaragodu
Updated On : 24 Jan 2014, 2:23 am

ಕ.ಪ್ರ.ವಾರ್ತೆ    ಚಿಕ್ಕಬಳ್ಳಾಪುರ    ಜ. 23
ಅವಸರ, ನಿರ್ಲಕ್ಷ್ಯವನ್ನು ಬಿಟ್ಟು ಸದಾ ವಿವೇಚನೆಯಿಂದ ಸಂಚಾರಿ ನಿಯಮಗಳನ್ನು ಪಾಲಿಸುತ್ತ ವಾಹನ ಚಾಲನೆ ಮಾಡಿದಾಗ ಅಪಘಾತಗಳಿಗೆ ಕಡಿವಾಣ ಬೀಳುತ್ತದೆ. ಅಪಘಾತಗಳಿಗೆ ಜನರು ಹೆಚ್ಚು ಬಲಿಯಾಗುವುದೂ ತಪ್ಪುತ್ತದೆ ಎಂದು ವೃತ್ತ ನಿರೀಕ್ಷಕ ಬಾಲಾಜಿ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಬಿ.ಬಿ. ರಸ್ತೆಯಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಆಯೋಜಿಸಿದ್ದ 25 ನೇ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪ್ರತಿಯೊಬ್ಬರು ರಸ್ತೆ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ಹೆಚ್ಚು ಅಪಘಾತಗಳು ನಿರ್ಲಕ್ಷ್ಯ, ಬೇಜವಾಬ್ದಾರಿಯಿಂದಲೇ ಸಂಭವಿಸುತ್ತವಲ್ಲದೇ ಎಲ್ಲಾ ರೀತಿಯಲ್ಲೂ ಆರ್ಥಿಕ ನಷ್ಟ ಉಂಟಾಗುತ್ತದೆ ಎಂದರು.ಪ್ರಾಣ ಅಮೂಲ್ಯವಾದುದು. ಒಮ್ಮೆ ಹೋದ ಮೇಲೆ ಮತ್ತೆ ವಾಪಸ್ ಬರುವುದಿಲ್ಲ. ನಾವು ತೋರುವ ನಿರ್ಲಕ್ಷ್ಯದಿಂದ ಮತ್ತು ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದರಿಂದ ಅಪಘಾತಗಳು ಸಂಭವಿಸಿ ಅಮಾಯಕ ಜೀವಗಳು ಬಲಿಯಾಗುತ್ತವೆ ಎನ್ನುವುದನ್ನು ಪ್ರತಿಯೊಬ್ಬರು ಅರಿಯಬೇಕೆಂದ ಅವರು, ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದಾಗ ದಂಡವನ್ನು ಹಾಕುವುದು ಯಾರ ಮೇಲಿನ ಕೋಪಕ್ಕಲ್ಲ, ಬದಲಿಗೆ ಜನರು ಮತ್ತೆ ನಿಯಮಗಳನ್ನು ಪಾಲನೆ ಮಾಡಲಿ ಎಂಬ ಉದ್ದೇಶದಿಂದ ಎಂದು ತಿಳಿಸಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರೆಡ್ಡಪ್ಪ ಮಾತನಾಡಿ, ವಿದ್ಯಾರ್ಥಿಗಳು ಸಂಚಾರಿ ನಿಯಮಗಳ ಬಗ್ಗೆ ತಿಳಿದುಕೊಂಡು ಕಡ್ಡಾಯವಾಗಿ ಪಾಲನೆ ಮಾಡುವುದಲ್ಲದೇ ತಮ್ಮ ಪೋಷಕರಲ್ಲೂ ಅರಿವು ಮೂಡಿಸಬೇಕೆಂದರು.
ಸಂಚಾರಿ ಆರಕ್ಷಕ ಠಾಣೆಯ ಉಪ ನಿರೀಕ್ಷಕ ಮಂಜುನಾಥ್ ಮಾತನಾಡಿ, ಅಪಘಾತಗಳು ಹೆಚ್ಚಿಗೆ ಸಂಭವಿಸುವುದಕ್ಕೆ ಕಡಿವಾಣ ಹಾಕುವ ಸಲುವಾಗಿ ಜಾಗೃತಿ ಮೂಢಿಸಲು ಪ್ರತಿ ವರ್ಷ ರಸ್ತೆ ಸುರಕ್ಷತಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಅದೇ ರೀತಿ ಈ ಬಾರಿ ಜ.21 ರಿಂದ ಜ.27 ರವರೆಗೆ ರಸ್ತೆ ಸಂಚಾರಿ ನಿಯಮಗಳ ಬಗ್ಗೆ ತಿಳಿಸುವ ಕೆಲಸವನ್ನು ಮಾಡಲಾಗುತ್ತಿದೆ. ಇದಕ್ಕಾಗಿ ವಿದ್ಯಾರ್ಥಿಗಳಿಗೆ ಚಿತ್ರಕಲೆ, ಪ್ರಬಂಧ ಸ್ಪರ್ಧೆ, ಆಟೋ ಚಾಲಕರಿಗೆ ನೇತ್ರ ತಪಾಸಣೆ, ಬೀದಿ ನಾಟಕ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.  ಅಪಘಾತಗಳು ಹೆಚ್ಚಿಗೆ ಸಂಭವಿಸುತ್ತಿದ್ದು ಗಂಟೆಗೆ 15 ಕ್ಕೂ ಹೆಚ್ಚು ಜನ ಸಾಯುತ್ತಿದ್ದಾರೆ. ಅದರಲ್ಲೂ ಪ್ರಮುಖವಾಗಿ ಅಪಘಾತದಲ್ಲಿ ಮೂರನೇ ವ್ಯಕ್ತಿ ಬಲಿಯಾಗುತ್ತಿದ್ದು ನಿರ್ಲಕ್ಷ್ಯ, ಬೇಜವಾಬ್ದಾರಿಯಿಂದ ವಾಹನ ಚಾಲನೆ ಮತ್ತು ಸಂಚಾರಿ ನಿಯಮಗಳ ಉಲ್ಲಂಘನೆ ನಡೆಯುತ್ತಲೇ ಇರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಆರಕ್ಷಕ ಉಪ ನಿರೀಕ್ಷಕರಾದ ಶಿವಸ್ವಾಮಿ, ರವೀಂದ್ರ, ಪ್ರಭಾರಿ ಮುಖ್ಯ ಶಿಕ್ಷಕ ನಾರೇಪ್ಪರೆಡ್ಡಿ, ಹಿರಿಯ ಶಿಕ್ಷಕ ನಾಗೇಂದ್ರ ಪ್ರಸಾದ್, ದೈಹಿಕ ಶಿಕ್ಷಕ ಮಂಜುನಾಥ್ ಇದ್ದರು.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement