ಶಂಕುಸ್ಥಾಪನೆಗೆ ತಯಾರಿ, ಬಂದ್ಗೆ ಸಿದ್ಧತೆ
ಎನ್. ವೆಂಕಟೇಶ್
ಚಿಕ್ಕಬಳ್ಳಾಪುರ: ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮಕ್ಕಾಗಿ ಜಿಲ್ಲಾಡಳಿತ ಸಿದ್ಧತೆಗಳನ್ನು ಕೈಗೊಳ್ಳುತ್ತಿದ್ದರೆ, ಮತ್ತೊಂದೆಡೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಅದೇ ದಿನ ಕರೆ ನೀಡಿರುವ ಜಿಲ್ಲಾ ಬಂದ್ ಯಶಸ್ವಿಗೆ ಶ್ರಮಿಸುತ್ತಿದೆ.
ಯಾವುದೇ ವಿರೋಧ, ಅಡ್ಡಿ ಆತಂಕಗಳು ಎದುರಾದರೂ ಜ.31 ರಂದು ತಾಲೂಕಿನ ಮುದ್ದೇನಹಳ್ಳಿಯಲ್ಲಿ ಎತ್ತಿನ ಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ ಎಂದು ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಇದಕ್ಕೆ ಅನುಗುಣವಾಗಿ ಬೆಂಗಳೂರಿನಲ್ಲಿ ಎತ್ತಿನಹೊಳೆ ಯೋಜನೆ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮದ ಕುರಿತು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರು,ನೀರಾವರಿ ಸಚಿವರು, ಇತರೆ ಇಲಾಖೆ ಸಚಿವರು ಮತ್ತು ಹಿರಿಯ ಅಧಿಕಾರಿಗಳನ್ನೊಳಗೊಂಡ ಸಭೆ ನಡೆಸಿ ಕಾರ್ಯಕ್ರಮದ ಯಶಸ್ವಿಗೆ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೂ ಸೂಚನೆ ನೀಡಿದ್ದು, ಅಧಿಕಾರಿಗಳು ಸದ್ದಿಲ್ಲದೇ ತಮ್ಮ ಕೆಲಸದಲ್ಲಿ ನಿರತರಾಗಿದ್ದಾರೆ. ವೀರಪ್ಪ ಮೊಯ್ಲಿ ಅವರ ಮಾರ್ಗದರ್ಶನದಂತೆ ಕಾರ್ಯಕ್ರಮಕ್ಕಾಗಿ ನಿರ್ದಿಷ್ಟ ಸ್ಥಳ ಗುರುತಿಸುವಿಕೆ, ಶಂಕುಸ್ಥಾಪನೆ ಕಲ್ಲು, ಆಹ್ವಾನಪತ್ರಿಕೆ ತಯಾರಿಕೆ ಸೇರಿದಂತೆ ವಿವಿಧ ರೀತಿಯ ಕೆಲಸಗಳು ಚುರುಕಾಗಿಯೇ ನಡೆಯುತ್ತಿವೆ. ಅಲ್ಲದೇ ಕಾರ್ಯಕ್ರಮ ನಿಗದಿಯಾಗಿರುವುದರ ಬಗ್ಗೆ ಮಾಹಿತಿಯನ್ನು ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ತಿಳಿಸಿ ಆಹ್ವಾನಿಸಲಾಗುತ್ತಿದೆ ಎಂಬ ಮಾತು ಕೇಳಿ ಬಂದಿದೆ.
ಜ.31 ರಂದು ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುತ್ತಿರುವುದನ್ನು ವಿರೋಧಿಸಿ ಶಾಶ್ವತ ನೀರಾವರಿ ಹೋರಾಟಗಾರರು ಜಿಲ್ಲಾ ಬಂದ್ಗೆ ಕರೆ ನೀಡಿ ಕಾರ್ಯಕ್ರಮಕ್ಕೆ ಸೆಡ್ಡು ಹೊಡೆಯುತ್ತಿದ್ದಾರೆ. ಸಾರ್ವಜನಿಕರು ಬಂದ್ನ್ನು ಯಶಸ್ವಿಗೊಳಿಸುವಂತೆ ಕೋರಿ ಜಿಲ್ಲಾದ್ಯಂತ ಕರಪತ್ರ ಹಂಚುತ್ತಿದ್ದು ಚಿಂತಾಮಣಿ, ಶಿಡ್ಲಘಟ್ಟ ಮತ್ತು ಬಾಗೇಪಲ್ಲಿಯಲ್ಲಿ ನೀರಾವರಿ ಹೋರಾಟಗಾರರು ಸ್ಥಳೀಯ ಮುಖಂಡರನ್ನೊಳಗೊಂಡ ಸಭೆ ಕರೆದು ಚರ್ಚೆ ನಡೆಸಿದ್ದಾರೆ.
ಕಳೆದ ಜ.21 ರಂದು ನಗರದ ತಾಪಂ ಸಭಾಂಗಣದಲ್ಲಿ ಜಿಲ್ಲೆಯ ಶಾಸಕರು, ಅವಿಭಜಿತ ಕೋಲಾರ ಜಿಲ್ಲೆಯ ಮುಖಂಡರನ್ನೊಳಗೊಂಡಂತೆ ನಡೆದ ಸಭೆಯಲ್ಲಿ ತಾಲೂಕಿನ ಮುದ್ದೇನಹಳ್ಳಿಯಲ್ಲಿ ಆಯೋಜಿಸಿರುವ ಶಂಕುಸ್ಥಾಪನಾ ಕಾರ್ಯಕ್ರಮವನ್ನು ಮುಂದೂಡಬೇಕು. ಪರಿಸರ, ಅರಣ್ಯ ಇಲಾಖೆಯ ಅನುಮತಿಯಿಲ್ಲದೇ ಮತ್ತು ಟೆಂಡರ್ಗೆ ಅನುಮೋದನೆ ಪಡೆಯದೇ ತರಾತುರಿಯಲ್ಲಿ ಶಂಕುಸ್ಥಾಪನೆ ನೆರವೇರಿಸಲು ಬಿಡಬಾರದು. ಮೊಯ್ಲಿ ಅವರು ಕಾರ್ಯಕ್ರಮಕ್ಕೆ 1 ಲಕ್ಷ ಜನರನ್ನು ಬೇರೆ ಕಡೆಯಿಂದ ಕರೆದುಕೊಂಡು ಬಂದರೆ, ನಾವು 2 ಲಕ್ಷ ಜನ ಹೋಗಿ ಕಾರ್ಯಕ್ರಮ ತಡೆಯೋಣ ಎಂಬ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಏನೇ ಆಗಲಿ ಕಾರ್ಯಕ್ರಮವನ್ನು ವಿರೋಧಿಸಿ ಕರೆ ನೀಡಿರುವ ಜಿಲ್ಲಾ ಬಂದ್ ಯಶಸ್ವಿಯನ್ನಾಗಿಸಿ ಮೊಯ್ಲಿಗೆ ಟಾಂಗ್ ನೀಡಬೇಕೆಂಬ ಮನೋಭಾವನೆಯಲ್ಲಿ ಇದೀಗ ತಾಲೂಕು ಮತ್ತು ಗ್ರಾಮ ಮಟ್ಟದಲ್ಲೂ ಸಭೆ ನಡೆಸಲಾಗುತ್ತಿದೆ.
ತೀವ್ರ ಕುತೂಹಲ: ಶಾಶ್ವತ ನೀರಾವರಿ ಸೌಲಭ್ಯ ಒದಗಿಸಬೇಕೆಂದು ಹೋರಾಟಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈಗಲಾದರೂ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ ಎಂದು ಕೆಲವರು ಉಸಿರು ಬಿಡುತ್ತಿದ್ದಾರೆ.
ಇದರ ಜೊತೆಗೆ ಈವರೆಗೂ ಸುಮ್ಮನೆಯಿದ್ದ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಇದೀಗ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕೇವಲ ನಾಮಕಾವಸ್ತೆಗೆ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಚುನಾವಣೆಯಲ್ಲಿ ಗೆದ್ದ ನಂತರ ಕೈ ತೊಳೆದುಕೊಳ್ಳುವ ಹುನ್ನಾರದಲ್ಲಿದ್ದಾರೆ ಎಂದೆಲ್ಲಾ ವ್ಯಾಪಕವಾಗಿ ವಿರೋಧ ವ್ಯಕ್ತವಾಗುತ್ತಿದ್ದು, ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರುವ ಜ.31 ರಂದೇ ಬಂದ್ಗೆ ಕರೆ ನೀಡಿರುವುದು ತೀವ್ರ ಕುತೂಹಲ ಮೂಡಿಸಿದೆ.
ಚಿಂತಾಮಣಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ, ಶಿಡ್ಲಘಟ್ಟ ಶಾಸಕ ಎಂ. ರಾಜಣ್ಣ ಮತ್ತು ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಶಂಕುಸ್ಥಾಪನೆಗೆ ತರಾತುರಿಯಾಗಿ ದಿನ ನಿಗದಿಪಡಿಸಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು ಚಿಕ್ಕಬಳ್ಳಾಪುರ ಶಾಸಕ ಡಾ.ಕೆ. ಸುಧಾಕರ್ ಕಾರ್ಯಕ್ರಮವನ್ನು ಮುಂದೂಡುವಂತೆ ಸಿಎಂ ಮೇಲೆ ಒತ್ತಡ ಹೇರುವುದಾಗಿ ತಿಳಿಸಿದ್ದಾರೆ. ಗೌರಿಬಿದನೂರು ಶಾಸಕ ಎನ್.ಎಚ್. ಶಿವಶಂಕರರೆಡ್ಡಿ ನೀರಾವರಿ ಹೋರಾಟಗಾರ ಧ್ವನಿಯ ಪರವಾಗಿ ತುಟಿಕ್ ಪಿಟಿಕ್ ಎಂದಿಲ್ಲ.
ಒಂದು ವೇಳೆ ಜನರ ವಿರೋಧದ ನಡುವೆಯೂ ಕಾರ್ಯಕ್ರಮ ನಡೆದರೆ ಜಿಲ್ಲೆಯ ಶಾಸಕರು ಅದರಲ್ಲಿ ಭಾಗವಹಿಸುತ್ತಾರೆಯೇ ಇಲ್ಲವೇ ಕಾರ್ಯಕ್ರಮದಿಂದ ದೂರ ಉಳಿಯುತ್ತಾರೆಯೇ ಎಂಬ ಪ್ರಶ್ನೆ ಸಹಜವಾಗಿ ಚರ್ಚೆಗೆ ಕಾರಣವಾಗಿದೆ.
ಇದರಲ್ಲಿ ಜೆಡಿಎಸ್ ಶಾಸಕರಿಗಿಂತ ಆಡಳಿತ ಪಕ್ಷಕ್ಕೆ ಸೇರಿರುವ ಕಾಂಗ್ರೆಸ್ ಶಾಸಕರೇ ಪ್ರಮುಖವಾಗಿ ಇಕ್ಕಟ್ಟಿಗೆ ಸಿಲುಕಿದ್ದು ಕಾರ್ಯಕ್ರಮ ನಡೆಯುವ ದಿನ ಕರೆ ನೀಡಿರುವ ಬಂದ್ ನೇತೃತ್ವವನ್ನು ಜಿಲ್ಲೆಯ ಎಲ್ಲಾ ಶಾಸಕರು ವಹಿಸಬೇಕೆಂಬ ಒತ್ತಡವನ್ನು ನೀರಾವರಿ ಹೋರಾಟಗಾರರು ಹೇರಿರುವುದು ಮತ್ತಷ್ಟು ಕಗ್ಗಂಟಿಗೆ ಕಾರಣವಾಗಿದೆ. ಜೊತೆಗೆ ಮಹತ್ವದ ಕಾರ್ಯಕ್ರಮದ ಸಂದರ್ಭದಲ್ಲಿಯೇ ಜಿಲ್ಲೆಯ ಜನರು ಹೋರಾಟ ನಡೆಸುತ್ತಿರುವುದು ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದಲೂ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಿಮಿಸಿದೆ.
ಜಿಲ್ಲೆಯಲ್ಲಿ ಕಾರ್ಯಕ್ರಮದ ಪರ ಹೆಚ್ಚಿನ ವಿರೋಧ ವ್ಯಕ್ತವಾಗಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ವರ್ತನೆಗೆ ವ್ಯಾಪಕವಾಗಿ ಕಿಡಿಕಾರಲಾಗುತ್ತಿದೆ. ಅಧಿಕಾರಿಗಳನ್ನು ಬಿಟ್ಟರೆ ಬೇರೆ ಯಾವುದೇ ರೀತಿಯಲ್ಲಿ ಜನ ಬೆಂಬಲ ಕಾಣುತ್ತಿಲ್ಲ ಎನ್ನುವುದು ಸ್ಪಷ್ಟವಾಗಿದ್ದು, ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಉದ್ಭವವಾಗಿರುವ ಎತ್ತಿನಹೊಳೆ ಶಂಕುಸ್ಥಾಪನೆ ವಿವಾದದ ಕಾರಣದಿಂದ ಮೊಯ್ಲಿ ಮತ್ತು ಜನರ ವಿರುದ್ಧ ಜಿಲ್ಲೆಯಲ್ಲಿ ಸಮರ ನಡೆಯುತ್ತಿದೆ.