ಸರ್ಕಾರಿ ಶಾಲೆಗಳಿಗೆ ಉಳಿಗಾಲವಿಲ್ಲ
ಕ.ಪ್ರ.ವಾರ್ತೆ ಕೋಲಾರ್ಣ ಜ. 23
ಶಿಕ್ಷಣ ವ್ಯವಸ್ಥೆಯಲ್ಲಿ ಇರುವ ಲೋಪಗಳನ್ನು ಸರಿಪಡಿಸಿ ಇಲಾಖೆಯಲ್ಲಿ ಸುಧಾರಣೆ ತರಲು ಗಂಭೀರ ಚಿಂತನೆ ನಡೆಸದಿದ್ದರೆ ಮುಂದಿನ ಐದು ವರ್ಷಗಳಲ್ಲಿ ಸರ್ಕಾರಿ ಶಾಲೆಗಳು ಮುಚ್ಚಬೇಕಾಗುತ್ತದೆ ಎಂದು ವಿಧಾನಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಆತಂಕ ವ್ಯಕ್ತಪಡಿಸಿದರು.
ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಗುರುವಾರ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಆಶ್ರಯದಲ್ಲಿ ನಡೆದ ತಾಲೂಕು ಶೈಕ್ಷಣಿಕ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿ, ಸರ್ವಶಿಕ್ಷಣ ಅಭಿಯಾನದಡಿ ಜಾರಿಗೆ ತರಲಾಗಿರುವ 28 ಯೋಜನೆಗಳು ಉಪಯುಕ್ತವಾಗಿಲ್ಲ, ಶಿಕ್ಷಕರು ಪಾಠ ಮಾಡೋದು ಬಿಟ್ಟು ಉಳಿದೆಲ್ಲಾ ಕೆಲಸ ಮಾಡುವಂತಾಗಿದ್ದು ಸರ್ಕಾರ ಈ ಅಪ್ರಯೋಜಕ ಕಾರ್ಯಕ್ರಮಗಳನ್ನು ರದ್ದು ಮಾಡಬೇಕೆಂದರು.
ಶಿಕ್ಷಕನ ಮೂಲ ಉದ್ದೇಶವನ್ನೇ ಮರೆತಿದ್ದಾರೆ, ಶಿಕ್ಷಣ ನೀಡಲು ಈ ಯೋಜನೆಗಳು ಬಿಡುತ್ತಿಲ್ಲ, ಶಿಕ್ಷಕರಿಗೆ ಪಾಠ ಮಾಡುವುದಕ್ಕಿಂತ ಈ ಯೋಜನೆಗಳ ಫೈಲ್ ಸಿದ್ಧಪಡಿಸಿ ನೀಡುವುದೇ ನಿತ್ಯ ಕಾಯಕವಾಗಿದೆ ಎಂದು ಕಿಡಿಕಾರಿದರು.
ನಲಿ ಕಲಿ ಯೋಜನೆ ಅನುಷ್ಠಾನದಿಂದಾಗಿ ಪ್ರಾಥಮಿಕ ಹಂತದಲ್ಲಿ ಅಗತ್ಯವಾದ ಬೇರು ಮಟ್ಟದ ಮೂಲ ಶಿಕ್ಷಣ ಮಕ್ಕಳಿಗೆ ಸಿಗದಂತಾಗಿದೆ, ಈ ಮಕ್ಕಳು ಅಕ್ಷರಮಾಲೆ, ಮಗ್ಗಿ ಕಲಿಯದೇ ಪ್ರೌಢಶಾಲಾ ಹಂತಕ್ಕೆ ಹೋದರೆ ಅಲ್ಲಿನ ಶಿಕ್ಷಕರು ಏನು ಮಾಡಲು ಸಾಧ್ಯವೆಂದರು.
ನಲಿ-ಕಲಿ ಯೋಜನೆಯ ಸಾಧಕ ಬಾಧಕಗಳ ಕುರಿತು ಚಿಂತನೆ ನಡೆಸಬೇಕು, ಶಿಕ್ಷಕರನ್ನು ಪಾಠ ಮಾಡಲು ಬಿಡಿ ಎಂದು ಸರ್ಕಾರಕ್ಕೆ ಸಲಹೆ ನೀಡಿದರು. ಮಕ್ಕಳನ್ನು ಬರೀ ಎಂಜಿನಿಯರಿಂಗ್ ವೈದ್ಯಕೀಯ ಕೋರ್ಸುಗಳಿಗೆ ಕಳಿಸಲಾಗುತ್ತಿದೆ, ಇದರಿಂದ ಮೂಲವಿಜ್ಞಾನಕ್ಕೆ ಅಭ್ಯರ್ಥಿಗಳಿಲ್ಲದೇ ಮುಂದಿನ ದಿನಗಳಲ್ಲಿ ಪಾಠ ಮಾಡಲು ಶಿಕ್ಷಕರಿಲ್ಲದ ಪರಿಸ್ಥಿತಿ ನಿರ್ಮಾಣವಾದೀತು ಎಂದು ಎಚ್ಚರಿಸಿದರು.
ಸಂಶೋಧನಾ ಕ್ಷೇತ್ರದಲ್ಲಿ ಸಾವಿರಾರು ಕೋಟಿ ರು. ಕೊಳೆಯುತ್ತಿದೆ, ಅಲ್ಲಿ ಮೂಲ ವಿಜ್ಞಾನದ ವಿದ್ಯಾರ್ಥಿಗಳೇ ಇಲ್ಲವಾಗಿದೆ ಎಂದು ವಿಷಾದಿಸಿದರು. ರಾಜ್ಯದ 12,500 ಶಾಲೆಗಳ ಪೈಕಿ 8,500 ಶಾಲೆಗಳಲ್ಲಿ ಇಂಗ್ಲಿಷ್ ಶಿಕ್ಷಕರಿಲ್ಲ, ಇತರ ವಿಷಯಗಳ ಶಿಕ್ಷಕರೇ ಈ ಪಾಠ ನಿರ್ವಹಿಸುತ್ತಿದ್ದಾರೆ, ಕಳೆದ 15 ವರ್ಷಗಳಿಂದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಹುದ್ದೆಯನ್ನು ಭರ್ತಿ ಮಾಡಿಲ್ಲ, ಇದರಿಂದ ಗ್ರಾಮೀಣ ಪ್ರದೇಶ ಮಕ್ಕಳು ಜಾಗತೀಕ ಸ್ಪರ್ಧೆಯಲ್ಲಿ ತಮ್ಮ ಪ್ರತಿಭೆ ಅನಾವರಣಗೊಳಿಸಲಾಗುತ್ತಿಲ್ಲವೆಂದರು.
ಖಾಸಗಿ ಅನುದಾನಿತ ಶಿಕ್ಷಕರಿಗೆ ಕಾಲ್ಪನಿಕ ವೇತನ ಬಡ್ತಿ ನೀಡುವ ಕುರಿತು ಸುಪ್ರೀಂ ಕೋರ್ಟ್ ತೀರ್ಪಿಗೂ ಮನ್ನಣೆ ನೀಡದೇ ಸುಗ್ರೀವಾಜ್ಞೆ ತರಲು ಹೋಗಿ ಮುಖಕ್ಕೆ ಮಸಿ ಬಳಿದುಕೊಂಡು, ಇದೀಗ ಸದನದಲ್ಲಿ ಶಾಸನ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ನೀತಿ ಸರಿಯಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಶಿಕ್ಷಕರ ಸಮಸ್ಯೆಗಳಿಗೆ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸಬೇಕು, ಅವರ ಸಹಕಾರವಿಲ್ಲದಿದ್ದರೆ ಶೈಕ್ಷಣಿಕ ವ್ಯವಸ್ಥೆ ಸುಧಾರಿಸದು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಬೆಂಗಳೂರು ವಿವಿ ಮಾಜಿ ಕುಲಪತಿ ಮೈಲಾರಪ್ಪ, ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಕೆ.ಎನ್. ಮಂಜುನಾಥ್ ಮಾತನಾಡಿದರು. ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಮುರಳಿಮೋಹನ್ ವರದಿ ವಾಚಿಸಿದರೆ, ಶಿಕ್ಷಕರ ಸಂಘದ ಕಾರ್ಯದರ್ಶಿ ಮೋಹನಾಚಾರಿ ಸಮಸ್ಯೆಗಳನ್ನು ವಿವರಿಸಿದರು.
ವೇದಿಕೆಯಲ್ಲಿ ಶಿಕ್ಷಣಾಧಿಕಾರಿ ಜಯರಾಮರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಜಗದೀಶ್, ಖಾಸಗಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮುನಿಯಪ್ಪ, ಡಿವೈಪಿಸಿ ಸಿದ್ದಗಂಗಯ್ಯ, ಡಿ.ವಿ. ರಾಮಚಂದ್ರಪ್ಪ, ಮುಕುಂದ್, ಬಿ. ಗೋಪಾಲರೆಡ್ಡಿ, ನಾಗರಾಜ್, ಶ್ರೀನಿವಾಸಗೌಡ ಇದ್ದರು.
ಸರ್ವಶಿಕ್ಷಣ ಅಭಿಯಾನದಡಿ ಜಾರಿಗೆ ತರಲಾಗಿರುವ 28 ಯೋಜನೆಗಳು ಉಪಯುಕ್ತವಾಗಿಲ್ಲ, ಶಿಕ್ಷಕರು ಪಾಠ ಮಾಡೋದು ಬಿಟ್ಟು ಉಳಿದೆಲ್ಲಾ ಕೆಲಸ ಮಾಡುವಂತಾಗಿದ್ದು ಸರ್ಕಾರ ಈ ಅಪ್ರಯೋಜಕ ಕಾರ್ಯಕ್ರಮಗಳನ್ನು ರದ್ದು ಮಾಡಬೇ
ಟಿ ವೈ.ಎ. ನಾರಾಯಣಸ್ವಾಮಿ ವಿಧಾನಪರಿಷತ್ ಸದಸ್ಯ