ಸೆಮಿಸ್ಟರ್ ವಿರೋಧಿಸಿ ಪ್ರತಿಭಟನೆ
ಬಂಗಾರಪೇಟೆ: ಐಟಿಐ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ಪದ್ಧತಿ ಜಾರಿಗೆ ತಂದಿರುವ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ರಾಜ್ಯ ರೈತ ವಿದ್ಯಾರ್ಥಿ ಒಕ್ಕೂಟ ಹಾಗೂ ರಾಷ್ಟ್ರೀಯ ಯುವ ವಿದ್ಯಾರ್ಥಿ ಒಕ್ಕೂಟದವತಿಯಿಂದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಮಾಡಿದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ನಂತರ ತಹಸೀಲ್ದಾರ್ ಕಚೇರಿಗೆ ಬಂದು ಸೆಮಿಸ್ಟರ್ ಪದ್ಧತಿ ಹಾಗೂ ಕ್ಯಾರಿ ಓವರ್ ಜಾರಿಗೆ ತಂದಿರುವ ಕೇಂದ್ರ ಸರ್ಕಾರದ ನಿಲುವನ್ನು ಖಂಡಿಸಿದರು. ಸಂಘಟನೆಯ ರಾಜ್ಯ ಸಂಚಾಲಕ ಹೂವಳ್ಳಿ ನಾಗರಾಜ್, ಅಧ್ಯಕ್ಷ ಪ್ರಮೀನ್, ರಾಜ್, ಕಿರಣ್ಕುಮಾರ್,ಪ್ರದೀಪ್, ಮುರಳಿ, ಹುಣಸನಹಳ್ಳಿ ವೆಂಕಟೇಶ್ ಇದ್ದರು.
ಸುಭಾಷ್ ಚಂದ್ರಬೋಸ್ ಜಯಂತಿ
ಚಿಂತಾಮಣಿ: ನಗರದ ರಾಯಲ್ ಶಾಲೆಯಲ್ಲಿ ನೇತಾಜಿ ಸುಭಾಷ್ ಚಂದ್ರಬೋಸ್ ಅವರ 117 ನೇ ಜನ್ಮದಿನಾಚರಣೆಯಲ್ಲಿ ಪ್ರಾಂಶುಪಾಲ ಕೆ.ಆರ್. ಪ್ರೇಮಲತಾ ಮಾತನಾಡಿದರು. ದೇಶದ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಭದ್ರತೆಗೆ ಇಂದಿನ ಯುವಕರು ಕಂಕಣಬದ್ದರಾಗಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಕೆ. ರಾಮಕೃಷ್ಣ ಮಾತನಾಡಿ, ಮಕ್ಕಳಲ್ಲಿ ದೇಶಪ್ರೇಮವನ್ನುಂಟು ಮಾಡಲು ದೇಶಭಕ್ತರ ಜನ್ಮದಿನಾಚರಣೆ ಅವಶ್ಯಕ. ಇಂತಹ ವ್ಯಕ್ತಿಗಳ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಉಪನ್ಯಾಸ ಹಮ್ಮಿಕೊಳ್ಳುವುದು ಸೂಕ್ತ ಎಂದರು. ಚುಟುಕು ಕವಿ ರಾಯಲ್ ಶಿ.ಮ. ಮಂಜುನಾಥ್ ನೇತಾಜಿಯವರನ್ನು ಕುರಿತು ಮಕ್ಕಳಿಗೆ ಹಿತವಚನ ಹೇಳಿದರು.
ಅಕ್ರಮ ಮದ್ಯ ವಶ
ಚಿಂತಾಮಣಿ: ಮನೆಯೊಂದರಲ್ಲಿ ಇಟ್ಟಿದ್ದ ಲಕ್ಷಾಂತರ ರುಪಾಯಿ ಮೌಲ್ಯದ ಮದ್ಯವನ್ನು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಚಿಕ್ಕಬಳ್ಳಾಪುರ ಅಬಕಾರಿ ಉಪ ಆಯುಕ್ತ ಶ್ರೀನಿವಾಸಮೂರ್ತಿ ನೇತೃತ್ವದ ತಂಡ ವಶಪಡಿಸಿಕೊಂಡಿರುವ ಘಟನೆ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಯನುಮಲಪಾಡಿ ಗ್ರಾಮದಲ್ಲಿ ನಡೆದಿದೆ. ಅಬಕಾರಿ ಡಿವೈಎಸ್ಪಿ ರಮೇಶ್ ಕುಮಾರ್, ಅಬಕಾರಿ ನಿರೀಕ್ಷಕ ನಟರಾಜ್, ರಮೇಶ್ ಬಾಬು, ಸಬ್ಇನ್ಸ್ ಪೆಕ್ಟರ್ ಬಸವರಾಜ್ ಇದ್ದು ತನಿಖೆ ಮುಂದುವರೆಸಿದ್ದಾರೆ.
ಚೂಟಿ ಚಿಣ್ಣರ ಹಬ್ಬ
ಕೋಲಾರ: ಮಕ್ಕಳ ಉಜ್ವಲ ಭವಿಷ್ಯಕ್ಕೆ ಪೋಷಕರ ಸಹಕಾರ ಅಗತ್ಯ. ಅದೇ ರೀತಿ ಮಕ್ಕಳು ತಂದೆ-ತಾಯಿಯರ ಆಶಯದಂತೆ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕೆಂದು ಕಿರುತೆರೆ ನಟಿ ಹಾಗೂ ಭರತನಾಟ್ಯ ಕಲಾವಿದೆ ಮಯೂರಿ (ಅಶ್ವಿನಿ) ತಿಳಿಸಿದರು.
ನಗರದ ಟಿ. ಚನ್ನಯ್ಯ ರಂಗ ಮಂದಿರದಲ್ಲಿ ಇತ್ತೀಚೆಗೆ ಸ್ಮಾರ್ಟ್ ಕಿಡ್ಸ್ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಚೂಟಿ ಚಿಣ್ಣರ ಹಬ್ಬ ಹಾಗೂ ರಾಜ್ಯ ಮಟ್ಟದ ಪ್ರತಿಭಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು. ಸ್ಪರ್ಧೆಗಳಲ್ಲಿ 1,350 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದು ಇದರಲ್ಲಿ ಸುಮಾರು 300 ಕ್ಕೂ ಹೆಚ್ಚು ಮಂದಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ತುಮಕೂರಿನ ಶ್ಯಾಮಲ ಪ್ರಭಾಕರ್, ಗೋಕುಲ್ ಸಂಸ್ಥೆ ಕಾರ್ಯದರ್ಶಿ ವಿ. ನಾರಾಯಣಸ್ವಾಮಿ, ರವಿಚಂದ್ರನ್ ಇದ್ದರು. ಸಂಘಟಕಿ ಸ್ಮಾರ್ಟ್ಕಿಡ್ಸ್ ನಿರ್ದೇಶಕಿ ಸುಷ್ಮಾ ಸ್ವಾಗತಿಸಿ, ಅಭಿಲೇಖ ನಿರೂಪಿಸಿ, ಭವ್ಯ ವಂದಿಸಿದರು.