ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕ್ಷೇತ್ರಕ್ಕೆ ಸಚಿವರಿಂದ ಬಂಪರ್ ಕೊಡುಗೆ

Rashmi Kasaragodu
Updated On : 25 Jan 2014, 2:00 am

ಕೋಲಾರ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಸಮಾಜ ಕಲ್ಯಾಣ ಇಲಾಖೆಯ ಸಚಿವ ಎಚ್. ಆಂಜನೇಯ ಅವರು ಕೋಲಾರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಬಂಪರ್ ಕೊಡುಗೆ ಪ್ರಕಟಿಸುವ ಮೂಲಕ ಕ್ಷೇತ್ರದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ಸಂತೃಪ್ತಿಗೊಳಿಸಲು ಮುಂದಾಗಿದ್ದಾರೆ.
ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಮದನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭಕ್ಕೆ ಬರಾಬರಿ 6 ಗಂಟೆಗಳ ಕಾಲ ತಡವಾಗಿ ಆಗಮಿಸಿದ ಸಚಿವರು, ಸುದ್ಧಿಗಾಗರೊಂದಿಗೆ ಮಾತನಾಡಿ, ಕೋಲಾರ ಲೋಕಸಭಾ ಕ್ಷೇತ್ರಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ದಲಿತರಿದ್ದಾರೆ. ಇವರ ಆಶಯಗಳನ್ನು ಪೂರೈಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ 14 ವಸತಿ ಶಾಲೆಗಳ ನಿರ್ಮಾಣ ಹಾಗೂ ತಾಲೂಕು ಕೇಂದ್ರಗಳಲ್ಲಿ ಅಂಬೇಡ್ಕರ್ ಭವನ, ವಾಲ್ಮೀಕಿ ಭವನ, ಜಗಜೀವನರಾಂ ಭವನ ನಿರ್ಮಾಣಕ್ಕೆ ಒಟ್ಟು 134 ಕೋಟಿ ರು. ಮಂಜೂರು ಮಾಡಿರುವುದಾಗಿ ಪ್ರಕಟಿಸಿದರು. ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಪ್ರತಿಯೊಂದು ಹೋಬಳಿಗಳಲ್ಲಿ ವಸತಿ ಶಾಲೆಗಳು ಇರಬೇಕೆಂಬುದು ಸರ್ಕಾರದ ಬಯಕೆ. ಎಲ್ಲಿ ವಸತಿ ಶಾಲೆಗಳ ಅವಶ್ಯಕತೆ ಇದೆಯೋ ಅಲ್ಲಿ ಜರೂರಾಗಿ ವಸತಿ ಶಾಲೆ ತೆರೆಯಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಹೇಳಿದರು. ವಸತಿ ಶಾಲೆಗಳನ್ನು ತೆರೆಯಲು ತಲಾ 8 ಕೋಟಿ ರು. ನೀಡಲಾಗುತ್ತದೆ. ಪ್ರತಿಯೊಂದು ವಸತಿ ಶಾಲೆಗೆ ಕನಿಷ್ಠ 10 ಎಕರೆ ಭೂಮಿ ಬೇಕಾಗಿದ್ದು ಜಿಲ್ಲಾಧಿಕಾರಿಗಳು ಭೂಮಿ ನೀಡಲು ಒಪ್ಪಿದ್ದು, ಇಲಾಖೆ ಇಂಜನಿಯರ್ಗಳು ಕ್ರಿಯಾಯೋಜನೆ ರೂಪಿಸಿದ ತಕ್ಷಣ ಕಟ್ಟಡಗಳ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು ಎಂದರು.
ಕೋಲಾರ ಜಿಲ್ಲೆ ಹಿಂದುಳಿದ ಪ್ರದೇಶವಾಗಿದೆ. ಸತತ ಬರಗಾಲಕ್ಕೆ ತುತ್ತಾಗುತ್ತಿದೆ. ಬಡ ಮಕ್ಕಳಿಗೆ ಹಾಸ್ಟೆಲ್ಗಳಲ್ಲಿ ನೆಮ್ಮದಿ ಸಿಗಲಿ ಎಂಬ ಉದ್ದೇಶದಿಂದ ವಸತಿ ಶಾಲೆಗಳ ನಿರ್ಮಾಣ ಮಾಡಲಾಗುತ್ತಿದೆ. ಬಡ ಮಕ್ಕಳು ಕಾನ್ವೆಂಟ್ಗೆ ಹೋಗಿ  ಡೊನೇಷನ್ ನೀಡಿ ಶಿಕ್ಷಣ ಪಡೆಯುವುದು ಗಗನ ಕುಸುಮವಾಗಿರುವುದರಿಂದ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸುವುದು ಸರ್ಕಾರದ ಕರ್ತವ್ಯವಾಗಿದೆ ಎಂದರು.
ನಮ್ಮ ಸರ್ಕಾರದ ಪ್ರಥಮ ಬಜೆಟಟ್ನಲ್ಲಿ ಘೋಷಣೆ ಮಾಡಿರುವ ಯೋಜನೆಗಳಡಿ ರಾಜ್ಯದ ಎಲ್ಲ ಹೋಬಳಿ ಕೇಂದ್ರಗಳಲ್ಲಿ ವಸತಿ ಶಾಲೆ ತೆರೆದು 6ನೇ ತರಗತಿಯಿಂದ 10ನೇ ತರಗತಿಯವರೆಗೆ ಆಡಳಿತ ಭಾಷೆ ಕನ್ನಡದ ಜತೆಗೆ ಆಂಗ್ಲ ಭಾಷೆಯನ್ನೂ ಕಲಿಸಿ ನಗರ ಪ್ರದೇಶದ ಮಕ್ಕಳ ಜತೆ ಪೈಪೋಟಿ ನೀಡುವಂತಹ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ, ಶಾಸಕ ರಮೇಶ್ ಕುಮಾರ್, ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಜಿಪಂ ಸದಸ್ಯೆ ಮಂಗಮ್ಮ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲ್ಕುಮಾರ್, ಜಿಪಂ ಮಾಜಿ ಅಧ್ಯಕ್ಷ ವೆಂಕಟಮುನಿಯಪ್ಪ, ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಬಿಸ್ಸೇಗೌಡ, ಜಿಲ್ಲಾಧಿಕಾರಿ ಡಿ.ಕೆ. ರವಿ, ಜಿಪಂ ಸಿಇಓ ವಿನೋದ್ ಪ್ರಿಯ ಇದ್ದರು.




ನಮ್ಮವರಿಂದಲೇ ಷಡ್ಯಂತ್ರ; ಸಚಿವ
ಚಿಂತಾಮಣಿ: ವಿಧಾನಸೌಧದಲ್ಲಿ ಕಚೇರಿ ಕಟ್ಟಡ ಕೆಡದ ಬಗ್ಗೆ ಹಲವರು ರಾಜಕೀಯ ಷಡ್ಯಂತ್ರದಿಂದ ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್. ಆಂಜನೇಯ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಚೇರಿ ಕೊಠಡಿ ಸ್ವಲ್ಪ ವಿಶಾಲವಾಗಿಸಿದ್ದೆ ತಪ್ಪಾ ಎಂದು ಪ್ರಶ್ನಿಸಿದ ಸಚಿವರು, ಇದು ನಮ್ಮೊಳಗಿನವರೇ ಹಲವರು ರಾಜಕೀಯ ಷಡ್ಯಂತ್ರದಿಂದ ನನಗೆ ಮಸಿ ಬಳಿಯಲು ಪ್ರಯತ್ನಿಸಿದ್ದಾರೆಂದು ಅಸಮದಾನ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement