ದೇಶದ ಪ್ರಗತಿಗೆ ಕಾರ್ಮಿಕರ ಶ್ರಮ ಪ್ರಮುಖ
ಮಾಲೂರು: ದೇಶದ ಪ್ರಗತಿಗೆ ಕಾರ್ಮಿಕರ ಶ್ರಮ ಹೆಚ್ಚಿನದು ಎಂದು ಜಿಪಂ ಮಾಜಿ ಸದಸ್ಯ ಜಿ.ಇ. ರಾಮೇಗೌಡ ಹೇಳಿದರು. ಪಟ್ಟಣದ ಕುಂಬಾರಪೇಟೆ ಬಡಾವಣೆಯ ನೇತಾಜಿ ಕೂಲಿ ಕಾರ್ಮಿಕರ ಸಂಘದ ನೂತನ ಕಟ್ಟಡದ ಉದ್ಘಾಟನೆ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನಾಚರಣೆಯಲ್ಲಿ ಮಾತನಾಡಿದರು. ಪುರಸಭೆ ಸದಸ್ಯ ವೇಮನ, ಪುರಸಭೆ ಸದಸ್ಯ ಸಿ.ಪಿ.ನಾಗರಾಜ್, ಕರವೇ ಅಧ್ಯಕ್ಷ ರಾಮಕೃಷ್ಣ ಮಾತನಾಡಿದರು. ರಾಮೇಗೌಡ, ಗುಟ್ಟಸ್ವಾಮಿ, ವೇಮನ, ಸಿ.ಪಿ.ನಾಗರಾಜ್ರನ್ನು ಸಂಘ ಸನ್ಮಾನಿಸಲಾಯಿತು.
ಸಮರ್ಪಕ ನೀರು ವಿತರಣೆಗೆ ಆಗ್ರಹ
ಮಾಲೂರು: ಬಡಾವಣೆಯಲ್ಲಿ ಅಸಮರ್ಪಕ ನೀರನ ವಿತರಣೆ ಸರಿಪಡಿಸುವಂತೆ ಅಗ್ರಹಿಸಿ ಪಟ್ಟಣದ ರಾಜೀವ ನಗರ ಬಡಾವಣೆ ನಿವಾಸಿಗಳು ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆದಿದೆ. ಪಟ್ಟಣದ 23 ವಾರ್ಡ್ಗಳಲ್ಲಿ ರಾಜೀವ್ ನಗರದ ಒಂದನೇ ವಾರ್ಡ್ ನಿರ್ಲಕ್ಷ್ಯಕ್ಕೆ ಒಳಗಾಗಿದೆ.ಬಡಾವಣೆಯ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯವಿಲ್ಲದೇ ಜನತೆ ತೊಂದರೆಗೆ ಒಳಗಾಗಿದ್ದಾರೆ. ಉಳ್ಳವರಿಗೆ ಫೈಪು ಮೂಲಕ ನೀರು ವಿತರಿಸುತ್ತಿರುವ ಪುರಸಭೆ ಬಡವರನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದರು. ಪ್ರತಿಭಟನೆಕಾರರ ಮನವಿಗೆ ಸ್ಪಂದಿಸಿದ ವಾರ್ಡ್ ಸದಸ್ಯ ಜಾಕೀರ್ ಖಾನ್ ಹಾಗೂ ಮುರಳಿ ಪುರಸಭೆ ಅಧಿಕಾರಿಗಳೂಡನೆ ಬಡಾವಣೆಗೆ ತಕ್ಷಣ ಭೇಟಿ ನೀಡಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ ಮೇಲೆ ಪ್ರತಿಭಟನೆ ಕೈ ಬಿಟ್ಟರು. ಶ್ರೀನಿವಾಸ್, ನಾಗಮ್ಮ, ಪಾಪಮ್ಮ, ರಾಮಯ್ಯ, ಶಂಕರ್ಮುನಿಯಪ್ಪ, ಲಲಿತಮ್ಮ, ಶಾಂತಮ್ಮ, ಅನಿತಾ, ಅಮ್ರನ್, ಮಾದಮ್ಮ, ಮಂಜುಳ ಇದ್ದರು.
ಕಾಲ್ನಡಿಗೆ ಜಾಥಾ
ಕೋಲಾರ: ಡಾ. ಪರಮಶಿವಯ್ಯ ವರದಿಯನ್ನು ಜಾರಿಗೆ ತಂದು ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿ ಸೌಕರ್ಯ ಕಲ್ಪಿಸಲು ಒತ್ತಾಯಿಸಿ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲು ಕನ್ನಡ ಜಾಗೃತಿ ವೇದಿಕೆ ನಿರ್ಧರಿಸಿದೆ. ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ವೇದಿಕೆ ರಾಜ್ಯಾಧ್ಯಕ್ಷ ಮಂಜುನಾಥ್ ದೇವಾ ಮಾತನಾಡಿ, ಜಿಲ್ಲೆ ಜನತೆ ಕಾರು, ಬಂಗಲೆ ಕೇಳುತ್ತಿಲ್ಲ, ಕುಡಿಯಲು ಶುದ್ಧವಾದ ನೀರು ಮತ್ತು ವ್ಯವಸಾಯಕ್ಕೆ ನೀರು ಕೇಳುತ್ತಿದ್ದು ಸರ್ಕಾರ ಜನರ ಬೇಡಿಕೆ ಈಡೇರಿಸಬೇಕೆಂದರು. ಎತ್ತಿನಹೊಳೆ ಯೋಜನೆಗಿಂತ ಡಾ.ಪರಮಶಿವಯ್ಯ ರೂಪಿಸಿರುವ ಯೋಜನೆ ಸೂಕ್ತವಾಗಿದೆ, ಜಿಲ್ಲೆಯ ಜನಪ್ರತಿನಿಧಿಗಳು ಒಗ್ಗಟ್ಟಿನಂದ ಸರ್ಕಾರದ ಮೇಲೆ ಒತ್ತಡ ತಂದರೆ ಶಾಶ್ವತ ಪರಿಹಾರ ಸಿಗುತ್ತದೆ. ಇದಕ್ಕಾಗಿಯೇ ವೇದಿಕೆಯಿಂದ ಕಾಲ್ನಡಿಗೆ ಜಾಥಾ ನಡೆಸಿ ಸರ್ಕಾರ ಮತ್ತು ಜನಪ್ರತಿನಿಧಿಗಳನ್ನು ಎಚ್ಚರಿಸಲು ಉದ್ದೇಶಿಸಲಾಗಿದೆ ಎಂದರು.
ವಿದ್ಯಾರ್ಥಿಗಳಿಗೆ ಶಿಸ್ತು, ಸಂಯಮ ಅಗತ್ಯ
ಗೌರಿಬಿದನೂರು: ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದಕ್ಕಿಂತ ಪ್ರಮುಖವಾಗಿ ಶಿಸ್ತು, ಸಂಯಮ, ದೇಶಾಭಿಮಾನ ಬೆಳೆಸುವ ಅನಿವಾರ್ಯತೆ ಇದೆ ಎಂದು ತಾಲೂಕು ಮಾಜಿ ಸೈನಿಕರ ಸಂಘದ ಗೌರವಾಧ್ಯಕ್ಷ ಕ್ಯಾಪ್ಟನ್ ಸತೀಶ್ ತಿಳಿಸಿದರು. ಪಟ್ಟಣದ ಸಮತಾ ಪ್ರೌಢಶಾಲೆಯ ಸಭಾಂಗಣದಲ್ಲಿ ನೇತಾಜಿ ಯುವಕ ಸಂಘ, ವಿನಾಯಕ ಐಟಿಐ ಮತು ಸಾಧರ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ನೇತಾಜಿ ಸುಭಾಷ್ ಚಂದ್ರ ಭೋಸ್ ಅವರ 117ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತದ ಸ್ವಾತಂತ್ರ್ಯಕ್ಕೆ ಗಾಂಧೀಜಿಯವರ ಅಹಿಂಸಾ ಮಾರ್ಗದ ಪ್ರತಿಭಟನೆಯೊಂದೆ ಸಾಧ್ಯವಾಗಲಿಲ್ಲ ಬದಲಿಗೆ ಸುಭಾಷ್ ಚಂದ್ರ ಭೋಸ್ ಅಂತಹವರು ತಮ್ಮ ತೀವ್ರಗಾಮಿ ಹೋರಾಟದ ಮೂಲಕ ನಮ್ಮ ದೇಶದ ಸ್ವಾತಂತ್ರಕ್ಕೆ ಕಾರಣರಾಗಿದ್ದಾರೆ ಎಂದರು. ಸಾದರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಕೃಷ್ಣೇಗೌಡ ಮಾತನಾಡಿ, ಮಹಾನ್ ವ್ಯಕ್ತಿಗಳ ಆದರ್ಶಗಳ ಬಗ್ಗೆ ವಿದ್ಯಾರ್ಥಿಗಳು ಅರಿತು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಿದೆ ಎಂದರು. ನೇತಾಜಿ ಯುವಕ ಸಂಘದ ಅಧ್ಯಕ್ಷ ರವೀಂದ್ರನಾಥ್, ಕಾರ್ಯದರ್ಶಿ ಅಶೋಕ್, ಪ್ರಾಂಶುಪಾಲ ಮುರಳಿ ಮೋಹನ್ ರೆಡ್ಡಿ ಇದ್ದರು. ಇದೇ ಸಂದರ್ಭದಲ್ಲಿ ಶಿಕ್ಷಕ ಗಿರಿಧರ್ ಕೊಡುಗೆಯಾಗಿ ನೀಡಿದ ಪರಿಸರದ ಕ್ಯಾಲೆಂಡರ್ನ್ನು ಕ್ಯಾಪ್ಟನ್ ಸತೀಶ್ ಲೋಕಾರ್ಪಣೆ ಮಾಡಿದರು.