ನಾಳೆಯಿಂದ ಸಾಹಸ ಕ್ರೀಡೆಗಳ ಪ್ರದರ್ಶನ
ಚಿಕ್ಕಬಳ್ಳಾಪುರ: ಪ್ರಥಮ ಬಾರಿಗೆ ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ಜ.26 ರಿಂದ ಜ.30 ರವರೆಗೆ ವಿದೇಶದಲ್ಲಿ ಪ್ರಖ್ಯಾತಿ ಪಡೆದಿರುವ ಆಟಗಳು ಸೇರಿದಂತೆ ಆಕರ್ಷಕ ಸಾಹಸ ಕ್ರೀಡೆಗಳು ಮತ್ತು ಸಾಂಸ್ಕೃತಿಕ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುದ್ದೇನಹಳ್ಳಿ ಸತ್ಯಸಾಯಿ ವಿದ್ಯಾಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ನರಸಿಂಹಮೂರ್ತಿ, ಸತ್ಯಸಾಯಿ ವಾರ್ಷಿಕ ಕ್ರೀಡೆ ಮತ್ತು ಸಾಂಸ್ಕೃತಿಕ ಸಮ್ಮೇಳನವನ್ನು ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದು ಇದರಲ್ಲಿ ವಿಶ್ವ ವಿಖ್ಯಾತರಿಂದ ತರಬೇತು ಪಡೆದ ವಿದ್ಯಾರ್ಥಿಗಳು ಸಾಹಸ ಕ್ರೀಡೆಗಳ ಪ್ರದರ್ಶನ ನೀಡುವುದು ವಿಶೇಷವಾಗಿದೆ ಎಂದರು.
ಕ್ರೀಡೆಗಳ ಜೊತೆಗೆ ಮನಸೆಳೆಯುವ ನಾಟಕಗಳು, ಯಕ್ಷಗಾನ, ಭರತನಾಟ್ಯ ಮತ್ತು ಇತರೆ ನೃತ್ಯಗಳನ್ನೊಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತಿದಿನ ನಡೆಯಲಿದ್ದು ಮುದ್ದೇನಹಳ್ಳಿ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆ, ಸತ್ಯಸಾಯಿ ಸ್ವರಸ್ವತಿ ವಿದ್ಯಾ ಪ್ರತಿಷ್ಠಾನ ಮತ್ತು ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಆಶ್ರಯದಲ್ಲಿ ಜ.26 ರಂದು ಹಮ್ಮಿಕೊಂಡಿರುವ ಕಾರ್ಯಕ್ರಮದ ಉದ್ಘಾಟನೆ ಬೆಳಿಗ್ಗೆ 8 ಗಂಟೆಗೆ ನೆರವೇರುತ್ತದೆ. ಸುಮಾರು 2,500 ವಿದ್ಯಾರ್ಥಿಗಳು ಪಥ ಸಂಚಲನ ನಡೆಸಿ ಬಾಬಾ ಮೂರ್ತಿರವರನ್ನೊಳಗಂಡಂತೆ ಹಂಸ ಮೆರವಣಿಗೆಯನ್ನು ನಡೆಸಲಿದ್ದಾರೆ. ನಂತರ ಬಾಬಾರವರ ಸ್ಮರಣೆಯೊಂದಿಗೆ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಗುವುದು. ಇದರಲ್ಲಿ ಅಳಿಕೆ, ಮುದ್ದೇನಹಳ್ಳಿ, ಗುಲ್ಬರ್ಗಾ, ಮಂಡ್ಯ, ಜಯಪುರ ಸೇರಿದಂತೆ ಸತ್ಯಸಾಯಿಬಾಬಾರವರ ಒಟ್ಟು 7 ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಕೆಲವರು ಕಾರ್ಯಕ್ರಮದಲ್ಲಿ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಭಾಗವಹಿಸುತ್ತಿದ್ದಾರೆ ಎಂಬ ಸುಳ್ಳು ವದಂತಿಯನ್ನು ಹಬ್ಬಿಸಿದ್ದಾರೆ. ಆದರೆ, ಅವರು ಭಾಗವಹಿಸುವುದಿಲ್ಲ. ಆಸಕ್ತರು ಕಾರ್ಯಕ್ರಮಕ್ಕೆ ಆಗಮಿಸಬಹುದೆಂದರು. ಸತ್ಯ ಸಾಯಿ ಲೋಕಾಸೇವಾ ಟ್ರಸ್ಟ್ ಕಾರ್ಯದರ್ಶಿ ಬಿ. ನಾರಾಯಣ್ ರಾವ್, ಉಪನ್ಯಾಸಕ ರಾಜಶೇಖರ್ ಇದ್ದರು.
'ಮಹಿಳೆಯರಿಗೆ ಕಾನೂನಿನ ಸಾಕ್ಷರತೆ ಅಗತ್ಯ'
ಗುಡಿಬಂಡೆ: ಗ್ರಾಮೀಣ ಮಹಿಳೆಯರು ಕಾನೂನು ಸಾಕ್ಷರರಾಗಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯಗಳನ್ನು ಎದುರಿಸಲು ಮುಂದಾಗಬೇಕೆಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎ.ಜಿ. ಸುಧಾಕರ್ ಸಲಹೆ ನೀಡಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘದ ಸಹಯೋಗದಲ್ಲಿ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ 2005ರಡಿ ಆಯೋಜಿಸಿದ್ದ ಹೋಬಳಿ ಮಟ್ಟದ ಜಾಗೃತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ರಾಷ್ಟ್ರದಲ್ಲಿ ಪ್ರತಿ 5 ನಿಮಿಷಕ್ಕೆ ಒಂದು ಹೆಣ್ಣು ಮಗುವಿನ ಮರಣ ಸಂಭವಿಸುತ್ತದೆ, ಮಹಿಳೆಯರ ಮೇಲೆ ದೌರ್ಜನ್ಯ, ಮಹಿಳೆಯರ ಮಾರಾಟ, ಲೈಂಗಿಕ ಕಿರುಕುಳ, ಅತ್ಯಾಚಾರಗಳಂತಹ ಪೈಶಾಚಿಕ ಕೃತ್ಯಗಳು ನಾಗರಿಕ ಸಮಾಜದಲ್ಲಿ ಹೆಚ್ಚುತ್ತಿರುವುದು ನೋವಿನ ಸಂಗತಿಯಾಗಿದ್ದು, ಇಂತಹ ಅಮಾನವೀಯ ಕೃತ್ಯಗಳನ್ನು ತಡೆಯಲು ಸಂವಿಧಾನದಡಿ ಸಾಕಷ್ಟು ಕಾನೂನುಗಳನ್ನು ಮಹಿಳೆ ರಕ್ಷಣೆಗೆ ರಚಿಸಲಾಗಿದೆ ಎಂದರು.
ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘದ ಅಧ್ಯಕ್ಷ ವಕೀಲ ಜಿ.ವಿ. ವಿಶ್ವನಾಥ್, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಅಮರನಾರಾಯಣ ಗ್ರಾಮೀಣ ಮಹಿಳೆಯರಿಗೆ ಸಾಕಷ್ಟು ಕಾನೂನು ಜಾಗೃತಿ ಅಗತ್ಯವೆಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು. ಸಿಡಿಪಿಒ ಸಿದ್ದಲಿಂಗಪ್ಪ, ಉಪನ್ಯಾಸಕ ಸುಜಾತ, ಕೃಷ್ಣಪ್ಪ, ಪೊಲೀಸ್ ಇಲಾಖೆಯ ವೆಂಕಟರಮಣಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಎಂ.ಪಿ. ಪುಷ್ಪ, ಸಿ.ಜೆ. ಪದ್ಮಾವತಮ್ಮ ಇದ್ದರು.