ಪತಿಯಿಂದಲೇ ಪತ್ನಿಯ ಕೊಲೆ: ಆರೋಪಿ ಸೆರೆ
ಗುಡಿಬಂಡೆ: ತಾಲೂಕಿನ ಬೆಣ್ಣೆಪರ್ತಿ ಗ್ರಾಮದ ಅಂಜಿನಪ್ಪ (48) ತನ್ನ ಪತ್ನಿ ಚನ್ನಕೃಷ್ಣಮ್ಮ (35) ಎಂಬ ಮಹಿಳೆಯನ್ನು ತನ್ನ ಮಾತು ಕೇಳಿಲ್ಲವೆಂಬ ಕಾರಣದಿಂದ ಆಕೆಯನ್ನು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ದುರ್ದೈವಿ ಚನ್ನಕೃಷ್ಣಮ್ಮ ಅಂಜಿನಪ್ಪನನ್ನು ಮದುವೆಯಾಗಿ ಸುಮಾರು 20 ವರ್ಷಗಳಾಗಿದ್ದು, ಈ ಮುಂಚೆ ಆತನಿಗೆ 2 ಮದುವೆಯಾಗಿತ್ತು ಎಂದು ಮೂಲಗಳಿಂದ ತಿಳಿದುಬಂದಿದೆ. ಮೃತಳಿಗೆ ವರಲಕ್ಷ್ಮಿ (9) ಮತ್ತು ನವ್ಯ (2) ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆರೋಪಿ ಅಂಜಿನಪ್ಪ 10 ವರ್ಷಗಳ ಹಿಂದೆ ಚನ್ನಕೃಷ್ಣಮ್ಮನ ಮೇಲೆ ಹಲ್ಲೆ ಮಾಡಿ ಆಕೆಯ ಕೈ ಮತ್ತು ಕಾಲಿಗೆ ಹೊಡೆದು ಅಂಗವಿಕಲೆಯನ್ನಾಗಿ ಮಾಡಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ 5ವರ್ಷ ಸೆರೆಮನೆ ವಾಸ ಅನುಭವಿಸಲಾಗಿತ್ತು ಎಂದು ಸಹ ತಿಳಿದುಬಂದಿದೆ.
ಘಟನೆ ವಿವರ: ಶುಕ್ರವಾರ ಬೆಳಿಗ್ಗೆ 9 ರ ಸಮಯದಲ್ಲಿ ಅಂಜಿನಪ್ಪ ತನ್ನ ಪತ್ನಿಯನ್ನು ದೊಡ್ಡಬಳ್ಳಾಪುರಕ್ಕೆ ಹೋಗೋಣ ಬಾ ಎಂದು ಅಂಜಿನಪ್ಪ ಮೃತಳನ್ನು ಕೇಳಿದ್ದಾನೆ. ಇದಕ್ಕೆ ಪತ್ನಿ ಚನ್ನಕೃಷ್ಣಮ್ಮ ಮತ್ತು ಆಕೆಯ ಅತ್ತೆ ಮಾವ ಸಹಾ ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನು ಸಹಿಸದ ಅಂಜಿನಪ್ಪ ಏಕಾಏಕಿ ಮಚ್ಚು ತೆಗೆದುಕೊಂಡು ಚನ್ನಕೃಷ್ಣಮ್ಮನ ಕತ್ತಿನ ಹಿಂಭಾಗಕ್ಕೆ ಹೊಡೆದ ಪರಿಣಾಮ ಆಕೆ ಸ್ಥಳದಲ್ಲೇ ಮೃಪಟ್ಟಿದ್ದಾಳೆ. ಇದನ್ನು ತಡೆಯಲು ಹೋದ ಅಂಜಿನಪ್ಪನ ಚಿಕ್ಕಮ್ಮನ ಮೇಲೂ ಹಲ್ಲೆ ನಡೆಸಿದ್ದಾನೆ. ಓಡಿ ಹೋಗಲು ಪ್ರಯತ್ನಿಸಿದ್ದ, ನಂತರ ಆತನನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಆರಕ್ಷಕ ವೃತ್ತ ನಿರೀಕ್ಷಕ ಶಿವಕುಮಾರ್, ಪಿಎಸ್ಐ ನರಸಿಂಹಮೂರ್ತಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಆರೋಪಿಯನ್ನು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಹಣಕಾಸಿನ ವಿಚಾರಕ್ಕೆ ಗಲಾಟೆ: ವಿದ್ಯಾರ್ಥಿಗೆ ಗಾಯ
ಚಿಕ್ಕಬಳ್ಳಾಪುರ: ಹಣಕಾಸಿನ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಗೆ ಮೂತ್ರ ವಿಸರ್ಜನೆ ಜಾಗಕ್ಕೆ ಒದ್ದು ತೀವ್ರ ಗಾಯಗೊಳಿಸಿರುವ ಘಟನೆ ತಾಲೂಕಿನ ಆವಲಗುರ್ಕಿಯಲ್ಲಿ ನಡೆದಿದೆ.
ಆವಲಗುರ್ಕಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 6 ನೇ ತರಗತಿ ಓದುತ್ತಿರುವ ಶ್ರೀನಿವಾಸ್ ಗಾಯಗೊಂಡ ವಿದ್ಯಾರ್ಥಿ. ಶಾಲೆಯಲ್ಲಿ ತನ್ನ ಗೆಳೆಯನ ಹಣ ಕಳವಾಗಿರುವ ಬಗ್ಗೆ ಶ್ರೀನಿವಾಸ್ ಅದೇ ಶಾಲೆಯ ವಿದ್ಯಾರ್ಥಿ ದೇವರಾಜ್ ನನ್ನು ಪ್ರಶ್ನಿಸಿದ್ದಾನೆ. ಹೀಗೆ ಶಾಲೆಯಿಂದ ಹೊರಗೆ ಬರುವಾಗ ಗಲಾಟೆ ಮಾಡಿಕೊಂಡ ಇಬ್ಬರು ತಮ್ಮ ಊರುಗಳಿಗೆ ವಾಪಸ್ಸಾಗುವ ಸಂದರ್ಭದಲ್ಲಿ ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ. ಆಗ ದೇವರಾಜ್ ತನ್ನ ಕಾಲಿನಲ್ಲಿ ತೊಡೆಯ ಭಾಗಕ್ಕೆ ಒದ್ದಿದ್ದರಿಂದ ಶ್ರೀನಿವಾಸ್ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದು ಹೋಗಿದ್ದಾನೆ. ತಕ್ಷಣ ಸುತ್ತಮುತ್ತಲಿನ ಜನ ವಾಹನದಲ್ಲಿ ಶ್ರೀನಿವಾಸ್ ನನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ದಾಖಲಿಸಿದ್ದಾರೆ. ಪ್ರಸ್ತುತ ಸ್ವಲ್ಪ ದೂರ ಸಹ ನಡೆಯಲು ಹೆಣಗಾಡುತ್ತಿರುವ ಶ್ರೀನಿವಾಸ್ ತೀವ್ರ ನೋವಿನಿಂದ ನರಳುತ್ತಿದ್ದಾನೆ. ಈ ಘಟನೆ ನಡೆದು ಒಂದು ದಿನವಾದರೂ ಸಹ ಸಂಬಂಧಪಟ್ಟ ಶಿಕ್ಷಕರು ಯಾರೂ ಆಸ್ಪತ್ರೆಗೆ ಭೇಟಿ ಕೊಟ್ಟು ಮಾಹಿತಿಯನ್ನು ಪಡೆದುಕೊಂಡಿಲ್ಲ. ಗಾಯಾಳುವಿನ ತಂದೆ ಗಂಗಾಧರಪ್ಪ ತಮ್ಮ ಮಗನಿಗೆ ಚಿಕಿತ್ಸೆ ಕೊಡಿಸಲು ಪರದಾಡುತ್ತಿದ್ದಾರೆ. ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.