ಶಾಶ್ವತ ನೀರಾವರಿ ಜಾರಿಗೆ ಹೋರಾಟ ಅಗತ್ಯ
ಬಾಗೇಪಲ್ಲಿ: ರಾಜ್ಯದ 9 ಬರಡು ಜಿಲ್ಲೆಗಳ ಜನತೆಯನ್ನು ಬಡೆದೆಬ್ಬಿಸುವ ಮೂಲಕ ಶಾಶ್ವತ ನೀರಾವರಿ ಯೋಜನೆ ಜಾರಿಗಾಗಿ ಸರ್ಕಾರಗಳ ಕಣ್ಣು ತೆರೆಸುವ ಕೆಲಸಕ್ಕೆ ಪ್ರತಿಯೊಬ್ಬರೂ ಮುಂದಾಗಬೇಕೆಂದು ಅವಿಭಜಿತ ಕೋಲಾರ ಜಿಲ್ಲೆಯ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ, ರಾಜ್ಯ ಸಿಪಿಎಂ ಕಾರ್ಯದರ್ಶಿ ಜಿ.ವಿ. ಶ್ರೀರಾಮರೆಡ್ಡಿ ಕರೆ ನೀಡಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಶಾಶ್ವತ ನೀರಾವರಿ ಹೋರಾಟ ಸಮಿತಿ ಪದಾಧಿಕಾರಿಗಳ ಆಯ್ಕೆ ಹಾಗೂ ಶಾಶ್ವತ ನೀರಾವರಿ ಯೋಜನೆ ಜಾರಿಗಾಗಿ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚೆ ಮಾಡುವ ಸಂಬಂಧ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಶಾಶ್ವತ ನೀರಾವರಿ ಯೋಜನೆಯನ್ನು ಬಹುತೇಕ ರಾಜಕಾರಣಿಗಳು ಚುನಾವಣೆಗೆ ಮಾತ್ರ ಸೀಮಿತಗೊಳಿಸಿದ್ದಾರೆಂದು ಕಿಡಿಕಾರಿದರು.
ರಾಜ್ಯದ 9 ಬರಡು ಜಿಲ್ಲೆಗಳ ಜನತೆಗೆ ಕೃಷಿ ಮತ್ತು ಕುಡಿಯುವ ನೀರಿಗಾಗಿ ಶಾಶ್ವತ ಪರಿಹಾರ ಸಿಗಬೇಕೆಂದು ನಡೆಸುತ್ತಿರುವ ಹೋರಾಟಕ್ಕೆ ಯಾವುದೇ ಕಾರಣಕ್ಕೂ ರಾಜಕೀಯ ಬೆರಸದೆ ಪಕ್ಷಾತೀತವಾಗಿ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವ ಎಲ್ಲಾ 9 ಜಿಲ್ಲೆಗಳ ಜನರು ಒಂದೇ ವೇದಿಕೆಯಲ್ಲಿ ಹೋರಾಟ ಮಾಡಿದಾಗ ಮಾತ್ರ ಪರಿಹಾರ ಸಿಗುತ್ತದೆ ಎಂದರು.
ಶಾಶ್ವತ ನೀರಾವರಿ ಹೋರಾಟಕ್ಕೆ ಹಲವು ಮುಖಂಡರು ರಾಜಕೀಯ ಬೆರೆಸಿ ತಪ್ಪುದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಡಾ.ಜಿ.ಎಸ್. ಪರಮಶಿವಯ್ಯ ವರದಿ ಜಾರಿಯಾಗಬೇಕಾದರೆ ಜನಾಂದೋಲನ ಹೋರಾಟ ಆಗಬೇಕೇ ಹೊರತು ಕುಡಿಯುವ ನೀರಿನ ಹೆಸರಿನಲ್ಲಿ ರಾಜಕೀಯ ಮಾಡುವ ಮುಖಂಡರ ಹೋರಾಟವಾಗಬಾರದು ಎಂದರು.
ಎತ್ತಿನ ಹೊಳೆ ಯೋಜನೆಯನ್ನು ಮುಂದಿಟ್ಟುಕೊಂಡು ಪರಮಶಿವಯ್ಯ ಆಧಾರಿತ ವರದಿಯನ್ನು ದಿಕ್ಕು ತಪ್ಪಿಸುವ ನಿಟ್ಟನಲ್ಲಿ ಕೇಂದ್ರ ಸಚಿವ ವೀರಪ್ಪ ಮೊಯಿಲಿ ಮತ್ತು ಮಾಜಿ ಮುಖ್ಯ ಮಂತ್ರಿ ಡಿ.ವಿ. ಸದಾನಂದಗೌಡ ಪಿತೂರಿ ನಡೆಸುವ ಮೂಲಕ ಈ ಭಾಗದ ಜನತೆಗೆ ಮೋಸ ಮಾಡುತ್ತಿದ್ದಾರೆ. ಎತ್ತಿನಹೊಳೆ ಯೋಜನೆಗೆ ಈ ತಿಂಗಳಲ್ಲೇ ಈ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗುವುದು ಎಂದು ಹೇಳಿಕೆ ಕೊಟ್ಟಿರುವುದು ಹಾಸ್ಯಾಸ್ಪದ. ಈ ಯೋಜನೆ ಜಾರಿಯಾಗಬೇಕಾದರೆ ಅನೇಕ ಇಲಾಖೆಗಳ ಅನುಮತಿ ಬೇಕಾಗಿರುತ್ತದೆ. ಆದರೆ ಯಾವುದೇ ಇಲಾಖೆಗಳ ಅನುಮತಿ ಇಲ್ಲದೆ ಯಾವ ರೀತಿ ಗುದ್ದಲಿ ಪೂಜೆ ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಎತ್ತಿನಹೊಳೆ ಯೋಜನೆ ಎಂಬುದು ಪರಮಶಿವಯ್ಯ ವರದಿಯಲ್ಲಿ ಒಂದು ಭಾಗ ವೀರಪ್ಪಮೊಯಿಲಿ ಮತ್ತು ಸದಾನಂದಗೌಡ ಅವರು ಸ್ಥಳೀಯರನ್ನು ಎದುರು ಹಾಕಿಕೊಳ್ಳದೆ ಪರಮಶಿವಯ್ಯ ವರದಿಯ ಬದಲಿಗೆ ಎತ್ತಿನಹೊಳೆ ಯೋಜನೆಯ ಜಪ ಮಾಡುವ ಮೂಲಕ ತಮ್ಮ ಬೇಳೆ ಬೇಯಿಸಿಕೊಂಡು ಈ ಭಾಗದ ಜನತೆ ದಿಕ್ಕ ತಪ್ಪಿಸುವ ಪ್ರಯತ್ಮ ಮಾಡುತ್ತಿದ್ದಾರೆ ಎಂದರು.
ಜ.28 ರಂದು 9 ಜಿಲ್ಲೆಗಳು ಸೇರಿದಂತೆ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಶಾಶ್ವತ ನೀರಾವರಿ ಸೌಲಭ್ಯಕ್ಕೆ ಒತ್ತಾಯಿಸಿ ಹೋರಾಟ ನಡೆಸಲಾಗುವುದು ಎಂದರು. ಜಿಪಂ ಸದಸ್ಯೆ ಬಿ. ಸಾವಿತ್ರಮ್ಮ ಮುನಿಶಾಮಿ, ತಾಪಂ ಅಧ್ಯಕ್ಷೆ ಮುನಿರತ್ನಮ್ಮ, ಉಪಾಧ್ಯಕ್ಷ ಎಂ. ಶಂಕರರೆಡ್ಡಿ, ಜಿಲ್ಲಾ ಸಿಪಿಎಂ ಕಾರ್ಯದರ್ಶಿ ಎಂ.ಪಿ. ಮುನಿವೆಂಕಟಪ್ಪ, ಜೆಸಿಬಿ ಮಂಜುನಾಥರೆಡ್ಡಿ, ಶಾಶ್ವತ ನೀರಾವರಿ ಹೋರಾಟ ಸಮಿತಿ ಕಾರ್ಯದರ್ಶಿ ಎನ್.ಎಸ್. ಚಲಪತಿ, ಡಾ.ಅ ನಿಲ್ ಕುಮಾರ್, ವಕೀಲರ ಸಂಘದ ಅಧ್ಯಕ್ಷ ಎ. ನಂಜುಂಡಪ್ಪ, ಪಾಚೇನಹಳ್ಳಿ ನಾಗರಾಜರೆಡ್ಡಿ ಇದ್ದರು.