ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಎಸ್ಎಫ್ಐ ಮಕ್ಕಳ ಹಬ್ಬಕ್ಕೆ ನೆರವು ನೀಡಿ

Rashmi Kasaragodu
Updated On : 26 Jan 2014, 2:32 am

ಕೋಲಾರ: ವಿದ್ಯಾರ್ಥಿಗಳ ಹಿತ ಕಾಪಾಡಲು ಅನೇಕ ವರ್ಷಗಳಿಂದ ನಿಸ್ವಾರ್ಥತೆಯಿಂದ ಹೋರಾಡುತ್ತಿರುವ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್ಎಫ್ಐ)ನಿಂದ ಕೋಲಾರದ ಟಿ. ಚನ್ನಯ್ಯ ರಂಗ ಮಂದಿರದಲ್ಲಿ ಫೆ.14 ರಿಂದ 17ರವರೆಗೆ ನಾಲ್ಕು ದಿನಗಳ ರಾಜ್ಯ ಮಟ್ಟದ ಸಮ್ಮೇಳನ ಆಯೋಜಿಸಿದ್ದು, ಜಿಲ್ಲೆಯ ಫೋಷಕರು ಮಕ್ಕಳ ಹಬ್ಬದ ರೀತಿಯಲ್ಲಿ ನಡೆಯುವ ಸಮ್ಮೇಳನಕ್ಕೆ ನೆರವು ನೀಡಬೇಕೆಂದು ಸಮ್ಮೇಳನದ ಸ್ವಾಗತ ಸಮಿತಿ ಪೋಷಕರಲ್ಲಿ ಒಬ್ಬರಾದ ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ವಿ. ಗೀತಾ ಮನವಿ ಮಾಡಿದರು.
ಸಮ್ಮೇಳನದ ಸಿದ್ಧತೆಗಳ ಬಗ್ಗೆ ತಿಳಿಸಲು ಬುಧವಾರ ನಗರದ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಎಸ್ಎಫ್ಐ ವಿದ್ಯಾರ್ಥಿಗಳ ಸಲುವಾಗಿ ಅನೇಕ ಹೋರಾಟ, ಸಭೆ, ಸಮಾವೇಶಗಳನ್ನು ಕಾಲ ಕಾಲಕ್ಕೆ ನಡೆಸುವ ಮೂಲಕ ಸರ್ಕಾರದಿಂದ ಸಿಗಬೇಕಾದ ಸವಲತ್ತುಗಳನ್ನು ದೊರಕಿಸಿಕೊಟ್ಟಿದೆ, ವಿದ್ಯಾರ್ಥಿ ಸಂಘಟನೆಯ ಹೋರಾಟದ ಫಲದಿಂದ ಖಾಸಗಿ ಬಸ್ಸುಗಳಲ್ಲಿ ಎಸ್ಸಿ ಸಮುದಾಯದ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ದೊರೆತಿದೆ, ಅನೇಕ ವರ್ಷಗಳ ಹಿಂದೆಯೇ 8 ದಿನಗಳ ಪ್ರತಿಭಟನೆಯಿಂದಾಗಿ ಶಾಲಾ ಮಕ್ಕಳಿಗೆ ಬಿಸಿಯೂಟದ ವ್ಯವಸ್ಥೆ ಆಗಿದೆ, ಜೆ.ಎಚ್. ಪಟೇಲ್ ಮುಖ್ಯಮಂತ್ರಿ ಆಗಿದ್ದಾಗ 97 ಮಂದಿ ಅರೆಕಾಲಿಕ ಉಪನ್ಯಾಸಕರ ಸೇವೆ ಕಾಯಂ ಮಾಡಲು ನಡೆಸಿದ ಹೋರಾಟಕ್ಕೆ ಸರ್ಕಾರ ಸ್ಪಂದಿಸಿತು.
ವಿದ್ಯಾರ್ಥಿಗಳ ಸಮಸ್ಯೆ ನಿವಾರಿಸಲು ನಿರಂತರ ಪ್ರಯತ್ನವಾಗಿ ಸಂಘಟನೆಯಿಂದ ಸಮ್ಮೇಳನಗಳನ್ನು ನಡೆಸುತ್ತಿದ್ದು ಕೋಲಾರದ ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಸಹಾಯ ಮಾಡಬೇಕು, ವಿವಿಧ ಕಡೆಗಳಿಂದ ಬರಲಿರುವ ಮಕ್ಕಳಿಗೆ ಊಟ ಹಾಕಲು ನೆರವು ನೀಡಬೇಕೆಂದರು.
ಇದಕ್ಕೆ ಮುನ್ನ ಮಾತನಾಡಿದ ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ಹುಳಿ ರಮೇಶ್ ಮಾತನಾಡಿ, ಶಿಕ್ಷಣದ ವ್ಯಾಪಾರಿಕರಣ ವಿರುದ್ಧ ಹೋರಾಡಲು ಸಮ್ಮೇಳನ ನಡೆಸಲಾಗುತ್ತಿದ್ದು ಸುಮಾರು 10 ಸಾವಿರ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆಂದರು.
ಸರ್ಕಾರದ ತಪ್ಪು ನೀತಿಗಳಿಂದಾಗಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುವಂತಾಗಿದೆ, ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಪ್ರಮಾಣ ಶೇ.14 ಇದ್ದರೆ, ದೇಶದಲ್ಲಿ ಶೇ.12 ಇದ್ದು ಬಡ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕಾಗಿರುವುದರಿಂದ ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ ಎಸ್ಎಫ್ಐ ವಿದ್ಯಾರ್ಥಿಗಳ ಸಂಘಟನೆಗಾಗಿ ಮುಂದಾಗಿದೆ ಎಂದರು.
ಫೆ.14 ರಂದು ಸಮ್ಮೇಳನದಲ್ಲಿ ತ್ರಿಪುರ ರಾಜ್ಯದ ಶಿಕ್ಷಣ ಸಚಿವ ತಪನ್ ಚಕ್ರವರ್ತಿ ಹಾಗೂ ಮೈಸೂರು ರಂಗಾಯಣದ ಜನ್ನಿ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. 2ನೇ ದಿನದ ಪ್ರತಿನಿಧಿಗಳ ಅಧಿವೇಶನಕ್ಕೆ ಭಾರತ ರತ್ನ ಪುರಸ್ಕೃತರಾದ ಖ್ಯಾತ ವಿಜ್ಞಾನಿ ಸಿ.ಎನ್.ಆರ್.ರಾವ್ ಅವರನ್ನು ಕರೆತರಲು ಪ್ರಯತ್ನ ನಡೆಯುತ್ತಿದೆ, 3ನೇ ದಿನ ವಿಚಾರ ಸಂಕಿರಣ ಏರ್ಪಡಿಸಲಾಗಿದೆ ಎಂದು ವಿವರಿಸಿದರು.
ಸ್ವಾಗತ ಸಮಿತಿ ಅಧ್ಯಕ್ಷ ಎಂ.ವಿ. ನಾರಾಯಣಸ್ವಾಮಿ ಮಾತನಾಡಿ, ಸಮ್ಮೇಳನದ ಅಂಗವಾಗಿ ಚಿಂತಾಮಣಿ, ಗೌರಿಬಿದನೂರು ಹಾಗೂ ಕೆಜಿಎಫ್ನಿಂದ ಮೂರು ಜಾಥಾಗಳು ಕೋಲಾರಕ್ಕೆ ಬರಲಿವೆ ಎಂದು ಮಾಹಿತಿ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement