ವಲಸಿಗರು ದೇಶ ಆಳುವುದಕ್ಕೆ ಅವಕಾಶ ಬೇಡ
ಕೋಲಾರ: ಕಾಂಗ್ರೆಸ್ ಪಕ್ಷದ ದ್ವಂದ್ವ ನೀತಿ, ಅವಕಾಶವಾದಿ ರಾಜಕಾರಣದಿಂದಾಗಿ ಭಾರತದ ಗಡಿಗಳಲ್ಲಿ ಚೀನಾ,ಬಂಗಾಳ ಇನ್ನಿತರ ಕಡೆಗಳಿಂದ ವಲಸಿಗರು ನುಸುಳುವಂತಾಗಿದೆ.
ಈ ಜನರನ್ನು ದೇಶದಿಂದ ಹೊರ ಹಾಕಲು ಧೈರ್ಯ ವಿಲ್ಲದೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಆಧಾರ್ ಕಾರ್ಡುಗಳನ್ನು ವಿತರಣೆ ಮಾಡುವ ಮೂಲಕ ದೇಶದ ಭದ್ರತೆ, ಸಮಗ್ರತೆಗೆ ಧಕ್ಕೆ ಉಂಟು ಮಾಡುತ್ತಿದೆ ಎಂದು ಬಿಜೆಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಬಿಬಿಎಂಪಿ ಸದಸ್ಯ ಶಿವಕುಮಾರ್ ಆತಂಕ ವ್ಯಕ್ತಪಡಿಸಿದರು.
ನಗರದಲ್ಲಿ ಶನಿವಾರ ಬಿಜೆಪಿ ಎಸ್ಸಿ ಮೋರ್ಚಾ ಆಯೋಜಿಸಿದ್ದ ಸಭೆಯಲ್ಲಿ ಪ್ರಸ್ತಾವಿಕವಾಗಿ ಮಾತನಾಡಿ, ಈಗಾಗಲೇ ಬೇರೆ ದೇಶಗಳಿಂದ ವಲಸೆ ಬಂದವರು ಅಸ್ಸಾಂ ಸೇರಿದಂತೆ ಇನ್ನಿತರ ಈಶಾನ್ಯ ರಾಜ್ಯಗಳಲ್ಲಿ ಚುನಾವಣೆಗೆ ಸ್ಪರ್ಧಿಸಿ ಅಧಿಕಾರ ಗಟ್ಟಿಸಿಕೊಂಡು ನಮ್ಮ ಜನರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ, ಈ ಜನರು ನಾಳೆ ದೇಶವನ್ನು ಆಳುವಂತಾದರೆ ಭಾರತೀಯರ ಗತಿ ಏನು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ನಿಂದ ದೇಶಕ್ಕೆ ಆಗಿರುವ ತೊಂದರೆ ನಿವಾರಣೆಯಾಗಬೇಕಾದರೆ ನರೇಂದ್ರ ಮೋದಿ ಪ್ರಧಾನಿ ಆಗಬೇಕಾಗಿರುವುದು ಅನಿವಾರ್ಯ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವೈಫಲ್ಯಗಳನ್ನು ಜನರಿಗೆ ತಿಳಿಸುವ ಮೂಲಕ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ಜವಾಬ್ದಾರಿ ಆಗಿದೆ ಎಂದರು.
ಪೋಷಕರು ಮಕ್ಕಳಿಗೆ ದಾರಿದೀಪವಾಗಬೇಕು
ಚಿಕ್ಕಬಳ್ಳಾಪುರ: ಶಿಕ್ಷಕರು ಮತ್ತು ಪೋಷಕರು ಮಕ್ಕಳಿಗೆ ಒಳ್ಳೆಯ ಮಾರ್ಗದರ್ಶನ ನೀಡಿ ದಾರಿದೀಪವಾಗಬೇಕೆಂದು ಶಾಸಕ ಡಾ.ಕೆ. ಸುಧಾಕರ್ ಸಲಹೆ ನೀಡಿದರು.
ತಾಲೂಕಿನ ದಿಬ್ಬೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಉಚಿತ ಸೈಕಲ್ ವಿತರಿಸಿ ಅವರು ಮಾತನಾಡಿದರು. ಮಕ್ಕಳ ಬೌದ್ಧಿಕ ವಿಕಸನಕ್ಕಾಗಿ ಶಿಕ್ಷಕರು ಮತ್ತು ಪೋಷಕರು ಉತ್ತಮ ವಾತಾವರಣವನ್ನು ನಿರ್ಮಿಸಬೇಕು. ಅವರ ಸರ್ವಾಂಗೀಣ ಪ್ರಗತಿಗೆ ಶ್ರಮಿಸಿ ಉತ್ತಮ ಪ್ರಜೆಗಳನ್ನು ರೂಪಿಸಬೇಕು.ಇಂತಹ ಜವಾಬ್ದಾರಿಯನ್ನು ಶಾಲೆಯಲ್ಲಿ ಶಿಕ್ಷಕರು ಮತ್ತು ಮನೆಯಲ್ಲಿ ಪೋಷಕರು ನಿರ್ವಹಿಸಿ ಉತ್ತಮ ಮಾರ್ಗದರ್ಶಕರಾಗಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಮೂರ್ತಿ, ಗ್ರಾಪಂ ಅಧ್ಯಕ್ಷೆ ಗೌರಮ್ಮ, ಉಪಾಧ್ಯಕ್ಷ ನರಸಿಂಹಮೂರ್ತಿ, ಸುಬ್ಬರಾಯಪ್ಪ, ಗ್ರಾಪಂ ಸದಸ್ಯ ಪ್ರಕಾಶ್, ವೆಂಕಟಾಚಾರಿ, ವೆಂಕಟೇಶ್, ಎಸ್ಂಡಿಎಂಸಿ ಉಪಾಧ್ಯಕ್ಷ ರಾಮು ಇದ್ದರು.
ಬಸ್ ಡಿಕ್ಕಿ: ಮೂವರು ಮಹಿಳೆಯರು ಸಾವು
ಮುಳಬಾಗಿಲು/ಕೋಲಾರ: ಮುಳಬಾಗಿಲು ತಾಲೂಕಿನ ಕೊಂಡಪಲ್ಲಿ ಗ್ರಾಮದಲ್ಲಿ ಆಟೋ ರಿಕ್ಷಾಗೆ ಖಾಸಗಿ ಬಸ್ಸು ಡಿಕ್ಕಿ ಹೊಡೆದು ಮೂವರು ಮಹಿಳೆಯರು ಮೃತಪಟ್ಟಿರುವ ಘಟನೆ ಶನಿವಾರ ಸಂಜೆ ನಡೆದಿದೆ.
ಮೃತರನ್ನು ಕೋಲಾರದ ಹನುಮಕ್ಕ, ಮುಳಬಾಗಿಲು ತಾಲೂಕಿನ ಮೋತಕಪಲ್ಲಿಯ ದುರ್ಗಮ್ಮ ಹಾಗೂ ತಾಯಲೂರಿನ ಲಾವಣ್ಯ ಎಂದು ಗುರುತಿಸಲಾಗಿದೆ. ಆಟೋದಲ್ಲಿ 5 ಮಂದಿ ಪ್ರಯಾಣಿಕರಿದ್ದರು. ತೀವ್ರವಾಗಿ ಗಾಯಗೊಂಡಿರುವ ಇನ್ನಿಬ್ಬರನ್ನು ಮುಳಬಾಗಿಲು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಹೆಸರುಗಳು ತಿಳಿದು ಬಂದಿಲ್ಲ. ಆಟೋರಿಕ್ಷಾ ತಾಯಲೂರಿನಿಂದ ಬಂಗಾರಪೇಟೆ ತಾಲೂಕಿನ ಬೇತಮಂಗಲಕ್ಕೆ ಪ್ರಯಾಣಿಕರನ್ನು ತುಂಬಿ ಹೋಗುತ್ತಿದ್ದಾಗ, ಖಾಸಗಿ ಬಸ್ಸು ಕೊಂಡಪಲ್ಲಿಯ ತಿರುವಿನಲ್ಲಿ ಬಸ್ ಚಾಲಕನ ಅಜಾಗರುಕತೆ ಮತ್ತು ಅತಿ ವೇಗದಿಂದ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ದುರಂತ ಸಂಭವಿಸಿದೆ.
ರಸ್ತೆ ಕಾಮಗಾರಿಗೆ ಶಾಸಕ ಸುಧಾಕರ್ರಿಂದ ಚಾಲನೆ
ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದ ಬಿ.ಬಿ. ರಸ್ತೆಯಿಂದ ನಂದಿಗೆ ಸಂಪರ್ಕ ಕಲ್ಪಿಸುವ 1.9 ಕಿ.ಮೀ ಉದ್ದನೆ ರಸ್ತೆಯ ಸುಮಾರು 95 ಲಕ್ಷ ರು. ಮೊತ್ತದ ಡಾಂಬರೀಕರಣ ಕಾರ್ಯಕ್ಕೆ ಶಾಸಕ ಡಾ.ಕೆ. ಸುಧಾಕರ್ ಶನಿವಾರ ಚಾಲನೆ ನೀಡಿದರು.
ಲೋಕೋಪಯೋಗಿ, ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆಯಡಿ ಬೆಂಗಳೂರು-ಬಾಗೇಪಲ್ಲಿಗೆ ತೆರಳುವ ಮಾರ್ಗದಿಂದ ಜನಪ್ರಿಯ ಪ್ರವಾಸಿ ತಾಣವಾದ ನಂದಿಬೆಟ್ಟ, ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಭೋಗನಂದೀಶ್ವರ ದೇವಾಲಯ, ಸರ್.ಎಂ. ವಿಶ್ವೇಶ್ವರಯ್ಯನವರ ಹುಟ್ಟೂರಾದ ಮುದ್ದೇನಹಳ್ಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು, ಸಾಕಷ್ಟು ಶಿಥಿಲಗೊಂಡಿದೆ. ಈ ಮೂಲಕ ಸಾರ್ವಜನಿಕರ ಸಂಚಾರಕ್ಕೆ ತೊಡಕುಂಟಾಗಿದ್ದ ಈ ರಸ್ತೆಯ ಅಭಿವೃದ್ಧಿಯ ಕಾಮಗಾರಿಗೆ ಚಾಲನೆ ನೀಡಲಾಯಿತು.
ಶಾಸಕ ಡಾ.ಕೆ. ಸುಧಾಕರ್ ಮಾತನಾಡಿ, ಕೋಟ್ಯಂತರ ರು. ಖರ್ಚು ಮಾಡಿ ರಸ್ತೆ ಅಭಿವೃದ್ಧಿ ಪಡಿಸಿದರೂ ಒಂದೆರಡು ವರ್ಷದಲ್ಲಿ ರಸ್ತೆ ಹಾಳಾಗಿ ಹೋಗುತ್ತದೆ. ಇದಕ್ಕೆ ಕಾರಣ ಅಗತ್ಯಕ್ಕಿಂತ ಹೆಚ್ಚು ಭಾರ ಹಾಕಿಕೊಂಡು ಸಾಗುವ ವಾಹನಗಳು. ಈ ಭಾಗದಲ್ಲಿ ಜಲ್ಲಿ ಲಾರಿಗಳು ವಿಪರೀತ ಓಡಾಡುತ್ತವೆ. ಇದನ್ನು ಗ್ರಾಮಸ್ಥರು ಗಮನಿಸಿ ಸಂಬಂಧಿಸಿದವರಿಗೆ ದೂರು ನೀಡುವ ಕಾರ್ಯ ಮಾಡಬೇಕು. ಸದ್ಯ ರಸ್ತೆ ನಿರ್ಮಾಣ ಸಂದರ್ಭದಲ್ಲಿಯೂ ಗುಣಮಟ್ಟವನ್ನು ಖುದ್ದು ನಿಂತು ವೀಕ್ಷಿಸಬೇಕು ಎಂದು ಸೂಚಿಸಿದರು. ಜಿಪಂ ಸದಸ್ಯ ಕಂತಳ್ಳಿ ವೆಂಕಟೇಶ್, ತಾಪಂ ಸದಸ್ಯ ನಾರಾಯಣಸ್ವಾಮಿ, ರವಿ, ಜಗದೀಶ್ ಗೌಡ, ಮಂಜುನಾಥ್, ಗುರುಮೂರ್ತಿ ಇದ್ದರು.