ಕಾಟಾಚಾರದ ಕೆಲಸ ಮಾಡಿದರೆ ಕ್ರಮ
ಚಿಕ್ಕಬಳ್ಳಾಪುರ: ಬಹಳಷ್ಟು ಕಡೆ ಅಂಗನವಾಡಿ ಕೇಂದ್ರಗಳು ಸಮರ್ಪಕವಾಗಿ ನಿರ್ವಹಿಸದೇ ಕೇವಲ ಕಾಟಾಚಾರಕ್ಕೆ ಎನ್ನುವಂತಿವೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿದ್ದು ಮಕ್ಕಳ ಹಿತವನ್ನು ಮರೆತು ನಿರ್ಲಕ್ಷ್ಯದಿಂದ ಕೆಲಸ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶಾಸಕ ಡಾ.ಕೆ. ಸುಧಾಕರ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕಿನ ಹಾರೋಬಂಡೆ ಗ್ರಾಪಂ ವ್ಯಾಪ್ತಿಯಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಪ್ರತಿ ಅಂಗನವಾಡಿ ಕೇಂದ್ರಗಳಿಗೆ ಅಧಿಕಾರಿಗಳು ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿ ಲೋಪಗಳು ಉಂಟಾಗದಂತೆ ಎಚ್ಚರವಹಿಸಬೇಕು.ಜನರಿಂದ ದೂರುಗಳು ಬಾರದಂತೆ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಂಬಂಧಪಟ್ಟವರಿಗೆ ಸೂಚನೆ ನೀಡಬೇಕು. ತಾವು ಅನಿರೀಕ್ಷಿತ ಭೇಟಿ ನೀಡಿದ ಸಂದರ್ಭದಲ್ಲಿ ದೂರುಗಳು ಕೇಳಿ ಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ಸರ್ಕಾರದಿಂದ ಸಿಗುತ್ತಿರುವ ವಿವಿಧ ರೀತಿಯ ಸವಲತ್ತುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಪ್ರಾಮಾಣಿಕವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸುವಂತಹ ಮಹತ್ತರವಾದ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳು ಸವಲತ್ತುಗಳು ಸಿಗುವ ಬಗ್ಗೆ ಪ್ರಚಾರವನ್ನು ನೀಡಬೇಕು. ಸಾರ್ವಜನಿಕರಿಗೆ ಅಗತ್ಯವಿರುವ ಮಾಹಿತಿ ಪ್ರತ್ಯೇಕ ಕರಪತ್ರ, ಫ್ಲೆಕ್ಸ್ಗಳ ಮೂಲಕ ಮುದ್ರಿಸಿ ಸಾರ್ವಜನಿಕ ಸ್ಥಳಗಳು, ಸರ್ಕಾರಿ ಕಚೇರಿಗಳು ಹಾಗೂ ಗ್ರಾಪಂ ಕಚೇರಿಗಳ ಮುಂದೆ ಪ್ರದರ್ಶಿಸಬೇಕು ಎಂದು ಸೂಚನೆ ನೀಡಿದರು.
ಪ್ರತಿಯೊಬ್ಬರಿಗೂ ಸೂರು ಕಲ್ಪಿಸುವ ಗುರಿಯನ್ನು ಸರ್ಕಾರ ಹೊಂದಿದ್ದು ಐದು ವರ್ಷ ಅವಧಿಯಲ್ಲಿ ಈ ಕನಸನ್ನು ನನಸಾಗಿಸುವ ಯತ್ನವನ್ನು ಮಾಡಲಿದ್ದೇವೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಅಗತ್ಯ. ಸರ್ಕಾರ ಪ್ರತಿ ಹಳ್ಳಿಯಲ್ಲೂ ಬಡವರಿಗೆ ನಿವೇಶನ ನೀಡುವ ಕಾರ್ಯ ಮಾಡುತ್ತಿದ್ದು, ಶೀಘ್ರವೇ ನಗರ ಪ್ರದೇಶದಲ್ಲೂ ನಿವೇಶನ ಹಂಚಿಕೆ ಪ್ರಕ್ರಿಯೆ ಆರಂಭವಾಗಲಿದೆ ಎಂದ ಅವರು, ಅರ್ಹ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ್ ವಿತರಣೆಯನ್ನು ಬರುವ ತಿಂಗಳ ಒಳಗೆ ಪೂರ್ಣಗೊಳಿಸುವಂತೆ ತಹಸೀಲ್ದಾರ್ ನಟೇಶ್ ಅವರಿಗೆ ಸೂಚಿಸಿದರು. ಸರ್ಕಾರಿ ಒತ್ತುವರಿ ಕ್ಷೇತ್ರದ ಹಲವೆಡೆ ಆಗಿದೆ. ಇದರ ತೆರವಿಗೆ ಕಾನೂನು ಮಾರ್ಗ ಅನುಸರಿಸುವ ಮೊದಲು ಸ್ವಯಂ ಪ್ರೇರಣೆಯಿಂದ ಜನರೇ ಅದನ್ನು ತೆರವುಗೊಳಿಸಿಕೊಡಲು ಮನಸ್ಸು ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಹಾರೋಬಂಡೆ ಗ್ರಾಪಂ ವ್ಯಾಪ್ತಿಯ ಸುತ್ತಮುತ್ತಲಿನ ಗ್ರಾಮಗಳಿಗೆ ಬಸ್ ಸೌಕರ್ಯ ಸಮರ್ಪಕವಾಗಿ ಇಲ್ಲದ ಕಾರಣ ವಿದ್ಯಾರ್ಥಿಗಳು,ಮಹಿಳೆಯರು, ರೈತರು ಸೇರಿದಂತೆ ಗ್ರಾಮಸ್ಥರು ತುಂಬಾ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಅಲ್ಲದೇ ಕುಡಿಯುವ ನೀರಿನ ಸಮಸ್ಯೆಯೂ ಕಾಡುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ನಟೇಶ್, ತಾಪಂ ಅಧ್ಯಕ್ಷ ಕೃಷ್ಣಮೂರ್ತಿ, ಗ್ರಾಪಂ ಅಧ್ಯಕ್ಷ ಮಂಜುನಾಥ್ ಇದ್ದರು.