ಕೆರೆ ಒತ್ತುವರಿ ತೆರವುಗೊಳಿಸಿ
ಕೋಲಾರ ತಾಲೂಕಿನ ಹುತ್ತೂರು ಹೋಬಳಿಗೆ ಸೇರಿದ ಕೆಂಬೋಡಿ ಕೆರೆಯ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿದ್ದು ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಕೆರೆಯನ್ನು ಉಳಿಸಬೇಕು. ಕೆರೆಯ ಸುತ್ತ ಸುಮಾರು 30-40 ಎಕರೆ ಒತ್ತುವರಿಯಾಗಿದೆ. ಬೇನಾಮಿ ವ್ಯಕ್ತಿಯೊಬ್ಬರು ಸುಮಾರು ಒಂದು ವರ್ಷದ ಹಿಂದೆ ಒಂದೆರೆಡು ಎಕರೆ ರೈತರಿಂದ ಕ್ರಯಕ್ಕೆ ಪಡೆದಿದ್ದು, ಅದರ ಪಕ್ಕದಲ್ಲಿರುವ ಕೆಂಬೋಡಿ ಕೆರೆಯಿಂದ ಸೀಸಂದ್ರ ಕೆರೆಗೆ ಹೋಗುವ ಕೆರೆಯ ಕೋಡಿ ಹೋಗುವ ಜಾಗವನ್ನು ಸಂಪೂರ್ಣವಾಗಿ ವಶಪಡಿಸಿಕೊಂಡು, ಕಾಲುವೆಯನ್ನು ಮುಚ್ಚಿಹಾಕಿ ಬೇಲಿಹಾಕಲು ಮುಂದಾಗಿದ್ದಾರೆ. ಊರಿನ ರೈತರು ಪ್ರಶ್ನಿಸಿದರೆ ಇದು ಸರ್ಕಾರಿ ಜಾಗ, ಇದನ್ನು ಕೇಳುವುದಕ್ಕೆ ನೀವ್ಯಾರು ಎಂದು ಬೆದರಿಕೆ ಒಡ್ಡಿರುತ್ತಾರೆ. ಕಾಲುವೆ ನಾಶ ಪಡಿಸಿರುವುದರಿಂದ ಮಳೆ ಬಂದು ಕೆರೆ ಕೋಡಿ ಹೋದರೆ ಹಳ್ಳಿಗಳ ಮೇಲೆ ನೂರು ನುಗ್ಗುವ ಸಂಭವವಿರುತ್ತದೆ. ಕಾಂಪೌಂಡ್ ಹಾಕುವ ನೆಪದಲ್ಲಿ ಸೀಸಂದ್ರ ಕೆರೆಯ ಸುಮಾರು ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದು ಜಿಲ್ಲಾಧಿಕಾರಿಗಳು ಕೆರೆಗಳ ಸಂರಕ್ಷಣೆಗಾಗಿ ಕೆರೆ ಅದಾಲತ್ ಕಾರ್ಯಕ್ರಮ ಆಯೋಜಿಸಬೇಕು.
- ಕೆಂಬೋಡಿ ನಾರಾಯಣಸ್ವಾಮಿ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ, ಕೋಲಾರ ಜಿಲ್ಲೆ.
ಟೊಮೇಟೊ ಮಾರುಕಟ್ಟೆ ರಕ್ಷಿಸಿ
ಬಂಗಾರಪೇಟೆ ಪಟ್ಟಣದಲ್ಲಿ ಕಳೆದ ಐದು ವರ್ಷಗಳ ಹಿಂದೆ ಕೋಟ್ಯಂತ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ ಟೊಮೇಟೊ ಮಾರುಕಟ್ಟೆಯನ್ನು ಇನ್ನೂ ಉದ್ಘಾಟನೆ ಮಾಡಲು ಕಾಲ ಕೂಡಿ ಬಾರದ ಹಿನ್ನೆಲೆಯಲ್ಲಿ ಮಾರುಕಟ್ಟೆಯನ್ನು ಆಲೂಗಡ್ಡೆ ವ್ಯಾಪಾರಿಗಳು ಬಳಸಿಕೊಂಡು ಮಾರುಕಟ್ಟೆಯ ಸೌಂದರ್ಯ ಕೆಡುವಂತೆ ಮಾಡುತ್ತಿದ್ದಾರೆ. ಮಾರುಕಟ್ಟೆಯಿಂದ ಆಲೂಗಡ್ಡೆ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಿಸಲು ಎಪಿಎಂಸಿ ಅಧಿಕಾರಿಗಳು ನಿರ್ಲಕ್ಷ್ಯವಹಿಸಿರುವುದರಿಂದ ಉದ್ಘಾಟನೆಗೆ ಮುನ್ನವೆ ಹಾಳಾಗುತ್ತಿದೆ. ಎಪಿಎಂಸಿ ಅಧ್ಯಕ್ಷ ಮಹೇಶ್ ಜನವರಿ ತಿಂಗಳಲ್ಲಿ ಉದ್ಘಾಟಿಸುವುದಾಗಿ ಭರವಸೆ ನೀಡಿದ್ದರು. ಆದರೆ ಅದೂ ಈಡೇರಿಲ್ಲ. ಮೊದಲು ಮಾರುಕಟ್ಟೆ ಉದ್ಘಾಟಿಸಿ ತಾಲೂಕಿನ ರೈತರು ಬೇರೆಡೆ ತಮ್ಮ ಟೊಮೇಟೊ ಸಾಗಿಸುವುದನ್ನು ತಪ್ಪಿಸುವುದರ ಜೊತೆಗೆ ಸರ್ಕಾರದ ಹಣ ಪೋಲಾಗಂತೆ ನೋಡಿಕೊಳ್ಳಲಿ.
ಅರುಣಲಕ್ಷ್ಮೀಪತಿ, ವಿವೇಕಾನಂದನಗರ.
ಗಂಜಿಗುಂಟೆ ದೊಡ್ಡಕೆರೆ ಒತ್ತುವರಿ
ಮುಳಬಾಗಿಲು ತಾಲೂಕಿನ ಪುರಾಣ ಪ್ರಸಿದ್ಧ ಅವಣಿ ಗ್ರಾಮಕ್ಕೆ ಹೊಂದುಕೊಂಡಿರುವ ಗಂಜಿಗುಂಟೆ ದೊಡ್ಡಕೆರೆಯಲ್ಲಿ 3 ಎಕರೆ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಗಂಜಿಗುಂಟೆ ಗ್ರಾಮದ ಸರ್ವೇ ನಂ 98ರ ದೊಡ್ಡಕೆರೆ 87 ಎಕರೆ ಪ್ರದೇಶದಲ್ಲಿದ್ದು ಇದರಲ್ಲಿ 3ಎಕರೆ ಜಮೀನನ್ನು ಒತ್ತುವರಿ ಮಾಡಿಕೊಂಡು ಕಲ್ಲು ಚಪ್ಪಡಿ ಮುಳ್ಳು ತಂತಿ ಬೇಲಿಯನ್ನು ನಿರ್ಮಾಣ ಮಾಡಲಾಗಿದೆ ಹಿಂದೆ ಕೆರೆ ಅಭಿವೃದ್ಧಿಸಂಘ ಹಾಗೂ ಜಲಾನಯನ ಇಲಾಖೆ ವತಿಯಿಂದ ಸರ್ವೇ ಮಾಡಿ ಕೆರೆಯ ಗಡಿಗುರ್ತಿಸಿ ಅಚ್ಚುಕಟ್ಟು ಮಾಡಲಾಗಿದ್ದು ಈಗ ಅತಿಕ್ರಮಣ ಮಾಡಿ ಕೆರೆಯನ್ನು ಕಬಳಿಸಲು ಗ್ರಾಮದ ಕೆಲ ವ್ಯಕ್ತಿಗಳು ಪ್ರಯತ್ನಿಸುತ್ತಿದ್ದಾರೆ. ಎನ್.ಆರ್.ಇ.ಜಿ ಕಾಮಗಾರಿಯ ತೆಗೆದಿರುವ ಮಣ್ಣನ್ನು ಒತ್ತುವರಿದಾರರು ಸ್ವಂತ ಒತ್ತುವರಿಗೆ ಉಪಯೋಗಿಸಿದ್ದಾರೆ . ಈ ಬಗ್ಗೆ ತಹಸೀಲ್ದಾರ್ ಅವರಿಗೆ ದೂರು ನೀಡಲಾಗಿದ್ದು ಒಂದು ವಾರದಲ್ಲಿ ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕೆರೆ ಅಚ್ಚುಕಟ್ಟುದಾರರು ಮತ್ತು ಗಂಜಿಗುಂಟೆ, ಆವಣಿ, ರಾಮಪುರ ಗ್ರಾಮಸ್ಥರು ಧರಣಿ ನಡೆಸಬೇಕಾಗುತ್ತದೆ. ಅವಣಿ ಗ್ರಾಮದಲ್ಲಿ ಶಿವರಾತ್ರಿ ಹಬ್ಬದಿಂದ 10 ದಿನಗಳ ಕಾಲ ಇಲ್ಲಿನ ಪುರಾತನ ರಾಮಲಿಂಗೇಶ್ವರ ರಥೋತ್ಸವ ಹಾಗೂ ದೇವತಾ ಕಾರ್ಯಗಳು ನಡೆಯುತ್ತವೆ ಈ ಸಂದರ್ಭದಲ್ಲಿ ಜಾನುವಾರು ಜಾತ್ರಮಹೋತ್ಸವದಲ್ಲಿ ಲಕ್ಷಂತರ ಜಾನುವಾರುಗಳು, ಸಾರ್ವಜನಿಕರು ಭಾಗವಹಿಸಲಿದ್ದು ಕುಡಿಯುವ ನೀರಿಗೆ ಈ ಕೆರೆ ಹೆಚ್ಚಿನ ಆಶ್ರಯವಾಗಿತ್ತು ಅದ್ದರಿಂದ ಕೆರೆಯನ್ನು ಸಂರಕ್ಷಣೆ ಬಗ್ಗೆ ಜಿಲ್ಲಾ ಹಾಗೂ ತಾಲೂಕು ಆಡಳಿತ ಕ್ರಮ ಕೈಗೊಂಡು ಒತ್ತುವರಿ ತೆರವುಗೊಳಿಸಬೇಕು.
- ರವಿಶಂಕರ್, ಆವಣಿ ಗ್ರಾಪಂ ಮಾಜಿ ಅಧ್ಯಕ್ಷ,
- ವಿಶ್ವನಾಥ್, ಗ್ರಾಪಂ ಸದಸ್ಯ,
- ನವೀನ್ ಕುಮಾರ್, ಯುವ ಕಾಂಗ್ರೆಸ್ ಮುಖಂಡ.
ಕಸದ ತೊಟ್ಟಿ ಸ್ಥಳಾಂತರಿಸಿ
ಮಾಲೂರು: ಪಟ್ಟಣದ ನೆಹರೂ ಬಡಾವಣೆಯ ಒಂದನೇ ಕ್ರಾಸ್ ರಸ್ತೆಯಲ್ಲಿ ಕಸದ ಡಬ್ಬಿ ಇದ್ದರೂ ಸಾರ್ವಜನಿಕರು ಕಸ ಹೊರಗೆ ಹಾಕುತ್ತಿರುವುದರಿಂದ ಪರಿಸರ ಮಾಲಿನ್ಯ ಆಗುತ್ತಿದ್ದು, ಸಮೀಪ ಇರುವ ಪ್ಲೇ ಹೋಮ್ ಹಾಗೂ ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ಕೆಟ್ಟ ವಾಸನೆ ಅನುಭವಿಸುವಂತಾಗಿದೆ. ಈ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಅಲ್ಲದೇ ಸರ್ಕಾರಿ ಬಾಲಕಿಯರ ಕಾಲೇಜು ಕೆಟ್ಟ ವಾಸನೆಯಿಂದ ಪರಿಸರ ಮಾಲಿನ್ಯವುಂಟಾಗುತ್ತಿದ್ದು, ಕೂಡಲೇ ಪುರಸಭೆ ಅಧಿಕಾರಿಗಳು ಗಮನಹರಿಸಬೇಕು.
ಮುನಿಸ್ವಾಮಿ, ಪ್ಲಾಸ್ಟಿಕ್ ನಿರ್ಮೂಲನ ಸಮಿತಿ ಅಧ್ಯಕ್ಷ
ರಾಜಕಾಲುವೆ ಒತ್ತುವರಿ ತೆರವುಗೊಳಿಸಿ
ಬಂಗಾರಪೇಟೆ ಪಟ್ಟಣದ ರಾಜಕಾಲುವೆಗಳು ಈಗ ಸಂಪೂರ್ಣವಾಗಿ ಒತ್ತುವರಿಯಾಗಿದ್ದರೂ ಸಂಬಂಧಿಸಿದ ಇಲಾಖೆ ಅಥವಾ ಜನಪ್ರತಿನಿಧಿಗಳು ರಕ್ಷಿಸುವ ಕಾರ್ಯಕ್ಕೆ ಮುಂದಾಗಿಲ್ಲ. ಪಟ್ಟಣದ ದೊಡ್ಡಕೆರೆ ರಾಜಕಾಲುವೆಯನ್ನು ಕೆಲವರು ಪ್ರಭಾವಿ ವ್ಯಕ್ತಿಗಳು ಆಕ್ರಮಿಸಿಕೊಂಡು ಮನೆಗಳನ್ನು ಕಟ್ಟಿಕೊಂಡಿದ್ದರೂ ಅವರನ್ನು ತೆರವುಗೊಲಿಸುವ ಕಾರ್ಯ ಸಾಗಿಲ್ಲ, ಇದರಿಂದ ಮಳೆ ಬಂದು ಕೆರೆ ತುಂಬಿದರೆ ಹೊರ ಬರುವ ನೀರು ಸರಾಗವಾಗಿ ಕಾಲುವೆಯಲ್ಲಿ ಹರಿಯಲು ಸಾಧ್ಯವಾಗದೆ ರಸ್ತೆಗಳು ಹಾಗೂ ವಸತಿ ಗೃಹಗಳ ಮೇಲೆ ಹರಿಯುವುದು. ಈ ಹಿಂದೆ ಒಮ್ಮೆ ಈ ಘಟನೆ ಮರುಕಳಿಸಿದ್ದು ಮತ್ತೆ ಘಟನೆ ಮರುಕಳಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಂಡು ಒತ್ತುವರಿಯಾಗಿರುವ ರಾಜಕಾಲುವೆಯನ್ನು ತೆರವುಗೊಳಿಸಿ ತುಂಬಿರುವ ಹೂಳನ್ನು ಎತ್ತಿ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು.
ಲಲಿತ ರಮೇಶ್, ಬಂಗಾರಪೇಟೆ ನಿವಾಸಿ.