ಜನಮನ ಸೂರೆಗೊಂಡ ಫಲಪುಷ್ಪ ಪ್ರದರ್ಶನ
ಚಿಕ್ಕಬಳ್ಳಾಪುರ: ತಾಲೂಕಿನ ಹೊರ ವಲಯದ ನಂದಿ ಕ್ರಾಸ್ ಸಮೀಪದ ತೋಟಗಾರಿಕೆ ಕ್ಷೇತ್ರದಲ್ಲಿ ಕೈಗೊಂಡಿರುವ ಫಲಪುಷ್ಪ ಪ್ರದರ್ಶನ ಆಕರ್ಷಕವಾಗಿ ಮೂಡಿಬಂದಿದೆ. ರೈತರಿಗೆ ಕೃಷಿಯ ಹೊಸ ತಂತ್ರಜ್ಞಾನ, ಅಭಿವೃದ್ಧಿ ಸೇರಿದಂತೆ ವಿವಿಧ ವಿಷಯಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಸಹಕಾರಿಯಾಗಿದೆ.
ಜಿಲ್ಲಾಡಳಿತ, ಜಿಪಂ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಹಾಗೂ ನಂದಿ ಉದ್ಯಾನ ಕಲಾ ಸಂಘದ ಸಹಯೋಗದಲ್ಲಿ ಜ.26 ರಿಂದ 28 ರವರೆಗೆ ಆಯೋಜಿಸಿರುವ ಮೂರು ದಿನಗಳ ಕೃಷಿ ಮಾಹಿತಿ ಆಂದೋಲನ ಮತ್ತು ಫಲಪುಷ್ಪ ಪ್ರದರ್ಶನಕ್ಕೆ ಭಾನುವಾರ ಚಾಲನೆ ನೀಡಲಾಗಿದೆ.
ಪ್ರದರ್ಶನದಲ್ಲಿ ಬಗೆಬಗೆಯ ಆಕರ್ಷಕ ಹೂಗಳು ಮತ್ತು ತರಕಾರಿಗಳಿಂದ ಮಾಡಿದ ವಿವಿಧ ಕಲಾಕೃತಿಗಳು, ಅದರಲ್ಲೂ ಹೂವಿನಿಂದ ಮಾಡಿದ ನಂದಿ, ರಾಷ್ಟ್ರೀಯ ಪ್ರಾಣಿ ಹುಲಿ ಸೇರಿದಂತೆ ಅಲಂಕಾರಿಕ ವಸ್ತುಗಳು ಗಮನ ಸೆಳೆಯುವ ರೀತಿಯಲ್ಲಿವೆ. ಟೆರೇಸ್ ಗಾರ್ಡನ್, ಪಾಲಿ ಹೌಸ್ ಆಕರ್ಷಕವಾಗಿದ್ದು ರೇಷ್ಮೆ, ಮೀನುಗಾರಿಕೆ, ಪಶುಸಂಗೋಪನೆ, ಕೃಷಿ ಮುಂತಾದ ಇಲಾಖೆಗಳಿಗೆ ಸಂಬಂಧಿಸಿದ ಮಳಿಗೆಗಳು, ಖಾಸಗೀ ಕಂಪನಿಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳು ತೆರೆದಿರುವ ಕೇಂದ್ರಗಳು ಉಪಯುಕ್ತರವಾಗಿದ್ದು ಮಾಹಿತಿಯ ಜೊತೆಗೆ ಪ್ರದರ್ಶನ ಒಳ್ಳೆಯ ಮನರಂಜನೆ ನೀಡುತ್ತವೆ.
ಫಲಪುಷ್ಪ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಡಾ.ಕೆ. ಸುಧಾಕರ್, ನೀರಿನ ಅಭಾವದ ನಡುವೆ ತಾಂತ್ರಿಕತೆ ಬಳಸಿಕೊಂಡು ಕಡಿಮೆ ನೀರು ಬಳಸಿ ಹೆಚ್ಚು ಬೆಳೆಯುವ ಪ್ರೌಢಿಮೆಯನ್ನು ಜಿಲ್ಲೆಯ ರೈತರು ಬೆಳೆಸಿಕೊಂಡು ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಲ್ಪನೆಗೂ ಮೀರಿ ಅತ್ಯುತ್ತಮವಾಗಿ ಮೇಳ ಮೂಡಿ ಬಂದಿದ್ದು ರೈತ ಸಮುದಾಯಕ್ಕೆ ಸೇರಿದಂತೆ ಜನರಿಗೆ ಈ ಮೂರು ದಿನದ ಪ್ರದರ್ಶನ ಅತ್ಯಂತ ಉಪಯುಕ್ತವಾಗಿದೆ. ಈ ಮೇಳ ಕೇವಲ ಪ್ರದರ್ಶನ ಮತ್ತು ಮನರಂಜನೆಗೆ ಮಾತ್ರ ಸೀಮಿತವಾಗಬಾರದು. ಈ ಮೂಲಕ ರೈತರಿಗೆ ಹೊಸ ಉಪಯುಕ್ತ ಮಾಹಿತಿ ನೀಡಿ ಅರಿವು ಮೂಡಿಸುವ ಕೆಲಸವನ್ನು ಮಾಡಬೇಕೆಂದರು.
ಪ್ರದರ್ಶನದಲ್ಲಿ ಸಾರ್ವಜನಿಕರಿಗೆ ಸಮರ್ಪಕವಾಗಿ ಮಾಹಿತಿ ನೀಡುವ, ಅದರಲ್ಲೂ ರೈತರಿಗೆ ಅನುಕೂಲವಾಗುವ ಬೆಳೆ ಪದ್ಧತಿ, ಕೃಷಿ ಉಪಕರಣಗಳ ಬಳಕೆ, ಸಮಯಕ್ಕೆ ತಕ್ಕ ಸಲಹೆ ನೀಡುವ ಕಾರ್ಯವನ್ನು ಪರಿಣಾಮಕಾರಿಯಾಗಿ ಮಾಡಬೇಕು. ರಾಷ್ಟ್ರೀಯ ಕೃಷಿ ಮಿಷನ್ನಿಂದ ದೊರೆಯುವ ಕೋಟ್ಯಂತರ ರು.ಅನುದಾನವನ್ನು ರೈತರಿಗೆ ಪ್ರಾಮಾಣಿಕವಾಗಿ ತಲುಪಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವಿಬಿಭಜಿತ ಕೋಲಾರ ಜಿಲ್ಲೆಯ ರೈತರು ರೇಷ್ಮೆ, ಹಾಲು ಉತ್ಪಾದನೆ ಮತ್ತು ತರಕಾರಿ ಬೆಳೆಗಳನ್ನು ಬೆಳೆಯುವಲ್ಲಿ ಹೆಸರನ್ನು ಮಾಡಿದ್ದು ಇದನ್ನು ಮುಂದುವರೆಸಿಕೊಂಡು ಹೋಗಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಗತಿಪರ ರೈತರು, ಕೃಷಿ ವಿಜ್ಞಾನಿಗಳೊಂದಿಗೆ ನಿರಂತರವಾಗಿ ಉತ್ತಮ ಬಾಂಧವ್ಯ ಬೆಳೆಸಿಕೊಂಡು ರೈತರು ಪ್ರಗತಿ ಸಾಧಿಸಬೇಕೆಂದರು. ಜಿಪಂ ಅಧ್ಯಕ್ಷ ಚಿನ್ನಪ್ಪ ಮಾತನಾಡಿ, ತಂತ್ರಜ್ಞಾನದಲ್ಲಿ ಹೇಗೆ ಮುಂದುವರೆಯಬೇಕೆಂಬುದನ್ನು ತಿಳಿದುಕೊಳ್ಳಬೇಕು. ಸರ್ಕಾರ ನೀಡುತ್ತಿರುವ ಸಹಾಯಧನ ರೈತರು ಸದುಪಯೋಗಪಡಿಸಿಕೊಳ್ಳಬೇಕು. ಯಾವುದೇ ಸಮಸ್ಯೆಗಳು ಎದುರಾದರೂ ರೈತರು ದೃತಿಗೆಡದೆ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುತ್ತ ಅಭಿವೃದ್ಧಿ ಹೊಂದಬೇಕೆಂದರು. ಕೃಷಿ ಇಲಾಖೆಯಿಂದ ಫಲಾನುಭವಿಗಳಿಗೆ ಚೆಕ್ ಮತ್ತು ಅಂಗನವಾಡಿಗಳಿಗೆ ಸಸಿಗಳನ್ನು ವಿತರಿಸಿದರು. ಜಿಪಂ ಸಿಇಒ ನೀಲಾ ಮಂಜುನಾಥ್, ಕೃಷ್ಣಪ್ಪ, ಗಾಯಿತ್ರಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎ. ರಾಮದಾಸ್ ಇದ್ದರು.