ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜಿಲ್ಲೆಗೆ 4.5ಕೋಟಿ ಬಿಡುಗಡೆ

Rashmi Kasaragodu
Updated On : 27 Jan 2014, 1:44 am

ಕೋಲಾರ: ತೋಟಗಾರಿಕೆ ಅಭಿವೃದ್ಧಿಗಾಗಿ ರಾಷ್ಟ್ರೀಯ ತೋಟಗಾರಿಕಾ ಮಿಷನ್ ನಿಂದ 4.5 ಕೋಟಿ ರು. ಬಿಡುಗಡೆ ಮಾಡಲಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ತಿಳಿಸಿದರು.
ನಗರದ ತೋಟಗಾರಿಕೆ ಇಲಾಖೆ ನರ್ಸರಿಯಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಫಲಪುಷ್ಪ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿ, ನೀರಿನ ಸಮಸ್ಯೆಯ ನಡುವೆಯೂ ಜಿಲ್ಲೆಯ ರೈತರು ತೋಟಗಾರಿಕೆ ಬೆಳೆಗಳನ್ನು ಬೆಳೆದು ಮಾದರಿ ಆಗಿದ್ದಾರೆ. ರೈತರು ಹನಿ ಮತ್ತು ತುಂತುರು ನೀರಾವರಿ ಯೋಜನೆ ಪಡೆಯಲು ರಾಜ್ಯ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲು ಬದ್ಧವಾಗಿದೆ ಎಂದರು.
ಇಲಾಖೆ ನೀಡುತ್ತಿರುವ ವಿಶೇಷ ಮಾಹಿತಿ ಫಲಪುಷ್ಪ ಪ್ರದರ್ಶನಕ್ಕೆ ಸೀಮಿತವಾಗದೇ ರೈತರ ಮನೆ ಬಾಗಿಲಿಗೆ ತಲುಪಲಿ, ಮತ್ತಷ್ಟು ತೋಟಗಾರಿಕಾ ಉತ್ಪನ್ನಗಳನ್ನು ಬೆಳೆಯಲು ಉತ್ತೇಜನ ಸಿಗುವಂತಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ನೀರಿನ ಆಸರೆಯಿಲ್ಲದ ಕೋಲಾರ ಜಿಲ್ಲೆಗೆ ತೋಟಗಾರಿಕೆಯೇ ಜೀವಾಳವಾಗಿದ್ದು, ಸರ್ಕಾರ ಮತ್ತಷ್ಟು ಉತ್ತೇಜನ ನೀಡಲು ಮುಂದಾಗಬೇಕು, ಈ ಸಾಲಿನ ಬಜೆಟ್ ಕೋಲಾರಕ್ಕೆ ವಿಶೇಷ ಪ್ಯಾಕೇಜ್ ನೀಡಬೇಕೆಂದು ಕೋರಿದರು.
ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಡಿ.ಎಲ್.ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ಅಂತರ್ಜಲ ಕುಸಿತ ನಡುವೆಯೂ ರೈತರು ಕಷ್ಟಪಟ್ಟು ವ್ಯವಸಾಯ ಮಾಡುತ್ತಿದ್ದಾರೆ, ಆದರೆ ಸರ್ಕಾರ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶೂನ್ಯ ಬಡ್ಡಿದರದಲ್ಲಿ ಸಾಲಕ್ಕಾಗಿ ಕೇವಲ 18.33 ಕೋಟಿ ನೀಡಿರುವುದು ಸಾಲದು ಎಂದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕನಿಷ್ಠ 400 ಕೋಟಿಯನ್ನು ಸರ್ಕಾರ ನೀಡಬೇಕಾಗಿತ್ತು, ಆದರೆ, ಸರ್ಕಾರಕ್ಕೆ ಬಯಲು ಸೀಮೆ ಪ್ರದೇಶಗಳ ಮೇಲೆ ಕಾಳಜಿಯಿಲ್ಲ ಎಂದು ಆರೋಪಿಸಿದರು.
 ಜಿಲ್ಲಾಧಿಕಾರಿ ಡಿ.ಕೆ. ರವಿ, ಎಸ್ಪಿ ರಾಮನಿವಾಸ್ ಸಪಟ್, ಜಿಪಂ ಸಿಇಒ ವಿನೋತ್ ಪ್ರಿಯ, ಎಎಸ್ಪಿ ಜಮೀಲ್, ವಿಭಾಗಾಧಿಕಾರಿ ಮಂಜುನಾಥ್, ಜಿಪಂ ಅಧ್ಯಕ್ಷೆ ಅಲುವೇಲಮ್ಮ, ಜಿಪಂ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ಆನಂದ್, ತಾಪಂ ಅಧ್ಯಕ್ಷೆ ಭಾಗ್ಯಲಕ್ಷ್ಮೀ ನಾರಾಯಣಮೂರ್ತಿ, ಉಪಾಧ್ಯಕ್ಷೆ ಸರಸ್ವತಿ, ಹಾಪ್ ಕಾಮ್ಸ್ ಮಾಜಿ ಅಧ್ಯಕ್ಷ ಅರಹಳ್ಳಿ ಗೋಪಾಲಕೃಷ್ಣ, ಜಿಪಂ ಉಪಕಾರ್ಯದರ್ಶಿ ಬದನೂರು, ತೋಟಗಾರಿಕಾ ವಿದ್ಯಾಲಯದ ಡೀನ್ ನಾಚೇಗೌಡ, ಕೃಷಿ ಜಂಟಿ ನಿರ್ದೇಶಕ ಚಿಕ್ಕಣ್ಣ, ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಎನ್. ಗೋಪಾಲ್, ಮುಖಂಡರಾದ ಪ್ರಸಾದ್ ಬಾಬು,  ಜಯದೇವ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement