ಮಕ್ಕಳ ಭವಿಷ್ಯ ಮಸುಕಾಗದಂತೆ ಎಚ್ಚರವಹಿಸಿ
ಕೋಲಾರ: ಶಾಲೆಗೆ ಬರುವ ಮಕ್ಕಳ ಭವಿಷ್ಯದ ಕಡೆ ಶಿಕ್ಷಕರು ಗಮನ ನೀಡದಿದ್ದರೆ ಮಕ್ಕಳ ಭವಿಷ್ಯದ ಜೊತೆಗೆ ದೇಶದ ಭವಿಷ್ಯ ಮುಸುಕಾಗುತ್ತದೆ ಎಂದು ಶಾಸಕ ಕೆ.ಆರ್. ರಮೇಶ್ಕುಮಾರ್ ತಿಳಿಸಿದರು.
ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಮದನಹಳ್ಳಿಯ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಶುಕ್ರವಾರ ಸೌಹಾರ್ದ ಭೇಟಿ ನೀಡಿದ್ದ ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.
ಮಕ್ಕಳಲ್ಲಿ ಜಾತಿ ಸೋಂಕು ಇರುವುದಿಲ್ಲ, ಶಾಲೆಗಳಲ್ಲಿ ಮಕ್ಕಳ ಬಗ್ಗೆ ಎಚ್ಚರವಹಿಸದಿದ್ದರೆ ಜಾತಿಯ ಸೋಂಕು ತಾಕುವುದರಿಂದ ಇವರ ಭವಿಷ್ಯ ಹಾಳಾಗುತ್ತದೆ, ಮಕ್ಕಳ ಮನಸ್ಸಿನ ಮೇಲೆ ಯಾವುದೇ ರೀತಿಯ ದುಷ್ಪರಿಣಾಮ ಉಂಟಾಗದಂತೆ ಶಿಕ್ಷಕರು ಎಚ್ಚರವಹಿಸಬೇಕೆಂದರು.
ಗ್ರಾಮೀಣ ಪ್ರದೇಶದಿಂದ ಸರ್ಕಾರಿ ಶಾಲೆಗಳಿಗೆ ಬರುವ ಮಕ್ಕಳಲ್ಲಿ ಪ್ರತಿಭೆ ಇರುತ್ತದೆ, ಅದನ್ನು ಗುರುತಿಸಿ ಪ್ರೋತ್ಸಾಹ ನೀಡಿದ್ದರೆ ಮಕ್ಕಳ ಭವಿಷ್ಯ ಕಮರಿ ಹೋಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸರ್ಕಾರಿ ಶಾಲೆಗಳಿಗೆ ಹೆಚ್ಚಾಗಿ ಸೇರುವುದು ಬಡ ಮಕ್ಕಳು, ಸರ್ಕಾರ ನಿಮಗಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ನಿಮ್ಮ ಪೋಷಕರ ಕಷ್ಟ ಅರಿತು ಚನ್ನಾಗಿ ಓದಿ, ಉತ್ತಮ ಭವಿಷ್ಯ ರೂಪಿಸಿಕೊಂಡಲ್ಲಿ ಅದರಿಂದ ಮುಂದೆ ಉತ್ತಮ ಜೀವನ ಕಾಣಲು ಸಾಧ್ಯವಾಗುತ್ತದೆ ಎಂದರು.
ನನಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಅಂದ್ರೆ ಸಿಟ್ಟು. ಇದಕ್ಕೆ ಕಾರಣ ಅಲ್ಲಿನ ಶಿಕ್ಷಣ ದುಬಾರಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದಲ್ಲಿ ಬಡವರು ಸಾಲ ಮಾಡಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹೋಗುವುದು ತಪ್ಪುತ್ತದೆ ಎಂದರು.
ಮದನಹಳ್ಳಿಯ ಸರ್ಕಾರಿ ಶಾಲೆಯಲ್ಲಿನ ಸಮಸ್ಯೆಗಳು ನಿವಾರಣೆಗಾಗಿ ಕ್ರಮ ಕೈಗೊಳ್ಳುತ್ತೇನೆ. ಹಾಸ್ಟೆಲ್, ಶೌಚಾಲಯ, ತರಗತಿ ಕೊಠಡಿಗಳು, ಪಿಯು ವಿದ್ಯಾರ್ಥಿಗಳಿಗೆ ವಿಜ್ಞಾನ ವಿಭಾಗ, ಸೇರಿದಂತೆ ಅಗತ್ಯ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಿಂದ ಮಂಜೂರಾತಿ ಪಡೆದು ಅದಷ್ಟು ಶೀಘ್ರ ಕಾಮಗಾರಿ ಆರಂಭಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲ್ಕುಮಾರ್, ಜಿಪಂ ಮಾಜಿ ಅದ್ಯಕ್ಷ ಜನ್ನಘಟ್ಟ ವೆಂಕಟಮುನಿಯಪ್ಪ, ಮುಖಂಡರಾದ ತಿಮ್ಮರಾಯಪ್ಪ, ಮಂಜುನಾಥ್, ತಾಪಂ ಸದಸ್ಯ ಮಂಜುನಾಥ್, ಎಸ್.ಡಿ.ಎಂ.ಸಿಯ ನರಸಿಂಹನಾಯಕ್, ಅಮರನಾಥ್, ಎಪಿಎಂಸಿ ಸದಸ್ಯ ಕೃಷ್ಣಪ್ಪ, ಶೇಷಾದ್ರಿ ಗೋಪಾಲನ್ ಇದ್ದರು. ಶಾಲೆಯ ಉಪ ಪ್ರಾಂಶುಪಾಲ ಸುರೇಶ್ ಸ್ವಾಗತಿಸಿ, ಪ್ರಾಂಶುಪಾಲ ಎಂ.ಎಸ್. ಸೂರ್ಯನಾರಾಯಣ ವಂದಿಸಿ, ಶ್ರೀರಾಮರೆಡ್ಡಿ ನಿರೂಪಿಸಿದರು.